ಚುನಾವಣಾ ಅಕ್ರಮ: ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ನಿಪ್ಪಾಣಿಯ ಜಾಮದಾರ್ ಪ್ಲಾಟ್, ಲೇನ್ ನಂಬರ್ 1ರ ಬಳಿ ಕೆಲ ವ್ಯಕ್ತಿಗಳು ಜಮಾಯಿಸಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಚುನಾವಣಾಧಿಕಾರಿ 2023ರ ಮೇ 10ರಂದು ದೂರು ನೀಡಿದ್ದರು.
Shashikala Jolle and Karnataka HC
Shashikala Jolle and Karnataka HC

ಕಳೆದ ವಿಧಾನಸಭೆ ಚುನಾವಣೆ ವೇಳೆ ಅಕ್ರಮ ನಡೆಸಿದ ಆರೋಪದ ಮೇಲೆ ನಿಪ್ಪಾಣಿ ಶಾಸಕಿ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ದಾಖಲಿಸಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.

ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು ಪ್ರಕರಣ ಸಂಬಂಧ ಶಶಿಕಲಾ ಜೊಲ್ಲೆ ವಿರುದ್ಧ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್, ಅದನ್ನು ಆಧರಿಸಿ ತನಿಖೆ ನಡೆಸಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಮತ್ತು ಪ್ರಕರಣ ಸಂಬಂಧ ನಿಪ್ಪಾಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸಿದೆ. ಅಲ್ಲದೇ, ಅರ್ಜಿದಾರ ಆರೋಪಿಯನ್ನು ಪ್ರಕರಣದಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿದೆ.

ಶಶಿಕಲಾ ಜೊಲ್ಲೆ ಅವರನ್ನು ಪ್ರತಿನಿಧಿಸಿದ್ದ ವಕೀಲ ಶಿವರಾಜ್ ಎಸ್. ಬಳ್ಳೊಳಿ, ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರು ಚುನಾವಣಾ ಏಜೆಂಟ್ ಬಳಿ 10 ಸಾವಿರ ರೂಪಾಯಿ ನಗದು ಸಿಕ್ಕಿದ್ದ ಮಾತ್ರಕ್ಕೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿಲ್ಲ. ಹಣ ಯಾರಿಗೆ ಕೊಡಲಾಗುತ್ತಿತ್ತು ಎಂದೂ ಗೊತ್ತಿಲ್ಲ. ಹಣ ಪತ್ತೆಯಾದ ಸ್ಥಳದಲ್ಲಿ ಹಣ ಪಡೆದುಕೊಳ್ಳಲು ಬಂದವರು ಯಾರೂ ಇರಲಿಲ್ಲ. ಆರೋಪ ಸಾಬೀತುಪಡಿಸುವಂತ ಅಂಶಗಳು ಎಫ್‌ಐಆರ್‌ನಲ್ಲಿಲ್ಲ. ಪ್ರಕರಣ ದಾಖಲಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಪೀಠಕ್ಕೆ ಮನವವರಿಕೆ ಮಾಡಿಕೊಟ್ಟರು.

Also Read
ಅನರ್ಹರ ನೇಮಕಾತಿಗೆ ಸಚಿವೆ ಶಶಿಕಲಾ ಜೊಲ್ಲೆ ಶಿಫಾರಸ್ಸು: ಹೈಕೋರ್ಟ್‌ನಿಂದ ರಾಜ್ಯ ಸರ್ಕಾರದ ಆದೇಶ ವಜಾ

ನಿಪ್ಪಾಣಿಯ ಜಾಮದಾರ್ ಪ್ಲಾಟ್, ಲೇನ್ ನಂಬರ್ 1ರ ಬಳಿ ಕೆಲ ವ್ಯಕ್ತಿಗಳು ಜಮಾಯಿಸಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಚುನಾವಣಾಧಿಕಾರಿ 2023ರ ಮೇ 10ರಂದು ದೂರು ನೀಡಿದ್ದರು. ಅದನ್ನು ಆಧರಿಸಿ ನಿಪ್ಪಾಣಿ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಸೇರಿದ್ದ ಜನರ ಬಳಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸೇರಿದ್ದ ಕೆಲವು ಚುನಾವಣಾ ಸಾಮಗ್ರಿ, ವ್ಯಕ್ತಿಯೊಬ್ಬರ ಬಳಿ 10 ಸಾವಿರ ರೂಪಾಯಿ ಸಿಕ್ಕಿತ್ತು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ಪಡೆದು ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಿಪ್ಪಾಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com