ವ್ಯಂಗ್ಯಚಿತ್ರಕಾರನ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಅರ್ಜಿದಾರರ ನಡೆ ಯಾವುದೇ ಅಪರಾಧ ಒಳಗೊಂಡಿಲ್ಲವಾದರೂ ಅದು ನೈತಿಕತೆಯಿಂದ ಕೂಡಿಲ್ಲದೇ ಇರಬಹುದು ಎಂದು ನ್ಯಾಯಮೂರ್ತಿ ಜಿ ಇಳಂಗೋವನ್‌ ಹೇಳಿದ್ದಾರೆ.
Madras High Court, Madurai Bench
Madras High Court, Madurai Bench

ಫೇಸ್‌ಬುಕ್‌ನಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿದ ಕಲಾವಿದ ಬಾಲಮುರುಗನ್‌ ವಿರುದ್ಧದ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆಯನ್ನು ಇತ್ತೀಚೆಗೆ ರದ್ದುಗೊಳಿಸಿರುವ ಮದ್ರಾಸ್‌ ಹೈಕೋರ್ಟ್‌ “ನ್ಯಾಯಾಲಯ ಜನರಿಗೆ ನೈತಿಕತೆಯ ಪಾಠ ಕಲಿಸಲಾಗದು” ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ನಡೆ ಯಾವುದೇ ಅಪರಾಧ ಒಳಗೊಂಡಿಲ್ಲವಾದರೂ ಅದು ನೈತಿಕತೆಯಿಂದ ಕೂಡಿಲ್ಲದೇ ಇರಬಹುದು ಎಂದು ನ್ಯಾಯಮೂರ್ತಿ ಜಿ ಇಳಂಗೋವನ್‌ ಹೇಳಿದ್ದಾರೆ. ಆದರೆ ನ್ಯಾಯಾಲಯ ಜನರಿಗೆ ನೈತಿಕತೆ ಕಲಿಸಲು ಸಾಧ್ಯವಿಲ್ಲ ಮತ್ತು ನೈತಿಕತೆಯ ವಿಕಸನ ಮತ್ತು ಅದರ ಅನುಸರಣೆ ಸಮಾಜಕ್ಕೆ ಬಿಟ್ಟದ್ದು” ಎಂದು ಅವರು ತಿಳಿಸಿದ್ದಾರೆ.

ಬಡ್ಡಿದಾರರ ಕಾಟ ತಾಳಲಾರದೆ ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿಯೆದುರು ಕುಟುಂಬವೊಂದರ ಸದಸ್ಯರು 2017ರಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ವ್ಯಂಗ್ಯಚಿತ್ರಕಾರ ಬಾಲಮುರುಗನ್‌ ಫೇಸ್‌ಬುಕ್‌ನ ತಮ್ಮ ವೈಯಕ್ತಿಕ ಪುಟದಲ್ಲಿ ವ್ಯಂಗ್ಯಚಿತ್ರ ಪ್ರಕಟಿಸಿದ್ದರು.

ಕಾರ್ಟೂನ್‌ನಲ್ಲಿ ಮಗುವೊಂದು ಸಜೀವ ದಹನವಾಗುತ್ತಿರುವುದನ್ನು ತೋರಿಸಲಾಗಿತ್ತು. ಆ ಮಗುವಿನ ಎದುರು ತಮಿಳುನಾಡಿನ ಅಂದಿನ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಗ್ನವಾಗಿ ನಿಂತಿದ್ದಾರೆ. ಅವರ ಖಾಸಗಿ ಭಾಗಗಳನ್ನು ನೋಟುಗಳಿಂದ ಮುಚ್ಚುಕೊಂಡಿರುವಂತೆ ಚಿತ್ರಿಸಲಾಗಿತ್ತು.

ವ್ಯಂಗ್ಯಚಿತ್ರ ಅಶ್ಲೀಲ, ಅಪಮಾನಕರ ಹಾಗೂ ಮಾನಹಾನಿಕರವಾಗಿದೆಯೆಂದು ಜಿಲ್ಲಾಧಿಕಾರಿ ದೂರು ನೀಡಿದ್ದರು. ಇದನ್ನು ಆಧರಿಸಿ ಐಪಿಸಿ ಸೆಕ್ಷನ್‌ 501 (ಕ್ರಿಮಿನಲ್ ಮಾನಹಾನಿ) 2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯ- ಸೆಕ್ಷನ್ 67ರಡಿ (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಪ್ರಕರಣ ದಾಖಲಿಸಲಾಗಿತ್ತು. ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸುವಂತೆ ಆರೋಪಿ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣ ರದ್ದತಿ ವೇಳೆ ನ್ಯಾಯಾಲಯ ಹೇಳಿದ ಪ್ರಮುಖ ವಿಚಾರಗಳು:

  • ಪ್ರಜಾಪ್ರಭುತ್ವ ದೇಶವೊಂದರಲ್ಲಿ ಚಿಂತನೆ, ಅಭಿವ್ಯಕ್ತಿ ಮತ್ತು ವಾಕ್‌ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವದ ಅಡಿಪಾಯಗಳಾಗಿದ್ದು ಇವು ಇಲ್ಲದೆ ಯಾವ ಪ್ರಜಾಪ್ರಭುತ್ವವೂ ಇರಲಾರದು ಹಾಗೂ ಅವುಗಳ ಅನುಪಸ್ಥಿತಿಯಿಂದಾಗಿ ಮಾನವ ಸಮಾಜ ವಿಕಸನವಾಗದು.

  • ಸಾಲಗಾರರು ಅತಿಯಾದ ಬಡ್ಡಿ ಬೇಡಿಕೆ ಇಟ್ಟಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೂರು ಜೀವಗಳು ಪ್ರಾಣ ಕಳೆದುಕೊಂಡವು. ಘಟನೆಯ ಹಿಂದಿನ ದುಃಖ, ಟೀಕೆ ಅಥವಾ ಸಾಮಾಜಿಕ ಹಿತಾಸಕ್ತಿಯನ್ನು ಉಲ್ಲೇಖಿಸಿ ಅರ್ಜಿದಾರ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಿಸಿದುದರ ಬಗ್ಗೆ ಸಮಸ್ಯೆ ಇರಲಿಲ್ಲ ಆದರೆ ಅದನ್ನು ವ್ಯಕ್ತಪಡಿಸಿದ ರೀತಿ ವಿವಾದಾತ್ಮಕವಾಯಿತು. ಕಾರ್ಯಾಂಗದ ಮುಖ್ಯಸ್ಥರಿಂದ ಹಿಡಿದು ಜಿಲ್ಲಾ ಪೊಲೀಸರವರೆಗೆ ಅವರನ್ನು ಆ ರೂಪದಲ್ಲಿ ಚಿತ್ರಿಸಿದ್ದು ವಿವಾದ ಸೃಷ್ಟಿಸಿತು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಹೀಗಾಗಿ ವ್ಯಂಗ್ಯಚಿತ್ರವನ್ನು ವಿಭಿನ್ನ ವ್ಯಕ್ತಿಗಳು ವಿಭಿನ್ನವಾಗಿ ಗ್ರಹಿಸಲು ಸಾಧ್ಗವಿದೆ. ಕೆಲವರು ವ್ಯಂಗ್ಯಚಿತ್ರವನ್ನುಅ ತಿಯಾದ ಉತ್ಪ್ರೇಕ್ಷೆ ಅಥವಾ ಅಶ್ಲೀಲ ಎಂದು ಭಾವಿಸಿದರೆ ಇತರರು ಇದು ಪ್ರಜೆಗಳ ಜೀವ ರಕ್ಷಿಸಬೇಕಿದ್ದ ಅಧಿಕಾರಿಗಳ ಔದಾಸೀನ್ಯವನ್ನು ತೋರುತ್ತದೆ ಎಂದುಕೊಳ್ಳಬಹುದು.

  • ವ್ಯಂಗ್ಯಚಿತ್ರ ಜಿಲ್ಲಾಧಿಕಾರಿಗಳ ಮನಸ್ಸಿನಲ್ಲಿ ಅವಮಾನದ ಭಾವನೆ ಸೃಷ್ಟಿಸಬಹುದಾದರೂ ಸಾಲಗಾರರ ಅತಿಯಾದ ಬಡ್ಡಿ ಆಸೆಯ ಬಗ್ಗೆ ಅಧಿಕಾರಿಗಳ ಮನೋಭಾವವನ್ನು ಚಿತ್ರಿಸುವುದು ಅರ್ಜಿದಾರರ ಉದ್ದೇಶವಾಗಿತ್ತು.

  • ಯಾವ ನೆಲೆಯಿಂದಲೂ ಜಿಲ್ಲಾಧಿಕಾರಿಗಳ ಮಾನಹಾನಿ ಮಾಡುವುದು ಅರ್ಜಿದಾರರ ಉದ್ದೇಶವಾಗಿರಲಿಲ್ಲ. ಅರ್ಜಿದಾರರ ವಿರುದ್ಧದ ತನಿಖೆ ಮುಂದುವರೆಸುವುದರಲ್ಲಿ ಯಾವುದೇ ಉದ್ದೇಶ ಸಾಕಾರಗೊಳ್ಳುವುದಿಲ್ಲ. ವ್ಯಂಗ್ಯಚಿತ್ರ ಯಾವುದೇ ಅಪರಾಧವನ್ನು ಒಳಗೊಂಡಿಲ್ಲ. ಆದ್ದರಿಂದ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸಲು ಅರ್ಹವಾದ ಪ್ರಕರಣ ಇದು.

ಅರ್ಜಿದಾರರ ಪರವಾಗಿ ವಕೀಲ ಎಸ್ ವಾಂಚಿನಾಥನ್, ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಎಂ ಗಣೇಶನ್ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com