ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜ ಹಾರಿಸಲು ಕೊಂಡೊಯ್ಯುತ್ತಿದ್ದ ಕಂಬವು ವಿದ್ಯುತ್ ತಂತಿಗೆ ಸ್ಪರ್ಶಿಸಿ ಸಾವನ್ನಿಪ್ಪಿದ ಬಾಲಕನ ಕುಟುಂಬಕ್ಕೆ ವಿತರಿಸಲಾಗಿರುವ ₹1 ಲಕ್ಷ ಪರಿಹಾರ ಅತಿ ಸಣ್ಣ ಮೊತ್ತವಾಗಿದೆ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೇಳಿದೆ.
“ಬಾವುಟ ಹಾರಿಸಲು ಕಂಬ ಕೊಂಡೊಯ್ಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ದುರಂತ ಬಾಲಕನ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ… ಇದೇ ಥರದ ಘಟನೆ 2019ರ ಆಗಸ್ಟ್ 18ರಲ್ಲಿ ನಡೆದಾಗ ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿತ್ತು. ಈ ಪ್ರಕರಣದಲ್ಲಿ ಒಂದು ಲಕ್ಷ ರೂಪಾಯಿ ಮಾತ್ರ ಪರಿಹಾರ ವಿತರಿಸಲಾಗಿದೆ. ಇದು ದುರಂತ” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಅಲ್ಲದೇ, ಸಂತ್ರಸ್ತ ಬಾಲಕನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕೆಪಿಟಿಸಿಎಲ್) ನ್ಯಾಯಾಲಯ ನಿರ್ದೇಶಿಸಿತು. “ಪರಿಹಾರ ವಿತರಿಸುವಾಗ ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್ 2021ರ ಆಗಸ್ಟ್ 18ರಂದು ಹೊರಡಿಸಿರುವ ಆದೇಶವನ್ನು ಪಾಲಿಸಬೇಕು” ಎಂದು ಹೇಳಿದೆ. ಈ ಸಂಬಂಧ 30 ದಿನದ ಒಳಗೆ ಆದೇಶ ಹೊರಡಿಸಬೇಕು ಎಂದು ನ್ಯಾಯಾಲಯ ಕಟ್ಟಪ್ಪಣೆ ವಿಧಿಸಿದೆ.
ಸ್ವಾತಂತ್ರ್ಯ ದಿನದಂದು ಬಾವುಟ ಹಾರಿಸುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡ ಮಕ್ಕಳಿಗೆ ಪರಿಹಾರ ವಿತರಿಸುವ ಸಂಬಂಧ ನಿರ್ಧಾರ ಕೈಗೊಳ್ಳುವಂತೆಯೂ ಸರ್ಕಾರ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಜಿಲ್ಲಾಧಿಕಾರಿ ಸಲ್ಲಿಸಿರುವ ವಸ್ತುಸ್ಥಿತಿ ಸರ್ವೆ ವರದಿಯನ್ನು ರಾಜ್ಯ ಸರ್ಕಾರವು ವಿಚಾರಣೆಯ ಸಂದರ್ಭದಲ್ಲಿ ಪೀಠಕ್ಕೆ ಸಲ್ಲಿಸಿತು. ಮಕ್ಕಳು ಧ್ವಜ ಹಾರಿಸುವ ಪ್ರೇರೇಪಣೆಯಿಂದ ಮುಂದಾದಾಗ ಘಟನೆ ಸಂಭವಿಸಿರುವುದಾಗಿ ಹೇಳಲಾಗಿತ್ತು. ಇದಕ್ಕೆ ಆಕ್ಷೇಪಿಸಿದರು ನ್ಯಾಯಾಲಯವು, ಜಿಲ್ಲಾಧಿಕಾರಿ ಅವರು “ಶಾಲೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಸಮಸ್ಯೆಗೆ ವಿಭಿನ್ನ ಬಣ್ಣವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದೆ.
ಪ್ರಾಂಶುಪಾಲರು ಅಥವಾ ಶಿಕ್ಷಕರ ಸೂಚನೆಯಲ್ಲಿದೇ ಅಪ್ರಾಪ್ತ ಮಕ್ಕಳು ಇಂಥ ಕೆಲಸ ಮಾಡಲು ಪ್ರಯತ್ನಿಸುವುದಿಲ್ಲ ಎಂದು ಪೀಠ ಹೇಳಿದೆ. ಶಾಲೆಯ ವ್ಯಾಪ್ತಿಯಿಂದ ವಿದ್ಯುತ್ ತಂತಿಗಳನ್ನು ವರ್ಗಾಯಿಸಲಾಗಿದೆಯೇ ಎಂಬುದಕ್ಕೆ ಭಾಗಶಃ ವರ್ಗಾಯಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
“ಭಾಗಶಃ ವಿದ್ಯುತ್ ತಂತಿ ಬದಲಿಸಲಾಗಿದೆ ಎಂಬುದು ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ. ಇಡೀ ವಿದ್ಯುತ್ ಮಾರ್ಗ ಬದಲಿಸುವುದಲ್ಲದೇ, ಶಾಲೆಯ ವ್ಯಾಪ್ತಿಯಲ್ಲಿ 11 ಕೆಬಿ ವಿದ್ಯುತ್ ಮಾರ್ಗ ಹಾದುಹೋಗದಂತೆ ಖಾತರಿವಹಿಸಬೇಕು. 30 ದಿನಗಳ ಒಳಗೆ 11 ಕೆಬಿ ವಿದ್ಯುತ್ ಮಾರ್ಗವನ್ನು ಬದಲಿಸಬೇಕು” ಎಂದು ಕೆಪಿಟಿಸಿಎಲ್‌ಗೆ ನ್ಯಾಯಾಲಯ ನಿರ್ದೇಶಿಸಿದೆ.
11 ಕೆಬಿ ವಿದ್ಯುತ್ ಮಾರ್ಗ ಕೆಪಿಟಿಸಿಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂಸ್ಥೆಯ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಂಬಂಧಪಟ್ಟ ಎಲ್ಲ ಪರವಾನಗಿ ಪ್ರಾಧಿಕಾರಗಳಿಗೆ ನೋಟಿಸ್ ಜಾರಿ ಮಾಡಿತು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ವಕೀಲೆ ಬಿ ವಿ ವಿದ್ಯುಲ್ಲತಾ ಅವರು “ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೆರೆಯಲಾಗಿರುವ ಹಾಸ್ಟೆಲ್‌ಗಳಲ್ಲಿ ಶೌಚಾಲಯ, ಕುಡಿಯುವ ನೀರು, ಆಹಾರ ಇತ್ಯಾದಿ ಅತ್ಯಂತ ಕೆಳದರ್ಜೆಯಲ್ಲಿವೆ. ಮಕ್ಕಳು ಹಲವು ಸಂದರ್ಭದಲ್ಲಿ ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಇದೆ” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಟ್ಟರು. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಪಟ್ಟ ಹಾಸ್ಟೆಲ್‌ಗಳ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಸಂಬಂಧ ವರದಿ ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿತ್ತು. ಆದರೆ, ಇಲ್ಲಿಯವರೆಗೂ ನ್ಯಾಯಾಲಯಕ್ಕೆ ಆ ವರದಿ ಸಲ್ಲಿಸಲಾಗಿಲ್ಲ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಲಾಗಿದೆ.