ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಗ್ರಾಹಕನಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಇ- ಸ್ಕೂಟರ್ ತಯಾರಕ ಕಂಪೆನಿ ಬೆನ್ಲಿಂಗ್ ಇಂಡಿಯಾಗೆ ತೆಲಂಗಾಣದ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯೊಂದು ನಿರ್ದೇಶಿಸಿದೆ.
ಸ್ಫೋಟದ ಕಾರಣಗಳನ್ನು ಅರಿಯುವುದು ಸ್ಕೂಟರ್ ತಯಾರಕರ ಜವಾಬ್ದಾರಿಯಾಗಿದ್ದರೂ ಪ್ರಸ್ತುತ ಪ್ರಕರಣದಲ್ಲಿ, ತಯಾರಕರು ಕಾಳಜಿ ತೋರಿಲ್ಲ ಎಂದು ಮೇಡಕ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗಜ್ಜಲ ವೆಂಕಟೇಶ್ವರಲು ಮತ್ತು ಸದಸ್ಯ ಮಕ್ಯಂ ವಿಜಯ್ ಕುಮಾರ್ ಒತ್ತಿ ಹೇಳಿದರು.
"ಸ್ಫೋಟದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ದೂರುದಾರರು ಅನುಭವಿಸಿದ ನಷ್ಟಕ್ಕೆ ಪರಿಹಾರ ಪಡೆಯಲು ಸಹಾಯ ಮಾಡುವುದು ತಯಾರಕರ ಕರ್ತವ್ಯವಾಗಿದೆ; ಆದರೂ, ಪ್ರಸ್ತುತ ಪ್ರಕರಣದಲ್ಲಿ, ದೂರುದಾರರು ಹಲವು ಪತ್ರಗಳನ್ನು ಬರೆದಿದ್ದರೂ ತಯಾರಕರು ಘಟನೆಯ ಬಗ್ಗೆ ವಿಚಾರಣೆ ನಡೆಸಲು ಮತ್ತು ದೂರುದಾರರನ್ನು ಬೆಂಬಲಿಸಲು ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ ಎಂದು ತೋರುತ್ತದೆ. ಇದು ಒಪಿ ನಂ.1 (ಬೆನ್ಲಿಂಗ್) ಉತ್ಪನ್ನವನ್ನು ಬಳಸುವ ಉಳಿದ ಗ್ರಾಹಕರ ಸುರಕ್ಷತೆಯ ಬಗ್ಗೆ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ" ಎಂದು ಆಯೋಗ ಹೇಳಿದೆ.
ಬೆನ್ಲಿಂಗ್ ಕಂಪೆನಿಯಿಂದ 2021ರ ಏಪ್ರಿಲ್ ತಿಂಗಳಲ್ಲಿ ಖರೀದಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ ಫೆಬ್ರವರಿ 202 ರಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎಂದು ಆರೋಪಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 35 (1) ರ ಅಡಿಯಲ್ಲಿ ದಾಖಲಿಸಲಾಗಿದ್ದ ದೂರಿನ ವಿಚಾರಣೆ ವೇಳೆ ಆಯೋಗ ಈ ವಿಚಾರ ತಿಳಿಸಿದೆ.
ತಮಗೆ 13.5 ಲಕ್ಷ ರೂ.ಗಳ ಪರಿಹಾರ ಮೊತ್ತ ಮತ್ತು 40,000 ರೂ.ಗಳ ವ್ಯಾಜ್ಯ ವೆಚ್ಚದ ಜೊತೆಗೆ ಬೇರೊಂದು ಸ್ಕೂಟರ್ ನೀಡಬೇಕೆಂದು ದೂರುದಾರರು ಕೋರಿದ್ದರು. ಬೇರೆ ಸ್ಕೂಟರ್ ನೀಡಲು ಸಾಧ್ಯವಾಗದೆ ಹೋದರೆ ಅದರ ಖರೀದಿ ಬೆಲೆಗೆ ಸಮಾನವಾದ ಪರಿಹಾರ ನೀಡಬೇಕು, ಜೊತೆಗೆ ವರ್ಷಕ್ಕೆ ಶೇ 18ರಷ್ಟು ಬಡ್ಡಿ ನೀಡಬೇಕೆಂದು ಕೋರಿದ್ದರು.
ಇಷ್ಟಾದರೂ, ವಾಹನ ತಯಾರಕರಾಗಲೀ ಅಥವಾ ವಾಹನ ಡೀಲರ್ ಆಗಲೀ ತಮ್ಮ ನಿವಾಸಕ್ಕೆ ಭೇಟಿ ನೀಡಿಲ್ಲ ಅಥವಾ ಉತ್ತರಿಸಿಲ್ಲ ಎಂದು ದೂರುದಾರರು ಆಯೋಗಕ್ಕೆ ಮಾಹಿತಿ ನೀಡಿದರು.
ತಯಾರಕರು ಮತ್ತು ವಿತರಕರಿಗೆ ಆಯೋಗ ನೋಟಿಸ್ ನೀಡಿದ್ದರೂ, ಅವರು ಹಾಜರಾಗದ ಹಿನ್ನೆಲೆಯಲ್ಲಿ ಆಯೋಗ ಏಕಪಕ್ಷೀಯವಾಗಿ ತನ್ನ ಆದೇಶ ಹೊರಡಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]