ಫಾರೆಸ್ಟ್‌ ವಾಚರ್‌ಗಳಿಗೆ ಸರಿಸಮನಾದ ವೇತನವನ್ನು ಫೀಲ್ಡ್‌ ವರ್ಕರ್‌ಗಳಿಗೂ ವಿಸ್ತರಿಸಲು ಎಂಪಿಎಂಗೆ ಹೈಕೋರ್ಟ್‌ ಆದೇಶ

ಕಾರ್ಮಿಕರಿಂದ ದುಡಿಸಿಕೊಂಡು ಆ ನಂತರ ಸಂಸ್ಥೆಯು ನಷ್ಟದಲ್ಲಿರುವುದರಿಂದ ವೇತನ ಪಾವತಿಸಲಾಗದು, ಕನಿಷ್ಠ ಕೂಲಿ ಮಾತ್ರ ಪಾವತಿಸುತ್ತೇವೆ ಎಂದು ಸರ್ಕಾರ ವಾದಿಸಲಾಗದು ಎಂದ ನ್ಯಾಯಾಲಯ.
Karnataka HC and Justice Suraj Govindaraj
Karnataka HC and Justice Suraj Govindaraj

ಶಿವಮೊಗ್ಗದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ ನಿಯಮಿತದಲ್ಲಿ (ಎಂಪಿಎಂ) ಕರ್ತವ್ಯ ನಿರ್ವಹಿಸುತ್ತಿರುವ 529 ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮದ ಅಡಿ ಅರಣ್ಯ ಇಲಾಖೆಯು ಫಾರೆಸ್ಟ್‌ ವಾಚರ್‌ಗಳಿಗೆ ನೀಡುತ್ತಿರುವ ವೇತನಕ್ಕೆ ಸರಿಸಮನಾದ ವೇತನ ಪಾತಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳ ಉದ್ಯೋಗ ಕಾಯಂಗೊಳಿಸಬೇಕು ಮತ್ತು ಸಮಾನ ವೇತನ ಜಾರಿ ಮಾಡಬೇಕು ಎಂದು ಕೋರಿ ಮೈಸೂರು ಪೇಪರ್‌ ಮಿಲ್ಸ್‌ ಫಾರೆಸ್ಟ್‌ ಎಂಪ್ಲಾಯಿಸ್‌ ಅಸೋಸಿಯೇಶನ್‌ ಮತ್ತು ಶಿವಮೊಗ್ಗ ಜಿಲ್ಲಾ ಎಂಪಿಎಂ ನೌಕರರ ಸಂಘಗಳು ವರ್ಕ್‌ಮೆನ್‌ ಆಫ್‌ ಮೈಸೂರು ಪೇಪರ್‌ ಮಿಲ್ಸ್‌ ಲಿಮಿಟೆಡ್‌ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಅರ್ಜಿದಾರರಾದ ವರ್ಕ್‌ಮೆನ್‌ ಆಫ್‌ ಮೈಸೂರು ಪೇಪರ್‌ ಮಿಲ್ಸ್‌ ಲಿಮಿಟೆಡ್‌ನ  ಸದಸ್ಯರಿಗೆ ಇಎಸ್‌ಐ, ಪಿಎಫ್‌ ಕಡಿತ ಮಾಡಿದ ಬಳಿಕ 12,033 ರೂಪಾಯಿ ಪೈಕಿ 10,543 ರೂಪಾಯಿ ಪಾವತಿಸಲಾಗುತ್ತಿದೆ. ಆದರೆ, ಅರಣ್ಯ ಇಲಾಖೆಯ ಫಾರೆಸ್ಟ್‌ ವಾಚರ್‌ಗಳಿಗೆ 18,600 ರೂಪಾಯಿ ಮೂಲ ವೇತನ ಮತ್ತು 1,116 ರೂಪಾಯಿಗಳನ್ನು ಗೃಹ ಬಾಡಿಗೆಯ ರೂಪದಲ್ಲಿ ಪಾವತಿಸಲಾಗುತ್ತಿದೆ. ಇದರ ಜೊತೆಗೆ ಪ್ರತ್ಯೇಕವಾಗಿ ತುಟ್ಟಿಭತ್ಯೆ ಸಹ ಇದೆ. ಹೀಗಾಗಿ, ಇಷ್ಟೇ ಮೊತ್ತವನ್ನು ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳಿಗೂ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಎಂಪಿಎಂ ನಷ್ಟದಲ್ಲಿರುವುದರಿಂದ ಕನಿಷ್ಠ ಕೂಲಿಗಿಂತ ಹೆಚ್ಚು ಕೂಲಿ ಪಾವತಿಸಲಾಗದು ಎಂಬ ಸರ್ಕಾರದ ವಾದವನ್ನು ಒಪ್ಪಲಾಗದು. ರಾಜ್ಯ ಸರ್ಕಾರವು ಮಾದರಿ ಉದ್ಯೋಗದಾತನಾಗಿದ್ದು, ಅಗತ್ಯವಾದ ಕೂಲಿ ಪಾವತಿಸುವುದು ಅಗತ್ಯ. ಕಾರ್ಮಿಕರಿಂದ ದುಡಿಸಿಕೊಂಡು ತದನಂತರ ಸರ್ಕಾರದ ಸಂಸ್ಥೆಯು ನಷ್ಟದಲ್ಲಿರುವುದರಿಂದ ವೇತನ ಪಾವತಿಸಲಾಗದು. ಕನಿಷ್ಠ ಕೂಲಿ ಮಾತ್ರ ಪಾವತಿಸುತ್ತೇವೆ ಎಂದು ಹೇಳಲಾಗದು” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, “2008ರ ಜುಲೈನಲ್ಲಿ ಬೆಂಗಳೂರಿನ ಹೆಚ್ಚುವರಿ ಕೈಗಾರಿಕಾ ನ್ಯಾಯ ಮಂಡಳಿ ಮಾಡಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ರಾಜ್ಯ ಸರ್ಕಾರವು 2018ರ ಫೆಬ್ರವರಿ 20ರಂದು ವಿಧೇಯಕ ಪ್ರಕಟಿಸಿದಾಗಿನಿಂದ ಇಂದಿನವರೆಗೆ ಅರಣ್ಯ ಇಲಾಖೆಯು ಫಾರೆಸ್ಟ್‌ ವಾಚರ್‌ಗಳಿಗೆ ನೀಡಿರುವ ಕೂಲಿಯನ್ನು ವಿಧೇಯಕದಲ್ಲಿರುವ ಅರ್ಜಿದಾರರಿಗೂ ವಿಸ್ತರಿಸಬೇಕು. ಈ ಹಣವನ್ನು ಮೂರು ತಿಂಗಳಲ್ಲಿ ಪಾವತಿಸಬೇಕು” ಎಂದು ಪೀಠ ಗಡುವು ವಿಧಿಸಿದೆ.

ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳ ಸೇವೆ ಕಾಯಂಗೊಳಿಸುವಂತೆ ಕೋರಿ ಕೈಗಾರಿಕಾ ವಿವಾದಗಳ ಕಾಯಿದೆ ಸೆಕ್ಷನ್‌ 10(1)(ಡಿ)ರ ಅಡಿ ಸಲ್ಲಿಸಿದ್ದ ಕೋರಿಕೆಯನ್ನು ರಾಜ್ಯ ಸರ್ಕಾರವು 2005ರ ಸೆಪ್ಟೆಂಬರ್‌ 22ರ ಕೈಗಾರಿಕಾ ನ್ಯಾಯ ಮಂಡಳಿಗೆ ವರ್ಗಾಯಿಸಿತ್ತು.

ಇದರ ವಿಚಾರಣೆ ನಡೆಸಿದ್ದ ನ್ಯಾಯ ಮಂಡಳಿಯು "ಫಾರೆಸ್ಟ್‌ ಪ್ಲಾಂಟೇಶನ್‌ ವಾಚರ್‌ಗಳು ಮತ್ತು ಡ್ರೈವರ್‌ಗಳ ಹುದ್ದೆಯ ರೀತಿ ಸೇವೆ ಕಾಯಮಾತಿಗೆ ಅವರಿಗೆ (ಫೀಲ್ಡ್‌ ವರ್ಕರ್‌ಗಳಿಗೆ) ಹಕ್ಕಿಲ್ಲ. ಕೈಗಾರಿಕಾ ವಿವಾದಗಳ ಕಾಯಿದೆ ಅಡಿ ಲಭ್ಯವಿರುವ ಸೌಲಭ್ಯಗಳು ಮತ್ತು ಕೂಲಿಗೆ ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳನ್ನು ಅರ್ಹರಾಗಿದ್ದಾರೆ. ಆದರೆ, ಆಡಳಿತ ಮಂಡಳಿಯು ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳ ಸೇವೆಯನ್ನು ವಜಾ ಮಾಡುವಂತಿಲ್ಲ” ಎಂದು 2008ರ ಜುಲೈ 25ರಂದು ನ್ಯಾಯ ಮಂಡಳಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಅರ್ಜಿದಾರರು ಕೋರಿದ್ದರೂ ಇದಕ್ಕೆ ಆದ್ಯತೆ ದೊರೆತಿಲ್ಲ. ಫಾರೆಸ್ಟ್‌ ವಾಚರ್‌ಗಳು ಮಾಡುವ ಕೆಲಸವನ್ನೇ ಫಾರೆಸ್ಟ್‌ ಫೀಲ್ಡ್‌ ವರ್ಕರ್‌ಗಳು ಮಾಡುತ್ತಿರುವುದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿದಾರರ ಪರವಾಗಿ ವಕೀಲ ವಿ ಎಸ್‌ ನಾಯಕ್‌ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com