ರಾಜ್ಯದಲ್ಲಿ ಆನೆಗಳ ಅಸಹಜ ಸಾವು ಪ್ರಕರಣ: ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಲು ನಿರ್ದೇಶಿಸಿದ ಹೈಕೋರ್ಟ್‌

ಈಚೆಗೆ ಮೈಸೂರು, ಚಿಕ್ಕಮಗಳೂರು ಮತ್ತು ಮಡಿಕೇರಿಯಲ್ಲಿ ಎರಡು ಆನೆಗಳು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿರುವ ಘಟನೆಯನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.
Elephant and Karnataka HC
Elephant and Karnataka HC
Published on

ರಾಜ್ಯದಲ್ಲಿ ಈಚೆಗೆ ಆನೆಗಳ ಅಸಹಜ ಸಾವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಈಚೆಗೆ ಮೈಸೂರು ವ್ಯಾಪ್ತಿಯಲ್ಲಿ ಅಶ್ವತ್ಥಾಮ ಆನೆಯು ವಿದ್ಯುತ್‌ ಸ್ಪರ್ಶದಿಂದ ಮರಣ ಹೊಂದಿರುವುದು, ಚಿಕ್ಕಮಗಳೂರಿನಲ್ಲಿ ಒಂದು ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿರುವ ಸಂಬಂಧ ಮಾಧ್ಯಮ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿದೆ.

“ಈಚೆಗೆ ರಾಜ್ಯದ ವಿವಿಧೆಡೆ ವಿದ್ಯುತ್‌ ಸ್ಪರ್ಶ ಅಥವಾ ಬೇರಾವುದೋ ಕಾರಣಕ್ಕೆ ಪದೇಪದೇ ಆನೆಗಳ ಸಾವು ಸಂಭವಿಸುತ್ತಿರುವುದು ತೀವ್ರ ಕಳವಳಕಾರಿಯಾದ ಬೆಳವಣಿಗೆಯಾಗಿದೆ. ಅಧಿಕಾರಿಗಳ ಅವಗಣನೆಯಿಂದ ಘಟನೆಗಳು ಮರುಕಳಿಸುತ್ತವೆ ಎನ್ನುವ ಮಾತಿದೆ. ಅರಣ್ಯ ಮತ್ತು ಸಂಬಂಧಿತ ಪ್ರಾಧಿಕಾರಗಳು ಶಾಸನಬದ್ಧ ಕರ್ತವ್ಯ ನಿರ್ವಹಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

"ವಿದ್ಯುತ್‌ ಸ್ಪರ್ಶದಿಂದ ಅಸುನೀಗಿದ ಅಶ್ವತ್ಥಾಮ ಆನೆಯ ಪ್ರಕರಣವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುತ್ತಿದೆ” ಎಂದು ಪೀಠ ಹೇಳಿದ್ದು, ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ, ರಾಜ್ಯ ಸರ್ಕಾರ, ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆ ಕಾರ್ಯದರ್ಶಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

"ಆನೆಗಳು ಮತ್ತು ಇತರೆ ವನ್ಯಜೀವಿಗಳ ರಕ್ಷಣೆಗಾಗಿ ರಾಜ್ಯದಲ್ಲಿ ಏನೆಲ್ಲಾ ಕ್ರಮಕೈಗೊಂಡಿದೆ? ಪದೇಪದೇ ಆನೆಗಳ ಅಸಹಜ ಸಾವು ಪ್ರಕರಣ ವರದಿಯಾಗುತ್ತಿದ್ದು, ಇದನ್ನು ತಡೆಯಲು ಏನೆಲ್ಲಾ ಪ್ರಸ್ತಾವಿತ ಕ್ರಮಕೈಗೊಳ್ಳಲಾಗಿದೆ? ಈ ವಿಚಾರದಲ್ಲಿ ಶಾಸನಬದ್ಧ ವ್ಯವಸ್ಥೆಯನ್ನು ಅಧಿಕಾರಿಗಳು ಸಕ್ರಿಯಗೊಳಿಸಿದ್ದಾರೆಯೇ? ಅರಣ್ಯ ಮತ್ತು ಹೊರಗಿನ ಪ್ರದೇಶದಲ್ಲಿ ಆನೆಗಳ ರಕ್ಷಣೆಗೆ ಯಾವ ಕ್ರಮ ರೂಪಿಸಲಾಗಿದೆ? ಆನೆಗಳ ಅಸಹಜ ಸಾವಿನ ಪ್ರಕರಣ ದಾಖಲಾದಾಗ ಅಧಿಕಾರಿಗಳ ಮೇಲೆ ಹೇಗೆ ಹೊಣೆಗಾರಿಕೆ ಹೊರಿಸಲಾಗುತ್ತದೆ? ಎಂಬೆಲ್ಲದರ ಮಾಹಿತಿಯನ್ನು ಸಲ್ಲಿಸಬೇಕು" ಎಂದು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ಹಿರಿಯ ವಕೀಲ ಪುತ್ತಿಗೆ ರಮೇಶ್‌ ಅವರನ್ನು ನೇಮಕ ಮಾಡಲಾಗಿದ್ದು, ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com