ವಿದೇಶಿ ವಕೀಲರು, ಸಂಸ್ಥೆಗಳಿಗೆ ದೇಶದಲ್ಲಿ ಅನುವು: ಬಿಸಿಐ ನಿಯಮಾವಳಿಗೆ ತಡೆ ಕೋರಿದ ದೆಹಲಿ ವಕೀಲರ ಪರಿಷತ್, ವಕೀಲರ ಸಂಘ

ಬಿಸಿಐ ನಿಯಮಾವಳಿ ವಕೀಲ ವೃತ್ತಿಗೆ ಭಾರೀ ದಕ್ಕೆ ತರುತ್ತದೆ ಮತ್ತು ಭಾರತೀಯ ವಕೀಲರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ದೆಹಲಿ ವಕೀಲರ ಪರಿಷತ್ (ಬಿಸಿಡಿ) ರಚಿಸಿದ್ದ ಸಮಿತಿಯ ವರದಿ ತಿಳಿಸಿದೆ.
Bar Council of Delhi (BCD), Delhi High Court Bar Association (DHBA)
Bar Council of Delhi (BCD), Delhi High Court Bar Association (DHBA)

ಭಾರತದಲ್ಲಿ ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಅಂತೆಯೇ ವಿದೇಶದಲ್ಲಿ ಭಾರತೀಯ ವಕೀಲರು ಪರಸ್ಪರ ಅನುವು ಮಾಡಿಕೊಡುವ ಆಧಾರದಲ್ಲಿ ಪ್ರಾಕ್ಟೀಸ್‌ ಮಾಡುವುದಕ್ಕೆ ಅನುಮತಿಸಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಇತ್ತೀಚೆಗೆ ಹೊರಡಿಸಿದ್ದ ನಿಯಮಾವಳಿಗೆ ತಡೆ ನೀಡಬೇಕೆಂದು ದೆಹಲಿಯ ಬಾರ್ ಕೌನ್ಸಿಲ್ (ಬಿಸಿಡಿ), ದೆಹಲಿ ಹೈಕೋರ್ಟ್ ವಕೀಲರ ಸಂಘ (ಡಿಎಚ್‌ಸಿಬಿಎ) ಹಾಗೂ ರಾಷ್ಟ್ರ ರಾಜಧಾನಿಯ  ವಿವಿಧ ವಕೀಲರ ಸಂಘಗಳು ಕೋರಿವೆ.

ಈ ಸಂಬಂಧ ಭಾರತೀಯ ವಕೀಲರ ಪರಿಷತ್ತಿಗೆ ಬಿಸಿಡಿ ಮಧ್ಯಂತರ ವರದಿ ಸಲ್ಲಿಸಿದ್ದು ಇದರಲ್ಲಿ ವಿದೇಶಿ ವಕೀಲರ ಪ್ರಾಕ್ಟೀಸ್‌ಗೆ ಸಂಬಂಧಿಸಿದಂತೆ ಬಿಸಿಐ ರೂಪಿಸಿರುವ ನಿಯಮಾವಳಿಯನ್ನು ಪರಿಗಣಿಸಿ ವರದಿ ನೀಡಲು ಮಾರ್ಚ್ 20, 2023 ರಂದು ವಿಶೇಷ ಸಮಿತಿ ರಚಿಸಲಾಗಿತ್ತು. ಬಿಸಿಐನ ನಿಯಮಾವಳಿ ದೇಶದಲ್ಲಿ ವಕೀಲ ವೃತ್ತಿ ಕೈಗೊಳ್ಳುವವರ ಮೇಲೆ ಗಂಭೀರ ಹಾಗೂ ದೂರಗಾಮಿ ಪರಿಣಾಮ ಬೀರುತ್ತದೆ ಎಂದು ಸಮಿತಿಯ ಸದಸ್ಯರು ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರುವುದಾಗಿ ತಿಳಿಸಲಾಗಿದೆ.

Also Read
ಭಾರತೀಯ ವಕೀಲರು ಇಂಗ್ಲೆಂಡ್‌ನಲ್ಲಿ ಪ್ರಾಕ್ಟೀಸ್ ಮಾಡಲು ಇರುವ ಷರತ್ತುಗಳೇನು? ಇಲ್ಲಿದೆ ಒಡಂಬಡಿಕೆಯ ವಿವರ

ದೇಶದ ವಕೀಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿಯಮಾವಳಿ ಜಾರಿಗೆ ತರಲಾಗಿದೆ. ಬಿಸಿಐ ನಿಯಮಾವಳಿ ವಕೀಲ ವೃತ್ತಿಗೆ ಭಾರೀ ದಕ್ಕೆ ತರುತ್ತದೆ ಮತ್ತು ಭಾರತೀಯ ವಕೀಲರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ವರದಿ ತಿಳಿಸಿದೆ. ನಿಯಮಾವಳಿ ಮತ್ತದರ ಪರಿಣಾಮಗಳ ಬಗ್ಗೆ ತಿಳಿಸಲು ಎಲ್ಲಾ ವಕೀಲರ ಸಂಘಗಳೊಂದಿಗೆ ಸಭೆ ನಡೆಸುವುದಾಗಿ ಸದಸ್ಯರು ನಿರ್ಣಯಿಸಿದ್ದಾರೆ ಎಂದೂ ವಿವರಿಸಲಾಗಿದೆ.

ಈ ಮಧ್ಯೆ, ನಿಯಮಗಳ ಪರಿಣಾಮವನ್ನು ತಡೆಹಿಡಿಯುವಂತೆ ಸದಸ್ಯರು ಬಿಸಿಐಗೆ ಮನವಿ ಮಾಡಿದ್ದಾರೆ. ವಿಶೇಷ ಸಮಿತಿ ಏರ್ಪಡಿಸಿದ್ದ ಮೂರು ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಬಿಸಿಡಿಯ ಮಧ್ಯಂತರ ವರದಿ ಒಳಗೊಂಡಿದೆ.

Kannada Bar & Bench
kannada.barandbench.com