ಚುನಾವಣಾ ಅಕ್ರಮ: ಆಕ್ಷೇಪಣೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ಕಾಲಾವಕಾಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14ರಂದು ಸಮನ್ಸ್‌ ನೀಡಲಾಗಿದೆ. ಆಗಸ್ಟ್‌ 2ರಂದು ವಕಾಲತ್ತು ಹಾಕಲಾಗಿದ್ದು, ಸಮನ್ಸ್ ನೀಡಿದ ದಿನದಿಂದ ಲಿಖಿತ ಆಕ್ಷೇಪಣೆ ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿರುವ ನ್ಯಾಯಾಲಯ.
C M Siddaramaiah
C M Siddaramaiah

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಅನರ್ಹಗೊಳಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಕಾಲಾವಕಾಶ ನೀಡಿದೆ.

ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣಕ್ಕೆ ಸಂಬಂದಿಸಿದಂತೆ ಆಗಸ್ಟ್‌ 14ರಂದು ಸಮನ್ಸ್‌ ನೀಡಲಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಆಗಸ್ಟ್‌ 2ರಂದು ವಕಾಲತ್ತು ಹಾಕಲಾಗಿದ್ದು, ಸಮನ್ಸ್ ನೀಡಿದ ದಿನದಿಂದ ಲಿಖಿತ ಆಕ್ಷೇಪಣೆ ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ. ಈ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಲಿಖಿತ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

Also Read
ಗ್ಯಾರಂಟಿ ಯೋಜನೆಗಳು ಆಮಿಷಕ್ಕೆ ಸಮ, ಚುನಾವಣಾ ಅಕ್ರಮ: ಸಿದ್ದರಾಮಯ್ಯ ಅನರ್ಹತೆ ಕೋರಿ ಹೈಕೋರ್ಟ್‌ನಲ್ಲಿ ಪ್ರಕರಣ

“ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 123 (1) ಪ್ರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು ಲಂಚಕ್ಕೆ ಸಮನಾಗಿದೆ. ಸೆಕ್ಷನ್‌ 123 (2) ಪ್ರಕಾರ ಇದು ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್‌ 123 (4)ರ ಪ್ರಕಾರ ಅದನ್ನು ಪ್ರಚಾರ ಮಾಡುವುದೂ ಅಪರಾಧ. ಅಲ್ಲದೇ, ಇದನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದಿರುವುದು ಸೆಕ್ಷನ್‌ 123 (6)ರ ಅಪರಾಧವಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com