![[ಕಾಲ್ತುಳಿತ ಪ್ರಕರಣ] ಸರ್ಕಾರಕ್ಕೆ ಮುಜುಗರವಾಗಿದೆ ಎನ್ನುವುದು ಅಮಾನತಿಗೆ ಕಾರಣವಾಗದು: ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ](http://media.assettype.com/barandbench-kannada%2F2025-07-17%2Fa6xobgq7%2FWhatsApp-Image-2025-07-02-at-11.46.27.jpeg?w=480&auto=format%2Ccompress&fit=max)
ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಅಮಾನತುಗೊಳಿಸಿರುವುದಕ್ಕೆ ಸರ್ಕಾರವು ನೀಡಿರುವ ಸಮರ್ಥನೆಗಳು “ಮಾಡಿದರೂ ತಪ್ಪ, ಮಾಡದೇ ಇದ್ದರೂ ತಪ್ಪು” ಎಂಬ ನಿಲುವಿನ ನಿದರ್ಶನವಾಗಿದೆ ಎಂದು ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಪರ ವಕೀಲರು ಶುಕ್ರವಾರ ವಾದಿಸಿದರು.
ಪೊಲೀಸ್ ಅಧಿಕಾರಿಗಳ ಅಮಾನತು ಬದಿಗೆ ಸರಿಸಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ಹಾಗೂ ಸಿಎಟಿ ಆದೇಶದಲ್ಲಿ ದುರ್ಘಟನೆಗೆ ತಾನೇ ಕಾರಣ ಎಂದಿರುವ ಅಂಶಗಳನ್ನು ಅಳಿಸಿ ಹಾಕುವಂತೆ ಕೋರಿರುವ ಆರ್‌ಸಿಬಿ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್ ಜಿ ಪಂಡಿತ್ ಮತ್ತು ಟಿ ಎಂ ನದಾಫ್ ಅವರ ವಿಭಾಗೀಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ವಿಕಾಸ್ ಕುಮಾರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಅಮಾನತುಗೊಂಡಿರುವ ಅಧಿಕಾರಿಗಳು ಆರ್‌ಸಿಬಿ ಸೇವಕರಂತೆ ವರ್ತಿಸಿದ್ದಾರೆ ಎಂದಿದ್ದ ಸರ್ಕಾರದ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವೈರುಧ್ಯಾತ್ಮಕ ವಾದಗಳನ್ನು ನ್ಯಾಯಾಲಯದ ಮುಂದಿರಿಸಿದರು. “ರಾಜ್ಯ ಸರ್ಕಾರವು ಬಂದೋಬಸ್ತ್ ಮಾಡಲು ಅವರು ಯಾರು ಎಂದು ಪೊಲೀಸರನ್ನು ಕೇಳಿದೆ? ಇದು ಸರ್ಕಾರದ ನಿಲುವೇ? ವಿಭಾಗೀಯ ಪೀಠದ ಮುಂದೆ ಇದ್ದ ಸ್ವಯಂಪ್ರೇರಿತ ಪ್ರಕರಣದಲ್ಲಿ ಸರ್ಕಾರವು (ಅವಘಡ ಸಂಭವಿಸಿದೆ ಇರಲು) ಸಾಧ್ಯವಾದ ಎಲ್ಲವನ್ನೂ ನಾವು ಮಾಡಿದ್ದೇವೆ ಎಂದು ಹೇಳಿದೆ. ಪ್ರತಿಯೊಂದು ಸ್ಥಳದಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು ಇತ್ಯಾದಿ ಎಂದು ಹೇಳಿದೆ. ಆದರೆ, ಇಲ್ಲಿ ಈಗ ಸರ್ಕಾರ ಬೇರೆಯದೇ ವಿಚಾರ ಹೇಳುತ್ತಿದೆ. ಇದು (ಅಧಿಕಾರಿಗಳ ಕೆಲಸದ ಬಗ್ಗೆ ಸರ್ಕಾರವು ಹೊಂದಿರುವ) ʼಮಾಡಿದರೂ ತಪ್ಪ, ಮಾಡದೇ ಇದ್ದರೂ ತಪ್ಪುʼ ಎಂಬ ಸರ್ಕಾರದ ನಿಲುವಿಗೆ ಸ್ಪಷ್ಟ ನಿದರ್ಶನವಾಗಿದೆ” ಎಂದರು.
“ಬೆಂಗಳೂರು ಪೊಲೀಸ್ ಆಯುಕ್ತರು ವಿಜಯೋತ್ಸವ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಬೆಂಗಳೂರಿನಲ್ಲಿ ಅವರೇ ಪೊಲೀಸರ ಮುಖ್ಯಸ್ಥರಾಗಿದ್ದಾರೆ. ಹೀಗಿರುವಾಗ ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಯಾವ ಮೇಲಧಿಕಾರಿಯ ಬಳಿಗೆ ಹೋಗಬೇಕಿತ್ತು? ಸರ್ಕಾರಕ್ಕೆ ಮುಜುಗರವಾಗಿದೆ ಎಂಬುದು ಅಮಾನತುಗೊಳಿಸಲು ಕಾರಣವಾಗುವುದಿಲ್ಲ” ಎಂದರು.
“ನ್ಯಾಯಾಲಯದ ಮುಂದೆ ಎಲ್ಲವೂ ಸರಿಯಾಗಿದೆ ಎಂಬುದನ್ನು ತೋರಿಸಲು, ದಾಖಲೆಗಳ ಅನುಪಸ್ಥಿತಿಯ ನಡುವೆಯೂ ಒಬ್ಬ ವ್ಯಕ್ತಿಯನ್ನು ನಿಂದಿಸಲಾಗುತ್ತಿದೆ” ಎಂದು ಬೇಸರಿಸಿದರು. ಕೆಲ ಕಾಲ ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.