

ಬೆಂಗಳೂರಿನ ಕನಕಪುರ ರಸ್ತೆಯ ತಾತಗುಣಿಯಲ್ಲಿರುವ ನಟಿ ದೇವಿಕಾ ರಾಣಿ ಮತ್ತು ರಷ್ಯಾದ ಪ್ರಖ್ಯಾತ ಕಲಾವಿದ ಸ್ವೆಟೋಸ್ಲಾವ್ ರೋರಿಚ್ ಮಾಲೀಕತ್ವಕ್ಕೆ ಒಳಪಟ್ಟಿದ್ದ ಎಸ್ಟೇಟ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆಯದಂತೆ ಖಾತರಿಪಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಐ ಕೇರ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ಸ್ವೆಟೋಸ್ಲಾವ್ ರೋರಿಚ್ ಎಸ್ಟೇಟ್‌ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಹಬ್ ಯೋಜನೆಗೆ ಅನುಮತಿಸಿ 2024ರ ಡಿಸೆಂಬರ್ 24ರಂದು ಹೊರಡಿಸಿರುವ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಸುಮಾರು 450 ಕಾರುಗಳನ್ನು ಪಾರ್ಕ್ ಮಾಡಲು ಸ್ಥಳ ನೀಡಲಾಗುತ್ತಿದೆ. ಸಾವಿರಾರು ಜನರು ಎಸ್ಟೇಟ್‌ಗೆ ಭೇಟಿ ನೀಡಲಿದ್ದಾರೆ. ಆನೆ ಕಾರಿಡಾರ್ ಹೊಂದಿರುವ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಗೆ ಬರುವ ಎಸ್ಟೇಟ್‌ನ ಪರಿಸರಕ್ಕೆ ಹಾನಿಯಾಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು “ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವ ಸ್ವೀಕರಿಸಿಲ್ಲ. ಈ ಹಂತದಲ್ಲಿ ಆಕ್ಷೇಪಾರ್ಹವಾದ ಯೋಜನೆಯನ್ನು ಜಾರಿಗೊಳಿಸಲಾಗದು” ಎಂದರು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.
ಎಸ್ಟೇಟ್ ಅನ್ನು ಪಾರಂಪರಿಕ ಜೀವವೈವಿಧ್ಯತೆಯ ತಾಣ ಅಥವಾ ಬಾಕಿ ಇರುವ ಎಸ್ಟೇಟ್ ಅನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಕಾಪಾಡಲು ರೋರಿಚ್ ಮಂಡಳಿಗೆ ನಿರ್ದೇಶಿಸಬೇಕು. ಎಸ್ಟೇಟ್‌ನಲ್ಲಿರುವ ಪರಿಸರ, ವನ್ಯಜೀವಿಗಳ ವೈಜ್ಞಾನಿಕ ಪ್ರೊಫೈಲಿಂಗ್ ಮಾಡಲು ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಲಾಗಿದೆ.
ದೇವಿಕಾ ರಾಣಿ ಮತ್ತು ರಷ್ಯಾದ ರೋರಿಚ್ ಅವರು ಪ್ರೀತಿಸಿ ವಿವಾಹವಾಗಿದ್ದರು. ಅವರ ಒಡೆತನದಲ್ಲಿ ಈ ಆಸ್ತಿ ಇತ್ತು. ಅವರ ಮರಣದ ಬಳಿಕ ಆಸ್ತಿಯು ವ್ಯಾಜ್ಯಕ್ಕೆ ನಾಂದಿಯಾಗಿತ್ತು. ಅಂತಿಮವಾಗಿ ರಾಜ್ಯ ಸರ್ಕಾರವು ರೋರಿಚ್ ಮತ್ತು ದೇವಿಕಾ ರಾಣಿ ರೋರಿಚ್ ಎಸ್ಟೇಟ್ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ರೂಪಿಸಿ, ಅದನ್ನು ರಕ್ಷಿಸಿತ್ತು.