ಚುನಾವಣಾ ಬಾಂಡ್ ಪ್ರಕರಣ: ಎಸ್‌ಬಿಐ ವಿರುದ್ಧ ಸುಪ್ರೀಂಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಎಡಿಆರ್

ಚುನಾವಣಾ ಬಾಂಡ್‌ ವಿವರಗಳನ್ನು ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ನಿರ್ದೇಶಿಸಲಾಗಿದ್ದರೂ ಗಡುವು ವಿಸ್ತರಿಸುವಂತೆ ಕೋರಿ ಅದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಎಸ್‌ಬಿಐ, ಚುನಾವಣಾ ಬಾಂಡ್‌ ಹಾಗೂ ಸುಪ್ರೀಂ ಕೋರ್ಟ್
ಎಸ್‌ಬಿಐ, ಚುನಾವಣಾ ಬಾಂಡ್‌ ಹಾಗೂ ಸುಪ್ರೀಂ ಕೋರ್ಟ್
Published on

ಏಪ್ರಿಲ್‌ 2019ರಿಂದ ಇಲ್ಲಿಯವರೆಗೆ ಖರೀದಿಸಿದ ಮತ್ತು ನಗದೀಕರಿಸಿದ ಎಲ್ಲಾ ಚುನಾವಣಾ ಬಾಂಡ್‌ಗಳ ವಿವರ ಒದಗಿಸಲು ವಿಫಲವಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಸ್ತಾಪಿಸಿರುವ ಎಡಿಆರ್‌ ಅರ್ಜಿಯನ್ನು ಆಲಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಸಮ್ಮತಿ ಸೂಚಿಸಿದೆ.

ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಕಳೆದ ತಿಂಗಳು ಸರ್ವಾನುಮತದಿಂದ ರದ್ದುಗೊಳಿಸಿತ್ತು. 2019ರ ಏಪ್ರಿಲ್ 12ರಿಂದ ಇಲ್ಲಿಯವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸುವಂತೆಯೂ ಆಗ ಅದು ಎಸ್‌ಬಿಐಗೆ ನಿರ್ದೇಶನ ನೀಡಿತ್ತು.

ರಾಜಕೀಯ ಪಕ್ಷಗಳು ನಗದೀಕರಿಸಿದ ಪ್ರತಿ ಚುನಾವಣಾ ಬಾಂಡ್‌ನ ವಿವರಗಳನ್ನು ಮಾರ್ಚ್ 6 ರೊಳಗೆ ಬಹಿರಂಗಪಡಿಸುವಂತೆ ಬ್ಯಾಂಕ್‌ಗೆ ಅದು ಸೂಚಿಸಿತ್ತು. ಎಸ್‌ಬಿಐನಿಂದ ಸ್ವೀಕರಿಸಿದ ಈ ಮಾಹಿತಿಯನ್ನು ಒಂದು ವಾರದೊಳಗೆ ಚುನಾವಣಾ ಆಯೋಗ ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಬೇಕಾಗಿತ್ತು.

ಆದರೆ ವಿವರಗಳನ್ನು ಒದಗಿಸಲು ವಿಧಿಸಲಾಗಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಎಸ್‌ಬಿಐ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿತ್ತು.

ಎಸ್‌ಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ. ನ್ಯಾಯಾಲಯ ವಿಧಿಸಿದ್ದ ಮಾರ್ಚ್‌ 6ರ ಕಡ್ಡಾಯ ಗಡುವಿಗೂ ಕೆಲ ದಿನಗಳ ಮೊದಲು ಎಸ್‌ಬಿಐ ಅರ್ಜಿ ಸಲ್ಲಿಸಿತ್ತು. ಗಡುವಿನೊಳಗೆ ಮಾಹಿತಿ ಒದಗಿಸಲು ಕೆಲ ಪ್ರಾಯೋಗಿಕ ತೊಂದರೆಗಳಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ದಾನಿಗಳ ಗುರುತನ್ನು ಅನಾಮಧೇಯವಾಗಿ ಇಡುವುದಕ್ಕಾಗಿ ಕೈಗೊಂಡ ಕಠಿಣ ಕ್ರಮಗಳಿಂದಾಗಿ, ಚುನಾವಣಾ ಬಾಂಡ್‌ಗಳ ವಿವರ ಬಹಿರಂಗಪಡಿಸುವ ಪ್ರಕ್ರಿಯೆ ಸಂಕೀರ್ಣಮಯವಾಗಿದೆ. ವಿವಿಧ ಬ್ಯಾಂಕ್‌ ಶಾಖೆಗಳಲ್ಲಿ ಬಾಂಡ್‌ಗಳನ್ನು ಖರೀದಿಸಲಾಗಿದ್ದು ಅವುಗಳ ವಿವರಗಳನ್ನು ಒಂದು ಸ್ಥಳದಲ್ಲಿ ಕೇಂದ್ರೀಯವಾಗಿ ನಿರ್ವಹಿಸಿಲ್ಲ. ದಾನಿಗಳ ಅನಾಮಧೇಯತೆ ಕಾಪಾಡುವುದಕ್ಕಾಗಿ ಎರಡು ಭಿನ್ನ ಸಿಲೋಗಳಲ್ಲಿ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಆದರೆ ಎಡಿಆರ್‌ ಸಲ್ಲಿಸಿರುವ ಅರ್ಜಿಯಲ್ಲಿ ಬ್ಯಾಂಕ್‌ ಉದ್ದೇಶಪೂರ್ವಕವಾಗಿ ಅಸಹಕಾರ ತೋರುತ್ತಿದ್ದು ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಧಿಕ್ಕರಿಸಲು ಹೊರಟಂತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ದಾನಿಗಳ ವಿವರಗಳು ಮತ್ತು ದೇಣಿಗೆಗಳ ಮೊತ್ತವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದಂತೆ ನೋಡಿಕೊಳ್ಳಲು ಎಸ್‌ಬಿಐ ಉದ್ದೇಶಪೂರ್ವಕವಾಗಿ ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸಿದೆ. ಆದೇಶಕ್ಕೆ ಸಂಬಂಧಿಸಿದಂತೆ ಈವರೆಗೆ ಆಗಿರುವ ಪ್ರಗತಿ ಮತ್ತು ತಾನು ಕೈಗೊಂಡ ಕ್ರಮಗಳನ್ನು ಅದು ಬಹಿರಂಗಪಡಿಸಿಲ್ಲ ಎಂದಿದೆ.

ಪ್ರಕ್ರಿಯೆಯ ಸಂಕೀರ್ಣತೆ ಬಗ್ಗೆ ಎಸ್‌ಬಿಐ ನೀಡಿದ್ದ ಹೇಳಿಕೆಯನ್ನು ಪ್ರಶ್ನಿಸಿರುವ ಎಡಿಆರ್‌ ಪ್ರತಿಯೊಂದು ಚುನಾವಣಾ ಬಾಂಡ್‌ಗೆ ನಿಗದಿಪಡಿಸಿದ ವಿಶಿಷ್ಟ ಸಂಖ್ಯೆ ಮತ್ತು ಖರೀದಿದಾರರ ಕೆವೈಸಿ ವಿವರ ಬ್ಯಾಂಕ್‌ಗೆ ಚೆನ್ನಾಗಿಯೇ ತಿಳಿದಿದೆ ಎಂದಿದೆ.

ಈ ಕುರಿತಂತೆ "ತಜ್ಞರ" ಅಭಿಪ್ರಾಯ ಅವಲಂಬಿಸಿರುವುದಾಗಿ ಎಡಿಆರ್, ಪ್ರತಿ ಚುನಾವಣಾ ಬಾಂಡ್‌ಗೆ ವಿಶಿಷ್ಟ ಸಂಖ್ಯೆ ಇರುವುದರಿಂದ, ಡೇಟಾಬೇಸ್‌ನಲ್ಲಿ ಯಾವುದೇ ದೈಹಿಕ ಶ್ರಮ ಅಗತ್ಯವಿಲ್ಲದೆ ವರದಿ ತಯಾರಿಸಬಹುದಾಗಿದೆ ಎಂದು ಅದು ವಿವರಿಸಿದೆ.

Kannada Bar & Bench
kannada.barandbench.com