ವಾಣಿಜ್ಯ ಚಿಹ್ನೆ ಉಲ್ಲಂಘನೆ ಮತ್ತು ಅದರ ಬಳಕೆಗೆ ಸಂಬಂಧಿಸಿದ ಅನ್ಯಾಯದ ವ್ಯಾಪಾರ ಪ್ರವೃತ್ತಿಯನ್ನು ವಿರೋಧಿಸಿ ಭಾರತೀಯ ಕಂಪನಿ ಟೆಸ್ಲಾ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಜಾಗತಿಕ ಎಲೆಕ್ಟ್ರಿಕ್ ವಾಹನ ತಯಾರಿಕಾ ದೈತ್ಯ ಟೆಸ್ಲಾ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ [ಟೆಸ್ಲಾ ಇನ್ಕಾರ್ಪೊರೇಟೆಡ್ ಮತ್ತು ಟೆಸ್ಲಾ ಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಟೆಸ್ಲಾ ಪವರ್ ಇಂಡಿಯಾ ತನ್ನ ಟೆಸ್ಲಾ ವಾಣಿಜ್ಯ ಚಿಹ್ನೆಯನ್ನು ಬಳಕೆ ಮಾಡುತ್ತಿದ್ದು ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಮುಂದಾಗಿರುವ ಜಾಹೀರಾತು ಪ್ರಕಟಿಸಿದ ಹಿನ್ನೆಲೆಯಲ್ಲಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ತಾನು ಈ ಸಂಬಂಧ ಏಪ್ರಿಲ್ 2022ರಿಂದ ಟೆಸ್ಲಾ ಪವರ್ ಇಂಡಿಯಾ ಮತ್ತು ಅದರ ಪ್ರತಿರೂಪವಾದ ಟೆಸ್ಲಾ ಪವರ್ ಯುಎಸ್‌ಎಗೆ ನೋಟಿಸ್ ನೀಡುತ್ತ ಬಂದಿದ್ದರೂ ಪ್ರತಿವಾದಿ ಕಂಪೆನಿ ಅದರ ಸರಕುಗಳ ಕುರಿತು ಜಾಹೀರಾತು ಮತ್ತು ಮಾರುಕಟ್ಟೆ ಬಳಕೆಯನ್ನು ಮುಂದುವರೆಸಿದೆ ಎಂದು ಮಸ್ಕ್ ಒಡೆತನದ ಟೆಸ್ಲಾ ನ್ಯಾಯಮೂರ್ತಿ ಅನೀಶ್ ದಯಾಳ್ ಅವರೆದುರು ಮೇ 2 ರಂದು ವಾದಿಸಿತು.
ಆದರೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಉದ್ದೇಶ ತನಗೆ ಇಲ್ಲವೇ ಇಲ್ಲ. ಈ ವಾಣಿಜ್ಯ ಚಿಹ್ನೆ ಅಥವಾ ಟೆಸ್ಪಾ ಪವರ್ ಯುಎಸ್‌ಎಯನ್ನು ಬಳಸಿಕೊಂಡು ಇಲ್ಲವೇ ಟೆಸ್ಲಾ ಹೆಸರನ್ನು ಹೋಲುವ ಇನ್ನಾವುದೇ ಬ್ರಾಂಡ್‌ನಡಿ ಬೇರೆ ಕಂಪೆನಿಗಳ ಇ-ವಾಹನಗಳನ್ನೂ ತಾನು ಮಾರಾಟ ಮಾಡುವುದಿಲ್ಲ ಎಂದು ಟೆಸ್ಲಾ ಪವರ್ ಇಂಡಿಯಾದ ಮಾಲೀಕರು ಇದೇ ವೇಳೆ ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಿದರು.
ಇದನ್ನು ದಾಖಲೆಯಲ್ಲಿ ಸ್ವೀಕರಿಸಿದ ನ್ಯಾಯಾಲಯ ಪ್ರತಿವಾದಿಗಳು ಅದಕ್ಕೆ ಬದ್ಧರಾಗಿರಬೇಕು ಎಂದು ತಾಕೀತು ಮಾಡಿತು. ಜೊತೆಗೆ ಟೆಸ್ಲಾ ಪವರ್ ಇಂಡಿಯಾ ಮತ್ತು ಅದರ ಮಾಲೀಕರಿಗೆ ಸಮನ್ಸ್ ನೀಡಿದ ಅದು ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು.
ಮೇ 22 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.