ತನ್ನ ಕರ್ತವ್ಯ ನಿರ್ವಹಣೆ ವೇಳೆ ಉದ್ಯೋಗದಾತ ತೆಗೆದುಕೊಳ್ಳುವ ಕಠಿಣ ನಿರ್ಧಾರದಿಂದ ನೌಕರ ಆತ್ಮಹತ್ಯೆ ಮಾಡಿಕೊಂಡಾಗ ಉದ್ಯೋಗಿಯನ್ನು ಆತ್ಮಹತ್ಯೆಯ ಮೂಲಕ ಸಾಯಿಸುವ ಕ್ರಿಮಿನಲ್ ಉದ್ದೇಶ ಉದ್ಯೋಗದಾತನಿಗೆ ಇರದಿದ್ದರೆ ಅದಕ್ಕೆ ಸದಾ ಆತನನ್ನು ದೂಷಿಸಲಾಗದು ಎಂದು ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ [ಡಾ. ಜಿ ಕೆ ಅರೋರಾ ಮತ್ತು ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತನ್ನ ಕರ್ತವ್ಯದ ಅವಧಿಯಲ್ಲಿ, ಉದ್ಯೋಗದಾತ ಉದ್ಯೋಗಿಗೆ ತೊಂದರೆಯಾಗುವಂತಹ ನಿರ್ಧಾರ ತೆಗೆದುಕೊಂಡಿದ್ದರೂ ಉದ್ಯೋಗದಾತನಿಗೆ ಕ್ರಿಮಿನಲ್ ಉದ್ದೇಶ ಇರದಿದ್ದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಪರಾಧವಲ್ಲ ಎಂದು ಪೀಠ ಹೇಳಿದೆ.
ಮಹಿಳಾ ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ 2013ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಬಿ ಆರ್ ಅಂಬೇಡ್ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಜಿ ಕೆ ಅರೋರಾ ಮತ್ತು ಹಿರಿಯ ಸಹಾಯಕ ರವೀಂದರ್ ಸಿಂಗ್ (ಅರ್ಜಿದಾರರು) ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಸಮನ್ಸ್ ರದ್ದುಗೊಳಿಸುವಾಗ ನ್ಯಾಯಮೂರ್ತಿ ಅಮಿತ್ ಶರ್ಮಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
“ಖಾಸಗಿ ವಲಯದಲ್ಲಾಗಲಿ ಅಥವಾ ಸಾರ್ವಜನಿಕ ವಲಯದಲ್ಲಾಗಲಿ, ನಿರ್ದಿಷ್ಟ ಹುದ್ದೆ ಹೊಂದಿರುವ ವ್ಯಕ್ತಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಉದ್ಯೋಗಿಗಳಿಗೆ ಕಷ್ಟ ಉಂಟಾಗಬಹುದು. ಆಗ ಕ್ರಿಮಿನಲ್ ಉದ್ದೇಶ ಇಲ್ಲದಿದ್ದರೆ ಅದನ್ನು ಐಪಿಸಿ ಸೆಕ್ಷನ್ 306ರ ಪ್ರಕಾರ ಪ್ರಚೋದನೆ ಇಲ್ಲವೇ ಕುಮ್ಮಕ್ಕು ಎಂದು ಕರೆಯಲಾಗದು ಎಂಬುದಾಗಿ ನ್ಯಾಯಾಲಯ ಹೇಳಿತು.
ಮಹಿಳಾ ಉದ್ಯೋಗಿ 2013 ರಲ್ಲಿ ದೆಹಲಿ ಸೆಕ್ರೆಟರಿಯೇಟ್ ಎದುರು ಬೆಂಕಿ ಹಚ್ಚಿಕೊಂಡಿದ್ದರು. ಪೊಲೀಸರಿಗೆ ಹೇಳಿಕೆ ನೀಡಿದ್ದ ಅವರು ನಂತರದ ದಿನಗಳಲ್ಲಿ ಮೃತಪಟ್ಟಿದ್ದರು. ಪ್ರಕರಣದ ಅರ್ಜಿದಾರ, ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ದೆಹಲಿಯ ಆಗಿನ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಸೇರಿದಂತೆ ಹಲವರು ತನ್ನ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಮೃತ ಮಹಿಳೆ ಹೇಳಿಕೆ ದಾಖಲಿಸಿದ್ದರು.
ಪ್ರಕರಣದ ಅರ್ಜಿದಾರರು ತನಗೆ ಹೆಚ್ಚಿನ ಕೆಲಸದ ಹೊರೆ ಹೊರಿಸುತ್ತಿದ್ದು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಕಿರುಕುಳದ ಬಗ್ಗೆ ದೂರು ನೀಡಲಾಗಿದ್ದರೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. 2012ರಲ್ಲಿ ತನ್ನನ್ನು ಅನ್ಯಾಯವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆಕೆ ಹೇಳಿದ್ದರು.