ಚುನಾವಣಾ ಅಕ್ರಮ: ಕಾಂಗ್ರೆಸ್‌ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ಮೈಸೂರು ತಾಲ್ಲೂಕಿನ ಬೋಗಾದಿ ಗ್ರಾಮದ ಸರ್ವೇ ಸಂಖ್ಯೆ 78/5 ಸೇರಿ ಕೆಲ ಸರ್ವೆ ನಂಬರ್‌ಗಳಲ್ಲಿರುವ ಜಮೀನುಗಳ ಮಾಲೀಕತ್ವವನ್ನು ರಮೇಶ್ ಬಂಡಿಸಿದ್ದೇಗೌಡ ಮುಚ್ಚಿಟ್ಟಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
Congress MLA Ramesha Bandisiddegowda
Congress MLA Ramesha Bandisiddegowda
Published on

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಆಸ್ತಿ ಮತ್ತು ಆರ್ಥಿಕ ಹೊಣೆಗಾರಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಮರೆಮಾಚಿ ಸುಳ್ಳು ವಿವರಗಳನ್ನು ನೀಡಿದ ಆರೋಪಿಸಿ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ ಬಿ ರಮೇಶ್ ಬಂಡಿಸಿದ್ಧೇಗೌಡ ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಮೈಸೂರು ನಿವಾಸಿ ಹಾಗೂ ಸ್ಥಳೀಯ ಮತದಾರ ಎಂ ಡಿ ಆದಿಶ್ ಸಾಗರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಶಾಸಕ ರಮೇಶ್ ಬಂಡಿಸಿದ್ದೇಗೌಡ, ಭಾರತ ಚುನಾವಣಾ ಆಯೋಗ, ರಾ‍ಜ್ಯ ಮುಖ್ಯ ಚುನಾವಣಾಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ವಾದಿಸಿದರು.

ಚುನಾವಣೆಗೆ ಸ್ಪರ್ಧಿಸುವವರ ಆಸ್ತಿ ಮತ್ತು ಹೊಣೆಗಾರಿಕೆಯ ಮಾಹಿತಿ ಪಡೆದುಕೊಳ್ಳುವುದು, ಅದರಲ್ಲಿ ತಪ್ಪು ಕಂಡು ಬಂದಲ್ಲಿ ಸೂಕ್ತ ವೇದಿಕೆಯಲ್ಲಿ ಅದನ್ನು ಪ್ರಶ್ನಿಸುವುದಕ್ಕೆ ಪ್ರತಿಯೊಬ್ಬ ಮತದಾರನ ಹಕ್ಕು ಎಂದು ಸುಪ್ರಿಂ ಕೋರ್ಟ್, ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳು ಹೇಳುತ್ತವೆ. ಆದರೆ, ಈ ಬಗ್ಗೆ ಅರ್ಜಿದಾರರು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದರೂ ಕ್ರಮ ಆಗಿಲ್ಲ. ಆದ್ದರಿಂದ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು.

ಮೈಸೂರು ತಾಲ್ಲೂಕಿನ ಬೋಗಾದಿ ಗ್ರಾಮದ ಸರ್ವೇ ಸಂಖ್ಯೆ 78/5 ಸೇರಿ ಕೆಲ ಸರ್ವೆ ನಂಬರ್‌ಗಳಲ್ಲಿರುವ ಜಮೀನುಗಳ ಮಾಲೀಕತ್ವವನ್ನು ರಮೇಶ್ ಬಂಡಿಸಿದ್ದೇಗೌಡ ಮುಚ್ಚಿಟ್ಟಿದ್ದಾರೆ. ಅಲ್ಲದೆ, ಇನ್ನೂ ಕೆಲವು ತಪ್ಪು ಮಾಹಿತಿಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮರೆಮಾಚಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Kannada Bar & Bench
kannada.barandbench.com