ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳನ್ನು ಉಲ್ಲಂಘಿಸಿ ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿಯ ಬ್ಯಾಂಕ್ ಖಾತೆಯಲ್ಲಿನ 5,551.27 ಕೋಟಿ ರೂಪಾಯಿ ಹಣ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯವು (ಇ ಡಿ) ಮಾಡಿದ್ದ ಆದೇಶವನ್ನು ಕಂಪೆನಿಯು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ.
ಜಾರಿ ನಿರ್ದೇಶನಾಲಯದ ಆದೇಶ ಪ್ರಶ್ನಿಸಿ ಶಓಮಿ ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಉಭಯ ಪಕ್ಷಕಾರರ ಪ್ರಾಥಮಿಕ ಆಕ್ಷೇಪಣೆಯನ್ನು ಒಳಗೊಂಡ ಲಿಖಿತ ಟಿಪ್ಪಣಿಯನ್ನು ಆಧರಿಸಿ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.
ಶಓಮಿ ಆಕ್ಷೇಪವು ಅಪಕ್ವವಾಗಿದ್ದು, ತನಿಖೆ ಮುಂದುವರಿಸುವುದು ಮತ್ತು ತನಿಖಾ ಸಂಸ್ಥೆ ನಂಬಬಹುದಾದ ವಿಚಾರಗಳಿದ್ದರೆ ತನಿಖೆ ನಡೆಸಬಹುದು. ಇಲ್ಲವಾದಲ್ಲಿ ಕಂಪೆನಿಯು ಆಸ್ತಿ ವಶಕ್ಕೆ ಪಡೆಯುವ ಜಾರಿ ನಿರ್ದೇನಾಲಯದ ಆದೇಶವು ಕಾನೂನಿಗೆ ವಿರುದ್ಧವಾಗಿದೆ ಎಂಬುದನ್ನು ಸಾಬೀತುಪಡಿಸಬೇಕು. ಶಿಯೋಮಿಯು ಯಾವುದೇ ಗುತ್ತಿಗೆ ಒಪ್ಪಂದ ಮಾಡಿಕೊಳ್ಳದೇ ಬೌದ್ಧಿಕ ಆಸ್ತಿ ಹಕ್ಕಿನ ಅಡಿ ವಿದೇಶಿ ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪಿಸಿದೆ.
ಶಓಮಿ ಪರ ವಕೀಲರು “ಭಾರತದ ಹೊರಗಿರುವ ಮೂರು ವಿದೇಶಿ ತಂತ್ರಜ್ಞಾನ ಕಂಪೆನಿಗಳಿಗೆ ರಾಯಧನ ಪಾವತಿಸಿರುವುದು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಸೆಕ್ಷನ್ 4ರ ಉಲ್ಲಂಘನೆ ಎನಿಸಿಕೊಳ್ಳುವುದಿಲ್ಲ. ಆದಾಯ ತೆರಿಗೆ ಇಲಾಖೆಯು ಇದನ್ನು ಕಾನೂನಾತ್ಮಕ ಎಂದು ಪರಿಗಣಿಸಿದ್ದು, ಕಡಿತ ಎಂದು ಪರಿಗಣಿಸಿದೆ” ಎಂದು ವಾದಿಸಿದ್ದರು.
“ತಂತ್ರಜ್ಞಾನ ರಾಯಧನ ಪಾವತಿಯನ್ನು 2015-16ರಿಂದ ಇಲ್ಲಿಯವರೆಗೆ ನೋಂದಾಯಿತ ಡೀಲರ್‌ಗಳ ಮೂಲಕ ಕಂಪೆನಿಯು ಪಾವತಿಸಿದ್ದು, ಶಓಮಿ ಭಾರತದ ಹೊರಗೆ ವಿದೇಶಿ ವಿನಿಮಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ, ಫೇಮಾದ ಸೆಕ್ಷನ್ 37ಎ ಅಡಿ ಜಾರಿ ನಿರ್ದೇಶನಾಲಯವು ಮಾಡಿರುವ ಆದೇಶವು ನಿಲ್ಲುವುದಿಲ್ಲ” ಎಂದು ಹೇಳಿದ್ದರು.
“ಜಾರಿ ನಿರ್ದೇಶನಾಲಯವು ಕಂಪೆನಿಯ ಖಾತೆಯನ್ನು ನಿರ್ಬಂಧಿಸಿರುವುದರಿಂದ ವ್ಯವಹಾರಕ್ಕೆ ತೊಡಕಾಗಿದೆ. ಇದರಿಂದ ಉದ್ಯೋಗಿಗಳಿಗೆ ವೇತನ ಮತ್ತು ಸಂಬಳ ಪಾವತಿಸಲು ಅಡ್ಡಿಯಾಗಿದೆ. ಸಿಬ್ಬಂದಿ ಕೊರತೆಯಿಂದ ಮೇಲ್ಮನವಿ ನ್ಯಾಯ ಮಂಡಳಿಯು ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಹೈಕೋರ್ಟ್ ಮೆಟ್ಟಿಲೇರಬೇಕಾಯಿತು” ಎಂದು ಶಓಮಿ ಪರ ವಕೀಲರು ಪೀಠದ ಗಮನಸೆಳೆದರು.