ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2024ರ ಜುಲೈ 1ರಿಂದ ಜಾರಿಗೆ ಬಂದಿದ್ದು, ಅಂದಿನಿಂದ ಬರುವ ದೂರುಗಳನ್ನು ಬಿಎನ್‌ಎಸ್‌ಎಸ್ ಅಡಿಯೇ ದಾಖಲಿಸಬೇಕು ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು 2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಹಿಂದೆ ಜಾರಿಯಲ್ಲಿದ್ದ ಸಿಆರ್‌ಪಿಸಿ ಅಡಿಯಲ್ಲಿ ದಾಖಲಾಗಿದ್ದ ಮೊದಲ ಎಫ್‌ಐಆರ್ ರದ್ದುಪಡಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರಿನ ಅರುಣ್‌ಕುಮಾರ್ ಎಂಬಾತ ಎಫ್‌ಐಆರ್ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ನಟರಾಜನ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಪತಿಯ ಸಾವಿನ ಬಳಿಕ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿರುವುದಲ್ಲದೇ ಸಾಕಷ್ಟು ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಅರುಣ್‌ಕುಮಾರ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಆರೋಪದ ಮೇಲಿನ ದೂರನ್ನು ಬಿಎನ್‌ಎಸ್‌ಎಸ್ ಸೆಕ್ಷನ್ 173ರ ಅಡಿ ದಾಖಲಿಸಿ, ಸೆಕ್ಷನ್ 193ರ ಅಡಿ ತನಿಖೆ ನಡೆಸಿ ಪೊಲೀಸರು ಅಂತಿಮ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಹೇಳಿದೆ.
01.07.2024ಕ್ಕೂ ಮುಂಚೆ ಅಪರಾಧ ನಡೆದಿದ್ದರೆ ಮತ್ತು 01.07.2024ರ ಬಳಿಕ ಎಫ್ಐಆರ್ ದಾಖಲಿಸಿದರೆ ಅದನ್ನು ಇತರೆ ವಿಶೇಷ ಕಾನೂನುಗಳನ್ನು ಹೊರತುಪಡಿಸಿ ಬಿಎನ್‌ಎಸ್‌ಎಸ್ 173ರ ಅಡಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳನ್ನು ಅನ್ವಯಿಸಬೇಕು. ಆದರೆ, ತನಿಖೆ ಮತ್ತು ಅಂತಿಮ ವರದಿಯನ್ನು ಬಿಎನ್‌ಎಸ್‌ಎಸ್ ಅಡಿಯೇ ಸಲ್ಲಿಸಬೇಕು. 01.07.2024ರ ಬಳಿಕ ಅಪರಾಧಗಳಾದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಥವಾ ವಿಶೇಷ ಕಾನೂನಿನ ಅಡಿ ದಾಖಲಿಸಬೇಕು. ತನಿಖೆ ಮತ್ತು ಅಂತಿಮ ವರದಿಯನ್ನು ಬಿಎನ್‌ಎಸ್‌ಎಸ್ ಅಡಿ ಸಲ್ಲಿಸಬೇಕು.
ಬಿಎನ್‌ಎಸ್‌ಎಸ್ ಜಾರಿಗೂ ಮುನ್ನಾ ದಾಖಲಾಗಿರುವ ಮೇಲ್ಮನವಿ/ಮರುಪರಿಶೀಲನೆ/ ಅರ್ಜಿ/ವಿಚಾರಣೆ/ತನಿಖೆಯನ್ನು ಸಿಆರ್‌ಪಿಸಿ ಅಡಿ ನಡೆಸಿ, ಅಂತಿಮ ವರದಿಯನ್ನು ಸಿಆರ್‌ಪಿಸಿ ಸೆಕ್ಷನ್ 173ರ ಅಡಿ ಸಲ್ಲಿಸಬೇಕು. ಬಿಎನ್‌ಎಸ್‌ಎಸ್, ಬಿಎನ್‌ಎಸ್, ಸಿಆರ್‌ಪಿಸಿ, ಐಪಿಸಿಗಳಿಗೆ ಸಂಬಂಧಿಸಿದ ಅರವಿಗಾಗಿ ಈ ಆದೇಶವನ್ನು ಎಲ್ಲಾ ವಿಚಾರಣಾಧೀನ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು. ಹಾಗೇಯೇ ಈ ಆದೇಶವನ್ನು ಪೊಲೀಸ್ ಮಹಾನಿರ್ದೇಶಕರಿಗೆ ಕಳುಹಿಸಬೇಕು, ಅವರು ಸಂಬಂಧಿತ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಬೇಕು ಎಂದು ನ್ಯಾಯಾಲಯವು ರಿಜಿಸ್ಟ್ರಿಗೆ ಆದೇಶಿಸಿದೆ.
ಯಾವುದೇ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸಲು ಎಫ್‌ಐಆರ್ ಮೂಲ ದಾಖಲೆ ಆಗಲಿದೆ. ಅಲ್ಲದೇ ಆರೋಪಿತರ ವಿರುದ್ದ ದಾಖಲಾಗಿರುವ ದೂರಿನ ತನಿಖೆಗೆ ಎಫ್‌ಐಆರ್ ತಳಹದಿ ಆಗಿರುತ್ತದೆ. ಆದರೆ, ಬಿಎನ್‌ಎಸ್‌ಎಸ್ ಸೆಕ್ಷನ್ 176ರ ಅಡಿ ಬರುವ ಪ್ರಕರಣವನ್ನು ಸಿಆರ್‌ಪಿಸಿ ಸೆಕ್ಷನ್ 154ರಡಿ ತನಿಖೆ ನಡೆಸುವುದು ಸರಿಯಲ್ಲ. ಬಿಎನ್‌ಎಸ್‌ಎಸ್ ಜಾರಿಗೆ ಬಂದ 2024ರ ಜುಲೈ 1 ಮತ್ತು ಅದರ ನಂತರ ಸಿಆರ್‌ಪಿಸಿ ಅಡಿ ಎಫ್‌ಐಆರ್ ದಾಖಲಿಸುವುದು ಸರಿಪಡಿಸಬಹುದಾದ ದೋಷ ಎಂದು ಹೇಳಲು ಸಾಧ್ಯವಿಲ್ಲ. ದೂರಿನ ಮೂಲ ತಳಹದಿಯೇ ಲೋಪದಿಂದ ಕೂಡಿರುವಾಗ ಐಪಿಸಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 154ರಡಿ ಎಫ್‌ಐರ್ ದಾಖಲಿಸಿಕೊಂಡು ಬಿಎನ್‌ಎಸ್‌ಎಸ್ ಸೆಕ್ಷನ್ 176ರಡಿ ತನಿಖೆ ನಡೆಸುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ. ಹಾಗಾಗಿ, ಬಿಎನ್‌ಎಸ್‌ಎಸ್ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಅಡಿ ದಾಖಲಾಗುವ ಎಫ್‌ಐಆರ್ ಸಮರ್ಥನೀಯವಲ್ಲ ಹಾಗೂ ಅದು ವಜಾಕ್ಕೆ ಅರ್ಹವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಅರ್ಜಿದಾರರ ಪರ ವಕೀಲ ಮಹಾಂತೇಶ್ ಪಾಟೀಲ್ ಅವರು “ದೂರುದಾರ ಮಹಿಳೆ ಆರೋಪಿಸಿರುವಂತೆ ಘಟನೆ 2021ರ ಜೂನ್ 24ರಂದು, ಅಂದರೆ 2024ರ ಜೂನ್ 30ರೊಳಗೆ ನಡೆದಿದೆ. 2024ರ ಜುಲೈ 1ರಂದು ಸಿಆರ್‌ಪಿಸಿ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆದರೆ, 2024ರ ಜುಲೈ 1ರಂದು ಸಿಆರ್‌ಪಿಸಿ ರದ್ದಾಗಿ, ಬಿಎನ್‌ಎಸ್‌ಎಸ್ ಜಾರಿಗೆ ಬಂದಿತ್ತು. ಬಿಎನ್‌ಎಸ್‌ಎಸ್ ಜಾರಿಗೆ ಬಂದ ಮೇಲೆ ರದ್ದಾದ ಸಿಆರ್‌ಪಿಸಿ ಅಡಿ ಎಫ್‌ಐಆರ್ ದಾಖಲಿಸಿರುವುದು ಮಾನ್ಯ ಆಗುವುದಿಲ್ಲ. ಅಲ್ಲದೇ ಘಟನೆ ನಡೆದು ಮೂರು ವರ್ಷಗಳ ಬಳಿಕ ದೂರು ನೀಡಲಾಗಿದೆ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಬೇಕು”ಎಂದು ಮನವಿ ಮಾಡಿದ್ದರು.
ಸಂತ್ರಸ್ತ ಮಹಿಳೆಯ ಪರ ವಕೀಲ ಎಸ್ ಎಸ್ ಮಮದಾಪುರ ಅವರು “ಆರೋಪಿತ ಅರ್ಜಿದಾರರು ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವುದಲ್ಲದೇ, 2 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾರೆ. ಇದು ತನಿಖೆಗೆ ಅರ್ಹ ಪ್ರಕರಣ. ಹಾಗಾಗಿ ಎಫ್‌ಐಆರ್ ರದ್ದುಪಡಿಸಬಾರದು. ಮುಖ್ಯವಾಗಿ ಎಫ್‌ಐಆರ್ ದಾಖಲಿಸುವುದು ಪೊಲೀಸರ ಕೆಲಸ. ಯಾವ ಸೆಕ್ಷನ್‌ಗಳಡಿ ಎಫ್‌ಐಆರ್ ಹಾಕಬೇಕು ಎನ್ನುವುದು ಪೊಲೀಸರ ಜವಾಬ್ದಾರಿ. ಸಿಆರ್‌ಪಿಎಸ್ ಯಾವಾಗ ರದ್ದಾಯಿತು, ಬಿಎನ್‌ಎಸ್‌ಎಸ್ ಯಾವ ಜಾರಿಗೆ ಬಂದಿತು ಅನ್ನುವುದು ಸಂತ್ರಸ್ತೆಗೆ ಗೊತ್ತಿರಲಿಲ್ಲ. ಇದರಲ್ಲಿ ಸಂತ್ರಸ್ತೆಯ ತಪ್ಪು ಇಲ್ಲ. ಹಾಗಾಗಿ ಎಫ್‌ಐಆರ್ ರದ್ದುಪಡಿಸಬಾರದು” ಎಂದು ವಾದಿಸಿದ್ದರು.
ಸರ್ಕಾರದ ಪರ ವಕೀಲ ಜಮಾದಾರ್ ಶಹಾಬುದ್ದೀನ್ ಅವರು “2024ರ ಜುಲೈ 1ರಂದು ಬಿಎನ್‌ಎಸ್‌ಎಸ್ ಜಾರಿಗೆ ಬಂದ ಮೇಲೆ ದಾಖಲಾದ ಮೊದಲ ಎಫ್‌ಐಆರ್ ಇದಾಗಿದೆ. ಸಿಆರ್‌ಪಿಸಿ ಸೆಕ್ಷನ್‌ಗಳಿಂದ ಬಿಎನ್‌ಎಸ್‌ಎಸ್ ಸೆಕ್ಷನ್‌ಗಳನ್ನು ಕಂಪ್ಯೂಟರ್‌ನಲ್ಲಿ ಬದಲಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸಂತ್ರಸ್ತೆಯ ಮೇಲೆ ದೈಹಿಕ, ಲೈಂಗಿಕ ಮತ್ತು ಆರ್ಥಿಕ ವಂಚನೆ ನಡೆದಿದೆ. ಪ್ರಕರಣದಲ್ಲಿ ತನಿಖೆಯ ಅಗತ್ಯವಿದೆ. ತಾಂತ್ರಿಕ ಕಾರಣಗಳಿಗೆ ಎಫ್‌ಐಆರ್ ರದ್ದುಪಡಿಸುವುದು ಸೂಕ್ತವಲ್ಲ” ಎಂದು ಹೇಳಿದ್ದರು.
ಕಾಸ್ ಲಿಸ್ಟ್‌ನಲ್ಲಿ ರಿಜಿಸ್ಟ್ರಿಯು ನೀಡಿರುವ ಹಿಂಬರಹವೂ ದಾರಿ ತಪ್ಪಿಸುವಂತಿದೆ. ರಿಜಿಸ್ಟ್ರಿಯು 01.07.2024ರ ಬಳಿಕ ದಾಖಲಿಸಿರುವ ಸಿಆರ್‌ಪಿಸಿ ಅಡಿಯ ಮೇಲ್ಮನವಿ/ಮರುಪರಿಶೀಲನೆ/ಅರ್ಜಿ ಎಂದು ಕಾಸ್‌ಲಿಸ್ಟ್‌ನಲ್ಲಿ ಉಲ್ಲೇಖಿಸಬೇಕು. ಅದೇ ರೀತಿ ಬಿಎನ್‌ಎಸ್‌ಎಸ್ ಅರ್ಜಿಗಳನ್ನು ಪ್ರತ್ಯೇಕಗೊಳಿಸಬೇಕು. ಆದರೆ ಅವುಗಳನ್ನು ಸಿಆರ್‌ಪಿಸಿ/ಬಿಎನ್‌ಎಸ್‌ಎಸ್ ಎಂದು ಮಿಳಿತಗೊಳಿಸಬಾರದು. ಇದನ್ನು ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಿಯು ಸರಿಪಡಿಸಿ, ಸಿಆರ್‌ಪಿಸಿ ಮತ್ತು ಬಿಎನ್‌ಎಸ್‌ಎಸ್ ಪ್ರತ್ಯೇಕಗೊಳಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆ ಶುಶ್ರೂಷಕಿಯಾಗಿ ಹಾಗೂ ಆರೋಪಿತ ಅರ್ಜಿದಾರ ಡಿ ಗ್ರೂಪ್ ನೌಕರರಾಗಿ ಇಬ್ಬರು ರಾಯಚೂರು ಜಿಲ್ಲೆ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. 2021ರ ಮಾರ್ಚ್ 30ರಂದು ಸಂತ್ರಸ್ತೆ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವೇಳೆ ಆರೋಪಿತ ಅರ್ಜಿದಾರ ಅರುಣ್ ಕುಮಾರ್ ಆಕೆಗೆ ಸಹಾಯ ಮಾಡಿದ್ದ. ಸಂತ್ರಸ್ತೆಯ ಮನೆಗೆ ಅರ್ಜಿದಾರ ಹೋಗಿ ಬರುತ್ತಿದ್ದು, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ 2021ರ ಜೂನ್ 24ರಂದು ಅತ್ಯಾಚಾರ ನಡೆಸಿರುವ ಆರೋಪವಿದೆ.
ಆನಂತರ ಹಲವು ಬಾರಿ ಸಂತ್ರಸ್ತೆಯ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೇ ಆಕೆಯಿಂದ 11.43 ಲಕ್ಷ ಹಣ ತನ್ನ ಖಾತೆಗೆ ಹಾಕಿಸಿಕೊಂಡಿದ್ದು, 2 ಲಕ್ಷ ರೂಪಾಯಿ ನಗದು ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ಇತ್ತ ಹಣ ವಾಪಸ್ ನೀಡದೇ, ಅತ್ತ ಮದುವೆಯನ್ನೂ ಆಗದೆ ಸತಾಯಿಸಿರುತ್ತಾನೆ ಎಂದು ನೊಂದು ಸಂತ್ರಸ್ತೆ ದೂರು ನೀಡಿದ್ದರು. ಅದನ್ನು ಆಧರಿಸಿ ಲಿಂಗಸುಗೂರು ಠಾಣೆ ಪೊಲೀಸರು 2024ರ ಜುಲೈ 1ರಂದು ಸಿಆರ್‌ಪಿಸಿ 154ರ ಅಡಿ ಐಪಿಸಿ ಸೆಕ್ಷನ್‌ಗಳಾದ 376, 323, 506, 420 ಅನ್ವಯ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ವಜಾ ಮಾಡುವಂತೆ ಕೋರಿ ಅರುಣ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ.