ಚುನಾವಣೆ ಪ್ರಣಾಳಿಕೆ ಪ್ರಜಾಪ್ರತಿನಿಧಿ ಕಾಯಿದೆ ಅಡಿ ಆಮಿಷ ವ್ಯಾಪ್ತಿಗೆ ಸೇರಲ್ಲ: ಹೈಕೋರ್ಟ್‌ನಲ್ಲಿ ಜಮೀರ್‌ ವಕೀಲರ ವಾದ

ಬೆಂಗಳೂರಿನ ಶಶಾಂಕ್ ಜೆ ಶ್ರೀಧರ್ ಎಂಬುವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
MLA B Z Zameer Ahmed Khan and Karnataka HC
MLA B Z Zameer Ahmed Khan and Karnataka HC
Published on

ಚುನಾಚಣಾ ಪ್ರಣಾಳಿಕೆ ವ್ಯಕ್ತಿಗತವಾಗಿರುವುದಿಲ್ಲ. ಅದು ಇಡೀ ಪಕ್ಷಕ್ಕೆ ಸಂಬಂಧಿಸಿದ್ದು, ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123ರ ಚುನಾವಣಾ ಅಕ್ರಮ ಅಥವಾ ಭ್ರಷ್ಟಾಚಾರದ ಅರ್ಥವ್ಯಾಪ್ತಿಗೆ ಬರುವುದಿಲ್ಲ ಎಂದು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿ ಆ ಮೂಲಕ ಚುನಾವಣಾ ಅಕ್ರಮ ಎಸಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹ್ಮದ್ ಖಾನ್ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಶಶಾಂಕ್ ಜೆ ಶ್ರೀಧರ್ ಎಂಬುವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜಮೀರ್ ಅಹ್ಮದ್ ಪರ ವಕೀಲರು, 70 ಪುಟಗಳ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದರಲ್ಲಿ ಅರ್ಜಿದಾರರು ಮಾಡಿರುವ ಎಲ್ಲಾ ಆರೋಪಗಳನ್ನು ಅಲ್ಲಗಳೆಯಲಾಗಿದೆ. ಅಲ್ಲದೇ ಸೂಕ್ತ ಸಾಕ್ಷಿ-ಪುರಾವೆ ಮತ್ತು ದಾಖಲೆಗಳಿಲ್ಲದೆ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಯಾವ ಹಂತದಲ್ಲೂ ಅರ್ಜಿಯು ವಿಚಾರಣೆಗೆ ಅರ್ಹವಾಗಿಲ್ಲ. ಅರ್ಜಿದಾರರ ಯಾವ ಮನವಿಯನ್ನೂ ನ್ಯಾಯಾಲಯ ಪರಿಗಣಿಸಬಾರದು ಎಂದು ಲಿಖಿತ ಹೇಳಿಕೆಯಲ್ಲಿ ಮನವಿ ಮಾಡಲಾಗಿದೆ.

Also Read
ಸಚಿವ ಜಮೀರ್‌ ಅಹ್ಮದ್‌ ಖಾನ್‌ ಆಯ್ಕೆ ಪ್ರಶ್ನಿಸಿ ಅರ್ಜಿ: ಲಿಖಿತ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಆದೇಶ

ಐದು ಗ್ಯಾರಂಟಿಗಳ ಹೊರತಾಗಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಗಳು ಅನೇಕ ದಾರ್ಶನಿಕರ ತತ್ವಗಳಿಂದ ಪ್ರೇರೇಪಿತಗೊಂಡಿವೆ. ಕಾಂಗ್ರೆಸ್ ಸರ್ಕಾರ ವಿಶ್ವಗುರು ಬಸವಣ್ಣ, ರಾಷ್ಟ್ರಕವಿ ಕುವೆಂಪು, ಬ್ರಹ್ಮಶ್ರೀ ನಾರಾಯಣ ಗುರು, ಪುರಂದರದಾಸ, ಕನಕದಾಸ, ಸಂತ ಶಿಶುನಾಳ ಶರೀಫ ಮತ್ತಿತರ ನಾಡಿನ ಶ್ರೇಷ್ಠ ದಾರ್ಶನಿಕರ ಮೌಲ್ಯ ಹಾಗೂ ತತ್ವಗಳನ್ನು ಅಳವಡಿಸಿಕೊಂಡಿದೆ. ಅರ್ಜಿದಾರರು ಆರೋಪಿಸಿರುವಂತೆ ಚುನಾವಣಾ ಪ್ರಣಾಳಿಕೆ ವ್ಯಕ್ತಿಗತವಾಗಿರುವುದಿಲ್ಲ. ಅದು ಇಡೀ ಪಕ್ಷಕ್ಕೆ ಸಂಬಂಧಿಸಿದ್ದು, ಅಲ್ಲದೇ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳು ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123ರ ಚುನಾವಣಾ ಅಕ್ರಮ ಅಥವಾ ಭ್ರಷ್ಟಾಚಾರದ ಅರ್ಥವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಪಾದಿಸಲಾಗಿದೆ. ಜಮೀರ್ ಅಹ್ಮದ್ ಪರ ವಕೀಲ ಇಸ್ಮಾಯಿಲ್ ಜಬಿವುಲ್ಲಾ ವಕಾಲತ್ತು ವಹಿಸಿದ್ದರು.

ಈ ಲಿಖಿತ ಹೇಳಿಕೆ ದಾಖಲಿಸಿಕೊಂಡ ಪೀಠವು ಇದಕ್ಕೆ ಪ್ರತ್ಯುತ್ತರ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್‌ 11ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಣಾ ನೇಸರ್ಗಿ ವಾದಿಸಿದರು.

Kannada Bar & Bench
kannada.barandbench.com