[ಚುನಾವಣಾ ಬಾಂಡ್] ದೇಣಿಗೆ ವಿಧಾನ ಅತ್ಯಂತ ಪಾರದರ್ಶಕ, ಕಪ್ಪು ಹಣಕ್ಕಿಲ್ಲ ಆಸ್ಪದ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಪ್ರಕರಣದ ಅರ್ಹತೆ ಬಗ್ಗೆ ವಿಚಾರಣೆ ನಡೆಸುವ ಮುನ್ನ ಇದನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸುವ ಮನವಿ ಕುರಿತು ಮೊದಲು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
Supreme Court and electoral bonds
Supreme Court and electoral bonds

ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡಲು ರೂಪಿಸಿರುವ ಚುನಾವಣಾ ಬಾಂಡ್‌ ಯೋಜನೆ ಅತ್ಯಂತ ಪಾರದರ್ಶಕವಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಯೋಜನೆಯಲ್ಲಿ ಕಪ್ಪುಹಣಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠಕ್ಕೆ ತಿಳಿಸಿದರು.

"ದೇಣಿಗೆಯ ವಿಧಾನ ತುಂಬಾ ಪಾರದರ್ಶಕವಾಗಿದೆ, ಕಪ್ಪು ಹಣವನ್ನು ಪಡೆಯುವುದು ಅಸಾಧ್ಯ. ಇದು ಅತ್ಯಂತ ಪಾರದರ್ಶಕವಾಗಿದೆ" ಎಂದ ಎಸ್‌ಜಿ “ಯೋಜನೆ ಪ್ರಜಾಪ್ರಭುತ್ವದ ಬುಡಕ್ಕೆ ಪೆಟ್ಟು ನೀಡುತ್ತದೆ" ಎನ್ನುವ ವಕೀಲ ಪ್ರಶಾಂತ್‌ ಭೂಷಣ್‌ ಅವರ ವಾದ ಸುಳ್ಳು ಎಂದು ತಳ್ಳಿ ಹಾಕಿದರು.

Also Read
ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಬಾಂಡ್‌ ಮಾರಾಟ ನಿಷೇಧ ಕೋರಿದ್ದ ಎಡಿಆರ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಅರ್ಜಿದಾರರ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು, ಪ್ರಸ್ತಾಪಿಸಿದ ವಿಷಯಗಳ ಪ್ರಾಮುಖ್ಯತೆ  ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ವಿಸ್ತೃತ ಪೀಠ ಆಲಿಸಬೇಕಾಗಬಹುದು ಎಂದರು.

ಆಗ ನ್ಯಾಯಾಲಯವು ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬೇಕೆ ಎನ್ನುವ ಕುರಿತು ಮೊದಲು ವಿಚಾರಣೆ ನಡೆಸುವುದಾಗಿ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಯಾವಾಗ ನಡೆಸಬೇಕು ಎಂದು ಪೀಠ ಕೇಳಿದಾಗ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಯಾವುದೇ ತುರ್ತು ಇಲ್ಲ, ಜನವರಿ 2023ರಲ್ಲಿ ಪ್ರಕರಣ ಕೈಗೆತ್ತಿಕೊಳ್ಳಿ ಎಂದರು.

ಆದರೆ ಗುಜರಾತ್‌ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುವುದರಿಂದ ಜನವರಿಯಲ್ಲಿ ವಿಚಾರಣೆ ನಡೆಸುವುದು ಹೆಚ್ಚು ಬಾಂಡ್‌ಗಳ ಮಾರಾಟಕ್ಕೆ ಅವಕಾಶ ನೀಡುತ್ತದೆ ಎಂದು ಭೂಷಣ್, ಸಿಬಲ್ ಮತ್ತು ಹಿರಿಯ ವಕೀಲ ಸಂಜಯ್ ಹೆಗ್ಡೆ ತಿಳಿಸಿದರು. ಇದಕ್ಕೆ ಎಸ್‌ಜಿ ನವೆಂಬರ್‌ನಲ್ಲಿ ಸಂವಿಧಾನ ಪೀಠದ ವಿಚಾರಣೆಯ ಅವಧಿ ನಿಗದಿಯಾಗಿದೆ ಎಂದು ತಿಳಿಸಿದರು. ಕಡೆಗೆ ನ್ಯಾಯಾಲಯ ಡಿಸೆಂಬರ್ 6ಕ್ಕೆ ಪ್ರಕರಣದ ವಿಚಾರಣೆ ನಿಗದಿಪಡಿಸಿತು.

Related Stories

No stories found.
Kannada Bar & Bench
kannada.barandbench.com