ರಾಜ್ಯದಲ್ಲಿ ಅಧಿಕಾರ ಪರ್ವ ಬದಲಾದ ಬೆನ್ನಿಗೇ ರಾಜಕೀಯ ಪಕ್ಷಪಾತದ ಕಾರಣ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಏಳು ನಾಮಕರಣ ಸದಸ್ಯರನ್ನು ತೆಗೆದುಹಾಕಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಕಿಡಿಕಿಡಿಯಾಗಿರುವ ಹೈಕೋರ್ಟ್ ಆ ಸದಸ್ಯರನ್ನು ಪುನರ್ ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಇತ್ತೀಚೆಗೆ ಆದೇಶ ಹೊರಡಿಸಿದೆ [ದೀಪ್ತಿ ಭಾವ ಮತ್ತು ಇತರರು ವರ್ಸಸ್ ಕರ್ನಾಟಕ ಸರ್ಕಾರ].
ಪ್ರಕರಣದಲ್ಲಿನ ಅರ್ಜಿದಾರರು ಆರ್‌ಜಿಯುಎಚ್‌ಎಸ್‌ನ ಸೆನೆಟ್ ಮತ್ತು ಸಿಂಡಿಕೇಟ್‌ನಿಂದ ನೇಮಿಸಲ್ಪಟ್ಟಿದ ಏಳು ನಾಮಕರಣ ಸದಸ್ಯರಾಗಿದ್ದು ವಿಶ್ವವಿದ್ಯಾಲಯದ ಕಾಯಿದೆಯಡಿ ರೂಪಿಸಲಾಗಿರುವ ಸದಸ್ಯತ್ವದ ಅವಧಿ ಪೂರೈಕೆಗೂ ಮುನ್ನವೇ ಅವರನ್ನು ತೆಗೆದುಹಾಕಲಾಗಿತ್ತು. ಸರ್ಕಾರದ ಈ ಕ್ರಮದ ಬಗ್ಗೆ ನ್ಯಾಯಾಲಯವು ಗಂಭೀರ ಆಸಮಧಾನ ವ್ಯಕ್ತಪಡಿಸಿತು.
ಪ್ರಕರಣದ ಸಂಬಂಧ ಸದಸ್ಯರನ್ನು ಪುನರ್‌ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ತೀರ್ಪು ನೀಡಿರುವ ನ್ಯಾ. ಜಿ ನರೇಂದ್ರ ಅವರ ಪೀಠವು, “ಅಂತಹ ವ್ಯಕ್ತಿಗಳ ನೇಮಕಾತಿಯ ಬಗ್ಗೆ ಅವರ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸದೆ ರಾಜಕೀಯ ಬಣ್ಣ ಬಳಿದ ಕಾರಣಕ್ಕಾಗಿ ವ್ಯಾಜ್ಯ ಹೂಡಬೇಕಾದ ಪರಿಸ್ಥಿತಿ ಉದ್ಭವಿಸಿರುವುದು ಬೇಸರ ಹುಟ್ಟಿಸುತ್ತದೆ. 'ಶ್ರೇಷ್ಠ ವ್ಯಕ್ತಿಗಳು' ಶ್ರೇಷ್ಠ ವ್ಯಕ್ತಿಗಳಾಗಿಯೇ ಉಳಿಯಲಿದ್ದು ಅವರ ಶ್ರೇಷ್ಠತೆ ಅವರ ರಾಜಕೀಯ ಒಲವುಗಳಿಂದ ಅಥವಾ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡ ಕಾರಣದಿಂದ ಕುಂದುವುದಿಲ್ಲ ಎಂದು ಕ್ಷೇಮವಾಗಿ ಭಾವಿಸಬಹುದು” ಎಂದಿತು.
ಇದೇ ವೇಳೆ ನ್ಯಾಯಾಲಯವು ಶಿಕ್ಷಣತಜ್ಞರು ಸಹ ಹುದ್ದೆಗಳಲ್ಲಿನ ಅಧಿಕಾರಕ್ಕೆ ಶರಣಾಗಿದ್ದು ಅಂತಹ ಹುದ್ದೆಗಳ ನೇಮಕಾತಿಯನ್ನು ರಾಜಕೀಯ ಕಾರಣಗಳಿಗಾಗಿ ಬದಲಾಯಿಸುವುದು ಸಾಮಾನ್ಯವಾಗಿದೆ ಎಂದಿತು. “ರಾಜಕೀಯ ಉದ್ದೇಶಗಳಿಗೆ ಹೊಂದಾಣಿಕೆಯಾಗುವ ಸಲುವಾಗಿ ನೇಮಕಾತಿಗಳನ್ನು ಬದಲಾಯಿಸುವ ಪ್ರವೃತ್ತಿ ಇದ್ದು, ಶ್ರೇಷ್ಠ ವ್ಯಕ್ತಿಗಳನ್ನು ಸಹ ಅಸಡ್ಡೆಯಿಂದ ನಡೆಸಿಕೊಳ್ಳಲಾಗುತ್ತದೆ” ಎಂದು ಅದೇಶದ ವೇಳೆ ದಾಖಲಿಸಿತು.
ಅಂತಿಮವಾಗಿ ನ್ಯಾಯಾಲಯವು ಏಳು ನಾಮಕರಣ ಸದಸ್ಯರನ್ನು ತೆಗೆದುಹಾಕಿದ್ದ ಅಕ್ಟೋಬರ್ 16, 2020ರ ಸರ್ಕಾರದ ಆದೇಶವನ್ನು ಬದಿಗೆ ಸರಿಸಿತು. ಅಲ್ಲದೆ, ಆ ಏಳು ನಾಮಕರಣ ಸದಸ್ಯರನ್ನು ಪುನರ್ ನೇಮಿಸುವಂತೆ ಆದೇಶಿಸಿತು.
ಅರ್ಜಿದಾರರನ್ನು ಹಿರಿಯ ವಕೀಲರಾದ ಪಿ ಎಸ್ ರಾಜಗೋಪಾಲ್ ಹಾಗೂ ಉದಯ್ ಹೊಳ್ಳ ಅವರು ಪ್ರತಿನಿಧಿಸಿದ್ದರು.