ಚುನಾವಣಾ ಅಕ್ರಮ ಪ್ರಕರಣ: ಸಂಸದ ಡಿ ಕೆ ಸುರೇಶ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ವಿಶೇಷ ನ್ಯಾಯಾಲಯಕ್ಕೆ 2020ರ ಸೆಪ್ಟೆಂಬರ್‌ 1ರಂದು ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ್ದ ನ್ಯಾಯಾಲಯವು 2021ರ ಸೆ. 21ರಂದು ಡಿ ಕೆ ಸುರೇಶ್‌ಗೆ ಸಮನ್ಸ್ ಜಾರಿಗೊಳಿಸಿತ್ತು.
Karnataka HC and D K Suresh
Karnataka HC and D K Suresh

ಕಳೆದ ಸಂಸತ್ ಚುನಾವಣೆ ವೇಳೆ ಶಿವಮೊಗ್ಗದಲ್ಲಿ ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆಯದೇ ತೆರೆದ ವಾಹನದಲ್ಲಿ ಪ್ರಚಾರ ಮತ್ತು ಮೆರವಣಿಗೆ ನಡೆಸಿದ ಆರೋಪದ ಸಂಬಂಧ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ವಿರುದ್ಧದ ದೂರು ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿ ಆದೇಶಿಸಿದೆ.

ತಮ್ಮ ವಿರುದ್ಧದ ದೂರು ಮತ್ತು ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಿ ಕೆ ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಪೀಠವು ಪುರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಏಪ್ರಿಲ್‌ 20ರಂದು ಸಂಜೆ 5 ಗಂಟೆ ಸಮಯದಲ್ಲಿ ಹಿರಿಯೂರು ಬಯಲು ರಂಗಮಂದಿರ ಎದುರು ಡಿ ಕೆ ಸುರೇಶ್ ಅವರು ತೆರೆದ ವಾಹನದ ಮೂಲಕ ಚುನಾವಣಾ ಪ್ರಚಾರ ಮತ್ತು ಮೆರವಣಿಗೆ ನಡೆಸುತ್ತಿದ್ದರು. ಅದಕ್ಕಾಗಿ ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಚಕ್ಷಣಾ ದಳದ ಅಧಿಕಾರಿಯಾಗಿದ್ದ ಎಂ ಈಶ್ವರಪ್ಪ ಅವರು ಭದ್ರಾವತಿ ಪೇಪರ್ ಟೌನ್ ಠಾಣೆಗೆ ದೂರು ನೀಡಿದ್ದರು.

ಈ ಮಾಹಿತಿಯನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ರವಾನಿಸಿದ್ದರು. ನಂತರ ನ್ಯಾಯಾಲಯವು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಅದರಂತೆ ಗಂಭೀರ ಸ್ವರೂಪವಲ್ಲದ ಅಪರಾಧ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2020ರ ಸೆಪ್ಟೆಂಬರ್‌ 1ರಂದು ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು 2021ರ ಸೆಪ್ಟೆಂಬರ್‌ 21ರಂದು ಡಿ ಕೆ ಸುರೇಶ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್‌ ಮತ್ತು ಪ್ರಕ್ರಿಯೆ ರದ್ದುಕೋರಿ ಡಿ ಕೆ ಸುರೇಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಸಂಸದ ಸುರೇಶ್‌ ಅವರನ್ನು ವಕೀಲ ಅರ್ನವ್‌ ಬಾಗಲವಾಡಿ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ವಕೀಲ ಮಹೇಶ್‌ ಶೆಟ್ಟಿ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com