ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ವಿಜಯಿಯಾಗಿರುವ- ಭಯೋತ್ಪಾದನೆಗಾಗಿ ನಿಧಿ ಸಂಗ್ರಹ ಆರೋಪ ಹೊತ್ತಿರುವ ಎಂಜಿನಿಯರ್ ರಶೀದ್ ಅವರು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಮಧ್ಯಂತರ ಜಾಮೀನು ಕೋರಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್‌ಜೀತ್ ಸಿಂಗ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪ್ರತಿಕ್ರಿಯೆ ಕೇಳಿದ್ದು ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ ನಡೆಯಲಿದೆ.
ರಶೀದ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಮತ್ತಿತರ ಸಂಸತ್ತಿನ ಕಾರ್ಯ ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಕಸ್ಟಡಿ ಪೆರೋಲ್ ಕೋರಲಾಗುತ್ತಿದೆ ಎಂದು ಅವರ ಪರ ವಕೀಲ ವಿಖ್ಯಾತ್ ಒಬೆರಾಯ್ ತಿಳಿಸಿದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಶೀದ್ ಅವರು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎರಡು ಲಕ್ಷ ಮತಗಳಿಂದ ಸೋಲಿಸುವ ಮೂಲಕ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ವಿಜಯಿಯಾಗಿದ್ದಾರೆ. 2002ರಲ್ಲಿ ಹತ್ಯೆಗೀಡಾದ ಪ್ರತ್ಯೇಕತಾವಾದಿ ನಾಯಕ ಅಬ್ದುಲ್ ಗನಿ ಲೋನ್ ಅವರ ಪುತ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಗನಿ ಲೋನ್ ಅವರು ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಎಂಜಿನಿಯರ್ ರಶೀದ್ ಅವರು ಈ ಹಿಂದೆ ವಿಧಾನಸಭೆ ಸದಸ್ಯರಾಗಿದ್ದರು. ಅವರ ಪರವಾಗಿ ಅವರ ಮಕ್ಕಳಾದ ಅಬ್ರಾರ್ ರಶೀದ್ ಮತ್ತು ಅಸ್ರಾರ್ ರಶೀದ್ ಚುನಾವಣಾ ಪ್ರಚಾರ ನಡೆಸಿದ್ದರು.