ಖಾಸಗಿ ವ್ಯಕ್ತಿಗಳಿಂದ ದೇವಸ್ಥಾನದ ಸುತ್ತಲಿನ ಸರ್ಕಾರಿ ಜಾಗ ಒತ್ತುವರಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

35 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ದೇವಸ್ಥಾನಕ್ಕೆ ಬೀಗ ಹಾಕಿ, ಗ್ರಾಮಸ್ಥರು, ಭಕ್ತಾದಿಗಳು ದೇವಸ್ಥಾನ ಹಾಗೂ ಧರ್ಮಛತ್ರ ಬಳಸದಂತೆ ಮಾಡಲಾಗಿದೆ ಎಂದು ಆಕ್ಷೇಪ.
High Court of Karnataka
High Court of Karnataka
Published on

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಗ್ರಾಮದ ಪುರಾತನ ಈಶ್ವರ ದೇವಸ್ಥಾನದ ಸುತ್ತಲಿನ ಸರ್ಕಾರಿ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಗ್ರಾಮಸ್ಥರು ಮತ್ತು ಭಕ್ತಾದಿಗಳಿಗೆ ದೇವಸ್ಥಾನವನ್ನು ಪ್ರವೇಶಿಸುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.

ಉಚ್ಚಂಗಿದುರ್ಗ ನಿವಾಸಿ ಎ ಮನೋಹರ ಸೇರಿದಂತೆ ಹನ್ನೆರಡು ಮಂದಿ ಗ್ರಾಮಸ್ಥರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಜಯನಗರ ಜಿಲ್ಲಾಧಿಕಾರಿ, ಹರಪನಹಳ್ಳಿ ಉಪ ವಿಭಾಗಾಧಿಕಾರಿ, ಹರಪನಹಳ್ಳಿ ತಹಶೀಲ್ದಾರ್, ವಿಜಯನಗರ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಒತ್ತುವರಿದಾರರು ಎನ್ನಲಾದ ಮೂವರು ಖಾಸಗಿ ವ್ಯಕ್ತಿಗಳಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯದ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಉಚ್ಚಂಗಿದುರ್ಗ ಗ್ರಾಮಕ್ಕೆ ಸೇರಿದ ಜಮೀನಿನ ಸರ್ವೆ ನಂಬರ್ 541ರಲ್ಲಿ 35 ಗುಂಟೆ ಸರ್ಕಾರಿ ಜಮೀನು ಇದ್ದು, ಈ ಜಮೀನಿನಲ್ಲಿ ಪುರಾತನ ಈಶ್ವರ ದೇವಸ್ಥಾನವಿದೆ. ಇದಕ್ಕೆ ಹೊಂದಿಕೊಂಡು ಒಂದು ಧರ್ಮಛತ್ರ ಇದೆ. ಈ ಧರ್ಮಛತ್ರ 1930ರಲ್ಲಿ ಉದ್ಘಾಟನೆಗೊಂಡಿದೆ. ಇದನ್ನು ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿದ್ದರು. ಆದರೆ, ಸ್ಥಳೀಯ ಪ್ರಭಾವಿಗಳಾದ ಎಂ ಜಿ ಉದಯಶಂಕರಗೌಡ, ಎಂ ಜಿ ರಾಜಶೇಖರಗೌಡ, ಎಂ ಜಿ ಸಿದ್ದನಗೌಡ ಈ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಬೀಗ ಹಾಕಿ, ಗ್ರಾಮಸ್ಥರು ಮತ್ತು ಭಕ್ತಾದಿಗಳು ದೇವಸ್ಥಾನ ಹಾಗೂ ಧರ್ಮಛತ್ರ ಬಳಸದಂತೆ ಮಾಡಿದ್ದಾರೆ ಎಂದು ದೂರಿದರು.

ಆದ್ದರಿಂದ, ಉಚ್ಚಂಗಿದುರ್ಗ ಗ್ರಾಮದ ಈಶ್ವರ ದೇವಸ್ಥಾನ ಮತ್ತು ಧರ್ಮಛತ್ರದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು. ಈ ಸಂಬಂಧ ಅರ್ಜಿದಾರರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ 2022ರ ಡಿಸೆಂಬರ್ 22 ಮತ್ತು 2023ರ ಫೆಬ್ರವರಿ 24ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com