

ಕೆರೆ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿರುವ ಆರ್ಟ್ ಆಫ್ ಲೀವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್ ಅವರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ “ಪೊಲೀಸರು ನಿಮಗೆ ನೋಟಿಸ್ ನೀಡಿದಾಗ ಮಾತ್ರವೇ ತೊಂದರೆ ಅಲ್ಲವೇ” ಎಂದು ಪ್ರಶ್ನಿಸಿದ್ದು, ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿದೆ.
ಬೆಂಗಳೂರು ಮೆಟ್ರೊಪಾಲಿಟನ್ ಟಾಸ್ಕ್‌ಫೋರ್ಸ್ (ಬಿಎಂಟಿಎಫ್) ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಶ್ರೀಶ್ರೀ ರವಿಶಂಕರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಸಕದಸ್ಯ ಪೀಠ ವಿಚಾರಣೆ ನಡೆಸಿತು.
ರವಿಶಂಕರ್ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಅರ್ಜಿದಾರರ ವಿರುದ್ಧ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೇ ನಂಬರ್ 46, 135, 137, 150, 160, 164/1 ಮತ್ತು 164/2ರಲ್ಲಿನ ವಿವಿಧೆಡೆ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿದ ಸುಳ್ಳು ಆರೋಪ ಹೊರಿಸಲಾಗಿದೆ” ಎಂದರು.
“ವಾಸ್ತವದಲ್ಲಿ ಒತ್ತುವರಿ ಮಾಡಲಾಗಿದೆ ಎಂಬ ಜಮೀನುಗಳ ಮಾಲೀಕತ್ವಕ್ಕೂ ಮತ್ತು ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಒತ್ತುವರಿ ಟೇಬಲ್ ಕಾಲಂನಲ್ಲೂ ಅವರ ಹೆಸರಿಲ್ಲ. ಪೊಲೀಸರು ಅರ್ಜಿದಾರರ ಜೊತೆಗಿನ ಇತರ ನಾಲ್ವರು ಭೂ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಆದರೆ, ರವಿಶಂಕರ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ” ಎಂದು ಸ್ಪಷ್ಟಪಡಿಸಿದರು.
“ಇದೇ ಆರೋಪಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿತ್ತು. ಅದರಲ್ಲಿ ರವಿಶಂಕರ್ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಅಂತಿಮವಾಗಿ ತಹಶೀಲ್ದಾರ್ ನೀಡಿದ್ದ ವರದಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಸರ್ಕಾರಿ ಜಮೀನು ಒತ್ತುವರಿ ಆರೋಪ ಇರಲಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ನಂತರವೂ ರವಿಶಂಕರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಮಾನಸಿಕ ತೊಂದರೆ ನೀಡಲಾಗುತ್ತಿದೆ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯಿದೆ–1964ರ ಸೆಕ್ಷನ್ 192 ಎ ಅಡಿಯಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಪೊಲೀಸರು ನೋಟಿಸ್ ನೀಡಿಲ್ಲ ಎಂದಾದ ಮೇಲೆ ಯಾಕೆ ಈ ಅರ್ಜಿ ಸಲ್ಲಿಸಿದ್ದೀರಿ? ಒಂದು ವೇಳೆ ಪೊಲೀಸರು ನಿಮಗೆ ನೋಟಿಸ್ ನೀಡಿದರೆ ಆವಾಗ ಮಾತ್ರವೇ ತೊಂದರೆ ಅಲ್ಲವೇ” ಎಂದು ಪ್ರಶ್ನಿಸಿತು. ಅಲ್ಲದೇ, ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರಿಗೆ “ಅರ್ಜಿದಾರ ಶ್ರೀ ಶ್ರೀ ರವಿಶಂಕರ್ ಅವರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು” ಎಂದು ಮೌಖಿಕಾಗಿ ಆದೇಶಿಸಿತು. ಅಂತೆಯೇ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ’ ಎಂದು ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಲಾಗಿದೆ.