
“ಹೋಗಿ ಸಾಯಿ” ಎಂದು ಹೇಳುವುದು ಆತ್ಮಹತ್ಯೆಗೆ ಪ್ರಚೋದನೆ ನೀಡುವ ಅಂಶವಾಗುವುದಿಲ್ಲ ಎಂದು ಸ್ಪಷ್ಟಪಡಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಮಹಿಳಾ ತನಿಖಾಧಿಕಾರಿಯ ವೈಫಲ್ಯಗಳನ್ನು ಪಟ್ಟಿ ಮಾಡುವ ಮೂಲಕ ಸೀಮೆಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿನ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಈಚೆಗೆ ಎತ್ತಿ ಹಿಡಿದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಿರೇಕಬ್ಬೂರಿನ ರಾಮಪ್ಪ, ಸುರೇಶ್ ಮತ್ತು ಸ್ವರೂಪವ್ವ ಅವರನ್ನು ಖುಲಾಸೆಗೊಳಿಸಿ ಹಾವೇರಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ ಬಸವರಾಜ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.
“ಸಂತ್ರಸ್ತೆಯ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಒಳಗೊಂಡ (ಕೇಸ್ ಶೀಟ್) ದಾಖಲೆಯನ್ನು ತನಿಖಾಧಿಕಾರಿ ಪರಿಶೀಲಿಸಿಲ್ಲ. ಕೇಸ್ ಶೀಟ್ ಸಲ್ಲಿಸಿದ್ದರೆ ಅದರಲ್ಲಿ ಸಂತ್ರಸ್ತೆಯ ಆರೋಗ್ಯ ಪರಿಸ್ಥಿತಿಗೆ ಸಂಬಂಧಿಸಿದ ಸತ್ಯ ಹೊರಬರುತ್ತಿತ್ತು. ಗಾಯಾಳುವಿನ ಉಸಿರಾಟದ ವ್ಯವಸ್ಥೆ, ದೇಹದಲ್ಲಿನ ಗಾಯದ ವಿವರ, ರೋಗಿಗೆ ಪ್ರಜ್ಞೆ ಇರುವಿಕೆ, ರಕ್ತದೊತ್ತಡ ಮತ್ತು ಅವರಿಗೆ ನೀಡಲಾಗಿರುವ ಚಿಕಿತ್ಸೆಯ ವಿವರ ಅದರಲ್ಲಿ ಇರುತ್ತಿತ್ತು. ಕೇಸ್ ಶೀಟಿನ ಗೈರಿನಲ್ಲಿ ಗಾಯಾಳು ಹೇಳಿಕೆ ನೀಡಲು ಸಮರ್ಥರಾಗಿದ್ದರೆ ಅಥವಾ ಇಲ್ಲವೇ ಎಂದು ಹೇಳಲಾಗದು. ಈ ನೆಲೆಯಲ್ಲಿ ತನಿಖಾಧಿಕಾರಿಯು ಕೇಸ್ ಶೀಟ್ ಹಾಜರುಪಡಿಸಿಲ್ಲದ್ದರ ಕುರಿತು ವಿವರಣೆ ನೀಡಿಲ್ಲ ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿರುವುದು ಸರಿಯಾಗಿದೆ. ಇನ್ನು, ಪ್ರಾಸಿಕ್ಯೂಷನ್ ಸಹ ಗಾಯಾಳುವಿಗೆ ಸಂಬಂಧಿಸಿದ ಕೇಸ್ ಶೀಟ್ ಸಂಗ್ರಹಿಸಲು ಯಾವುದೇ ಪ್ರಯತ್ನ ಮಾಡಿಲ್ಲ. ಗಾಯಾಳುವಿನ ಕೇಸ್ ಶೀಟ್ ಪ್ರಮುಖವಾದ ದಾಖಲೆಯಾಗಿದ್ದು, ಇದನ್ನು ಪ್ರಾಸಿಕ್ಯೂಷನ್ ಪ್ರಸ್ತುತ ಪಡಿಸಿಲ್ಲ. ಸಾಕ್ಷ್ಯವನ್ನು ಯಾರು ಮರೆಮಾಚಿರುತ್ತಾರೋ, ಆ ಸಾಕ್ಷ್ಯವನ್ನು ಪ್ರಸ್ತುತಪಡಿಸಿದಾಗ ಅದು ತನ್ನನ್ನು ತಡೆದವರಿಗೆ ವಿರುದ್ಧವಾಗುತ್ತದೆ ಎಂದು ಸೆಕ್ಷನ್ 114(ಜಿ)ಯಲ್ಲಿ ತಿಳಿಸಿರುವಂತೆ ಪ್ರತಿಕೂಲ ನಿರ್ಣಯವನ್ನು ಮಾಡಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಗಾಯಾಳುವಿಗೆ ಸಂಬಂಧಿಸಿದ ಕೇಸ್ ಶೀಟು ಪ್ರಸ್ತುತಪಡಿಸದಿರುವುದು ಮತ್ತು ಸಂತ್ರಸ್ತೆ ಸಾವನ್ನಪ್ಪಿದ ನಂತರ ತಡವಾಗಿ ಎಫ್‌ಐಆರ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಮತ್ತು ದೇಹದಲ್ಲಿ ಶೇ. 90-95ರಷ್ಟು ಸುಟ್ಟ ಗಾಯಗಳಾಗಿದ್ದರೂ ಗಾಯಾಳು ಹೇಳಿಕೆ ನೀಡುವ ಪರಿಸ್ಥಿತಿಯಲ್ಲಿ ಇದ್ದರೇ ಎಂಬುದಕ್ಕೆ ಸಕಾರಣ ಅನುಮಾನಗಳನ್ನು ಹುಟ್ಟು ಹಾಕುತ್ತವೆ. ಇದರ ಜೊತೆಗೆ ತನಿಖಾಧಿಕಾರಿಯು ತಾಲ್ಲೂಕು ದಂಡಾಧಿಕಾರಿಯ ಸಮ್ಮುಖದಲ್ಲಿ ಗಾಯಾಳು ಸಾಯುವುದಕ್ಕೂ ಮುನ್ನ ಮರಣಪೂರ್ವ ಹೇಳಿಕೆ ದಾಖಲಿಸಲು ಕ್ರಮಕೈಗೊಂಡಿಲ್ಲ. ತನಿಖಾಧಿಕಾರಿಯಾಗಿದ್ದ ಶಿಲ್ಪಾ ಅವರು ತಹಶೀಲ್ದಾರ್‌ಗೆ ಮರಣ ಉಯಿಲು ದಾಖಲಿಸಲು ಮನವಿ ಸಲ್ಲಿಸಿಲ್ಲ. ಅದಾಗ್ಯೂ, ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ತಾನು ಸಂಬಂಧಿತ ತಹಶೀಲ್ದಾರ್‌ಗೆ ಮರಣ ಉಯಿಲು ದಾಖಲಿಸಲು ಮನವಿ ಸಲ್ಲಿಸಿದ್ದಾಗಿ ಹೇಳಿದ್ದಾರೆ. ಇದು ಪ್ರಾಸಿಕ್ಯೂಷನ್ ಸಲ್ಲಿಸಿರುವ ದಾಖಲೆಗಳಿಗೆ ವಿರುದ್ಧವಾಗಿದೆ. ತನಿಖಾಧಿಕಾರಿಯು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ. ಯಾಂತ್ರಿಕವಾಗಿ ತಾನು ಮರಣ ಉಯಿಲು ದಾಖಲಿಸಲು ತಹಶೀಲ್ದಾರ್‌ಗೆ ಕೋರಿದ್ದಾಗಿ ಹೇಳಿದ್ದಾರೆ. ಅಲ್ಲದೇ, ತನಿಖಾಧಿಕಾರಿಯಾದ ಶಿಲ್ಪಾ ಅವರು ನ್ಯಾಯಾಲಯಕ್ಕೆ ತಡವಾಗಿ ಎಫ್‌ಐಆರ್ ಕಳುಹಿಸಲು ಕಾರಣವೇನು ಎಂಬುದನ್ನೂ ವಿವರಿಸಿಲ್ಲ. ಇದೆಲ್ಲವೂ ಆರೋಪಿಗಳ ಮೇಲೆ ಹೊರಿಸಿರುವ ಆಪಾದನೆಯ ಮೇಲೆ ಅನುಮಾನ ಹುಟ್ಟಿಸುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.
ಇನ್ನು, “ಹೋಗಿ ಸಾಯಿ ಎಂದು ನಿಂದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ನಾಗರಾಜು ಅವರು ಆರೋಪಿಗಳು ನಿಂದನಾತ್ಮಕ ಪದ ಬಳಕೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಹೇಳಿಕೆ ನೀಡಿಲ್ಲ. ನಾಗರಾಜವನ್ನು ಭಾಗಶಃ ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಸರ್ಕಾರಿ ಅಭಿಯೋಜಕರು ಪಾಟೀ ಸವಾಲು ನಡೆಸಿದಾಗಲೂ ನಾಗರಾಜು ಅವರು ತನಿಖಾಧಿಕಾರಿಯು ಸಿಆರ್‌ಪಿಸಿ ಸೆಕ್ಷನ್ 161 ಅಡಿ ದಾಖಲಿಸಿರುವ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಸಂತ್ರಸ್ತೆಯ ಪುತ್ರನೂ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಮತ್ತು ನಿಂದನಾತ್ಮಕ ಪದ ಬಳಕೆಗೆ ಸಂಬಂಧಿಸಿದಂತೆ ತುಟಿಬಿಚ್ಚಿಲ್ಲ. ಇನ್ನು, ಸಂತ್ರಸ್ತೆಯ ಘನತೆಗೆ ಚ್ಯುತಿ ಮತ್ತು ಅಪಮಾನ ಆರೋಪಕ್ಕೆ ಸಂಬಂಧಿಸಿದಂತೆಯೂ ಏನನ್ನೂ ಹೇಳಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.
“ಶಾಸನ ಏನು ಹೇಳುತ್ತದೆ ಅದರ ಪ್ರಕಾರ ನಡೆಯಬೇಕೆ ವಿನಾ ಅದಕ್ಕೆ ವ್ಯತಿರಕ್ತವಾಗಿ ಅಲ್ಲ. ಹಾಲಿ ಪ್ರಕರಣದಲ್ಲಿ ತನಿಖಾಧಿಕಾರಿಯು ಕಡ್ಡಾಯವಾಗಿರುವ ಸಿಆರ್‌ಪಿಸಿ ಸೆಕ್ಷನ್ 157 ಮತ್ತು ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗಸೂಚಿ ಹಾಗೂ ಸಂಬಂಧಿತ ಪ್ರಾಧಿಕಾರವು ಜಾರಿ ಮಾಡಿರುವ ಕರ್ನಾಟಕ ಪೊಲೀಸ್ ಕೈಪಿಡಿಯ ಮಾರ್ಗಸೂಚಿಗಳನ್ನು ಅನುಪಾಲಿಸಲು ವಿಫಲರಾಗಿದ್ದಾರೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ: ಆರೋಪ ಪಟ್ಟಿಯಲ್ಲಿ ಆರೋಪಿಸಲಾಗಿರುವಂತೆ ದೂರುದಾರೆಯು ( ನೆಲೆಸಿರುವ ಮನೆಯು ಆರೋಪಿಗಳಿಗೆ ಸೇರಿದ್ದು, ಅದನ್ನು ಖಾಲಿ ಮಾಡುವಂತೆ ತಗಾದೆ ತೆಗೆದಿದ್ದರು. ಇದಕ್ಕೆ ದೂರುದಾರೆಯು ಮನೆ ಖಾಲಿ ಮಾಡಿ ಎಲ್ಲಿ ಹೋಗಬೇಕು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಆರೋಪಿಗಳು ಎಲ್ಲಾದರೂ ಹೋಗಿ ಸಾಯಿ ಎಂದು ಹೇಳಿದ್ದರು. 8.01.2014ರಂದು ದೂರುದಾರೆಯು ಮನೆ ಮುಂದೆ ಇದ್ದಾಗ ಆರೋಪಿಗಳು ದೂರುದಾರೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದರು. ಇದಕ್ಕೆ ದೂರುದಾರೆಯು ತಾನು ತನ್ನ ಗಂಡನ ತಾತನ ಮನೆಯಲ್ಲಿರುವುದಾಗಿ ಖಡಕ್ ಆಗಿ ಉತ್ತರಿಸಿದ್ದರು. ಮತ್ತೆ ದೂರುದಾರೆಯ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ಆಕೆಯನ್ನು ವಿವಸ್ತ್ರವನ್ನಾಗಿಸುವ ಮೂಲಕ ಘನತೆಗೆ ಚ್ಯುತಿ ಉಂಟು ಮಾಡಲು ಯತ್ನಿಸಿದ್ದರು. ಇದರಿಂದ ಮನನೊಂದು 8.01.2014ರ ಬೆಳಿಗ್ಗೆ 8ರ ಸುಮಾರಿಗೆ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣ ಆಕೆಯನ್ನು ದಾವಣಗೆರೆಯ ಸಿಜೆ ಆಸ್ಪತ್ರೆಗೆ ದಾಖಲಿಸಿತ್ತಾದರೂ 9.01.2014ರ ಬೆಳಿಗ್ಗೆ 6.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದರು.
ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಎಂ ಬಿ ಗುಂಡವಾಡೆ, ಆರೋಪಿಗಳ ಪರವಾಗಿ ವಕೀಲರಾದ ಮಂಜುನಾಥ ಹಂಚಾಟೆ ಮತ್ತು ಗುರುದೇವ್ ಗಚ್ಚಿನಮಠ ವಾದಿಸಿದ್ದರು.