ಸಮಸ್ಯೆಯಲ್ಲಿ ಇಡೀ ಹಿಮಾಲಯ: ಸುಪ್ರೀಂ ಕೋರ್ಟ್ ಆತಂಕ

ಹಿಮಾಚಲ ಪ್ರದೇಶದಲ್ಲಿ ಪರಿಸರ ನಾಶಕ್ಕೆ ಸಂಬಂಧಿಸಿದ ಪ್ರಕರಣದ ಕುರಿತಂತೆ ಸೆಪ್ಟೆಂಬರ್ 23ರಂದು ಆದೇಶ ಹೊರಡಿಸುವುದಾಗಿ ನ್ಯಾಯಾಲಯ ತಿಳಿಸಿದೆ.
ಸಮಸ್ಯೆಯಲ್ಲಿ ಇಡೀ ಹಿಮಾಲಯ: ಸುಪ್ರೀಂ ಕೋರ್ಟ್ ಆತಂಕ
Published on

ಇಡೀ ಹಿಮಾಲಯ ನೈಸರ್ಗಿಕ ವಿಕೋಪಗಳ ಅಪಾಯಕ್ಕೆ ತುತ್ತಾಗಿದ್ದು ಅದರಲ್ಲಿಯೂ ಈ ವಿಪತ್ತುಗಳು ಈ ವರ್ಷ "ಭಯಂಕರ" ರೂಪ ತಳೆದಿವೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕಳವಳ ವ್ಯಕ್ತಪಡಿಸಿದೆ [ಮೆಸರ್ಸ್‌ ಪ್ರಿಸ್ಟೈನ್ ಹೋಟೆಲ್ಸ್ ಮತ್ತು ರೆಸಾರ್ಟ್ಸ್ ಪ್ರೈ. ಲಿಮಿಟೆಡ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

ಹಿಮಾಚಲ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಸಮಸ್ಯೆಗೆ ಸಂಬಂಧಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠ  ಈ ಅಭಿಪ್ರಾಯ  ವ್ಯಕ್ತಪಡಿಸಿತು.

Also Read
ಪಹಾಡಿ ಭಾಷಿಕರಿಗೆ ಮೀಸಲಾತಿ, ಎಸ್‌ಟಿ ಸ್ಥಾನಮಾನ ನೀಡಿಕೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕಾಶ್ಮೀರ ಹೈಕೋರ್ಟ್

ಈ ಪರಿಸರ ಸಮಸ್ಯೆ ಕೇವಲ ಹಿಮಾಚಲ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ, ಬದಲಿಗೆ ಇಡೀ ಹಿಮಾಲಯ ಶ್ರೇಣಿಗೇ ಚಾಚಿಕೊಂಡಿದ್ದು ಈ ಬಾರಿ ಅದು ತುಂಬಾ ಭಯಂಕರ ರೂಪ ಪಡೆದಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಕೆ ಪರಮೇಶ್ವರ್, ರಾಜ್ಯ ಸರ್ಕಾರದ ವರದಿ ಹಲವಾರು ನ್ಯೂನತೆಗಳಿಂದ ಕೂಡಿದೆ ಎಂದು ಆಕ್ಷೇಪಿಸಿದರು. ಸರ್ಕಾರದ ವರದಿ ಯಾವುದೇ ನಿರ್ದಿಷ್ಟ ಕ್ರಮ  ಜರುಗಿಸಲು ಮುಂದಾಗದೆ ವಿವಿಧ ಅಂಶಗಳನ್ನು ಪರಿಶೀಲಿಸಲು ಸಮಿತಿ  ರಚಿಸುವಂತೆ ಸೂಚಿಸಿದೆ. ವರದಿಯಲ್ಲಿರುವ ಅಂಶಗಳು ತುಂಬಾ ವಿಶಾಲವಾದವಾಗಿದ್ದು, ಒಮ್ಮೆಗೇ ಇಡೀ ಸಮಸ್ಯೆ ಪರಿಹರಿಸಲು ಅಸಾಧ್ಯವಾಗಿದೆ ಎಂದರು.

ಆಗ ಇದು ಹಿಮಾಚಲ ಪ್ರದೇಶ ರಾಜ್ಯಕ್ಕೆ ಮಾತ್ರವೇ ಸೀಮಿತವಾದ ಸಮಸ್ಯೆಯಲ್ಲ ಎಂದ ನ್ಯಾಯಾಲಯ ಇಡೀ ಹಿಮಾಲಯದಲ್ಲಿನ ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪಿಐಎಲ್‌ ವ್ಯಾಪ್ತಿ ವಿಸ್ತರಿಸಲು ಉದ್ದೇಶಿಸಿರುವುದಾಗಿ ತಿಳಿಸಿತು. ಅಂತೆಯೇ ಆದೇಶ ಪ್ರಕಟಿಸಲು ಸೆಪ್ಟೆಂಬರ್ 23ರಂದು ಪ್ರಕರಣ ಪಟ್ಟಿ ಮಾಡುವಂತೆ ಅದು ಆದೇಶಿಸಿತು.

ಹಿಮಾಚಲ ಪ್ರದೇಶದಲ್ಲಿ ತೀವ್ರ ಪರಿಸರ ನಾಶ ಉಂಟಾಗಿದೆ ಎಂದಿದ್ದ ವರದಿಗಳನ್ನು ಗಮನಿಸಿದ್ದ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆಗಸ್ಟ್ 2025ರಲ್ಲಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.

Also Read
ಪ್ರವಾಸಿಗರಿಗೆ ಘನತ್ಯಾಜ್ಯ ನಿರ್ವಹಣಾ ಶುಲ್ಕ: ಹಿಮಾಚಲ ಪ್ರದೇಶ ಹೈಕೋರ್ಟ್ ಸಲಹೆ

ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದ ಪೀಠ, ಪ್ರಸ್ತುತ ನಡೆಯುತ್ತಿರುವ ಪರಿಸರ ಬಿಕ್ಕಟ್ಟನ್ನು ನಿಭಾಯಿಸಲು ವಿವರವಾದ ಕ್ರಿಯಾ ಯೋಜನೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ ನಿರ್ದೇಶನ ನೀಡಿತ್ತು.

"ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ. ತೀವ್ರ ಪರಿಸರ ಅಸಮತೋಲನ ಮತ್ತಿತರ ನೈಸರ್ಗಿಕ ಪರಿಸ್ಥಿತಿಗಳು ಹಲವು ವರ್ಷಗಳಿಂದ ಗಂಭೀರ ವಿಕೋಪಗಳಿಗೆ ಕಾರಣವಾಗಿವೆ. ಈ ವರ್ಷವೂ ಪ್ರವಾಹ ಮತ್ತು ಭೂಕುಸಿತದಲ್ಲಿ ನೂರಾರು ಜನ ಸಾವನ್ನಪ್ಪಿದ್ದು ಸಾವಿರಾರು ಆಸ್ತಿ ನಾಶ ಉಂಟಾಗಿದೆ. ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಪ್ರಕೃತಿ ಖಂಡಿತ ಸಿಟ್ಟಿಗೆದ್ದಿದೆ" ಎಂದು ಪೀಠ ಹೇಳಿತ್ತು.

Kannada Bar & Bench
kannada.barandbench.com