ದೆಹಲಿ ಪೊಲೀಸ್ ಸೈಬರ್ ಅಪರಾಧ ವಿಭಾಗ ದಾಖಲಿಸಿರುವ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತ ಶುಭಂ ಕರ್ ಚೌಧರಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಮಾರ್ಚ್ 12 ರಂದು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
ಗೋವಾದ ಬಾಂಬೆ ಹೈಕೋರ್ಟ್ ಮಾರ್ಚ್ 4 ರಂದು ಚೌಧರಿ ಅವರಿಗೆ 10 ದಿನಗಳ ತಾತ್ಕಾಲಿಕ (ಟ್ರಾನ್ಸಿಟ್) ಜಾಮೀನು ನೀಡಿತ್ತು. ಆಗ ಸಹ ಆರೋಪಿಗಳಾದ ನಿಕಿತಾ ಜೇಕಬ್, ಶಂತನು ಮುಲುಕ್ ಮತ್ತು ದಿಶಾ ರವಿ ಅವರು ಟೂಲ್‌ಕಿಟ್ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಚೌಧರಿ ವಾದ ಮಂಡಿಸಿದ್ದರು.
ಇದೇ ವೇಳೆ ನಿಕಿತಾ ಜೇಕಬ್ ಅವರಿಗೆ ಬಾಂಬೆ ಹೈಕೋರ್ಟ್ ಪ್ರಧಾನ ಪೀಠ ಮೂರು ವಾರಗಳವರೆಗೆ ತಾತ್ಕಾಲಿಕ ಜಾಮೀನು ನೀಡಿತ್ತು. ನಂತರ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿಯ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮತ್ತೊಂದೆಡೆ ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ 10 ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು. ಇದನ್ನು ದೆಹಲಿ ಸೆಷನ್ಸ್ ನ್ಯಾಯಾಲಯ ಮಾರ್ಚ್ 9ರವರೆಗೆ ವಿಸ್ತರಿಸಿತ್ತು. ಇದಕ್ಕೂ ಮುನ್ನ ದೆಹಲಿ ಸೆಷನ್ಸ್ ನ್ಯಾಯಾಲಯ 22 ವರ್ಷದ ದಿಶಾ ರವಿ ಅವರಿಗೆ ಜಾಮೀನು ನೀಡಿತ್ತು. ಆ ಸಂದರ್ಭದಲ್ಲಿ ಸರ್ಕಾರದ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಪ್ರಜೆಗಳನ್ನು ಜೈಲಿಗೆ ಹಾಕಲಾಗದು ಎಂದು ನ್ಯಾಯಾಲಯ ಹೇಳಿತ್ತು.