ತಾನಿರುವ ಜೈಲು ಕೋಣೆಯ ದೃಶ್ಯಗಳನ್ನು ಜಾರಿ ನಿರ್ದೇಶನಾಲಯ (ಇ ಡಿ) ಸೋರಿಕೆ ಮಾಡಿದೆ ಎಂದು ಆರೋಪಿಸಿರುವ ದೆಹಲಿ ಸಚಿವ, ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ತಮ್ಮ ನ್ಯಾಯಯುತ ವಿಚಾರಣೆಗೆ ಒತ್ತಾಯಿಸಿದ್ದಾರೆ.
ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ನ್ಯಾಯಯುತ ವಿಚಾರಣೆಯನ್ನು ನಡೆಸುವಂತೆ ಒತ್ತಾಯಿಸಿದರು. ಜಾರಿ ನಿರ್ದೇಶನಾಲಯ (ಇ ಡಿ) ತನ್ನ ಜೈಲು ಕೋಣೆಯ ದೃಶ್ಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ ಎಂದು ಆರೋಪಿಸಿದರು.
ಇ ಡಿ ವಿರುದ್ಧ ಜೈನ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರ ಮುಂದೆ ಬಿರುಸಿನ ವಾದಗಳನ್ನು ಮಂಡಿಸಲಾಯಿತು.
“ನನಗೆ ನ್ಯಾಯಯುತ ವಿಚಾರಣೆಯ ಅವಕಾಶ ಒದಗಿಸಿ. (ಮುಂಬೈ ದಾಳಿಯಲ್ಲಿ ಭಾಗಿಯಾಗಿ ಮರಣದಂಡನೆಗೊಳಗಾದ ಉಗ್ರ) ಅಜ್ಮಲ್ ಕಸಾಬ್‌ಗೆ ಕೂಡ ಅದು ದೊರೆತಿತ್ತು. ನಾನು ಆತನಿಗಿಂತ ಕೆಟ್ಟವನಂತೂ ಅಲ್ಲ” ಎಂದು ಜೈನ್ ಪರವಾಗಿ ಹಿರಿಯ ನ್ಯಾಯವಾದಿ ರಾಹುಲ್ ಮೆಹ್ತಾ ವಾದಿಸಿದರು.
“ಇ ಡಿ ತಮಗೆ ಪ್ರತಿಕ್ರಿಯೆ ನೀಡುವ ಮುನ್ನವೇ ಮಾಧ್ಯಮಗಳಿಗೆ ಒದಗಿಸಿದೆ. ಸಚಿವರು ಐಷಾರಾಮಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ರಾಷ್ಟ್ರೀಯ ಚಾನೆಲ್‌ಗಳಲ್ಲಿ ಅತಿರಂಜನೀಯವಾಗಿ ಚಿತ್ರಿಸಲಾಗಿದೆ. ಎಲ್ಲವೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಕೇವಲ ಊಹೆಯಲ್ಲ. ಖಚಿತವಾಗಿ ಹೇಳುತ್ತೇನೆ ಅರ್ಜಿಗೆ ದೊರೆಯಬೇಕಾದ ಉತ್ತರ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ನಾವು ನ್ಯಾಯಾಲಯಕ್ಕೆ ಬರುವ ಮುನ್ನವೇ ಮಾಧ್ಯಮಗಳಲ್ಲಿ ಅದು ಬಿತ್ತರಗೊಳ್ಳುತ್ತಿದೆ. ಮಾಧ್ಯಮ ವಿಚಾರಣೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಹೇಳಿದೆ. ಆದರೆ ಇದರಿಂದ ತೊಂದರೆಗೊಳಗಾದ ಏಕೈಕ ವ್ಯಕ್ತಿ ಸಚಿವ ಜೈನ್ ಆಗಿದ್ದಾರೆ. ತಿಹಾರ್ ಜೈಲಿನ ಅಧಿಕಾರಿಗಳು ದೃಶ್ಯವನ್ನು ಸೋರಿಕೆ ಮಾಡಿದ್ದು ಅವರ ಕೃತ್ಯ ನ್ಯಾಯಾಂಗ ತನಿಖೆಗೆ ಒಳಪಡಬೇಕು. ಮಾಧ್ಯಮಗಳಿಗೆ ದೃಶ್ಯಗಳನ್ನು ಸೋರಿಕೆ ಮಾಡಿದವರು ಯಾರು ಎಂಬುದನ್ನು ತನಿಖೆ ಮಾಡಲು ನ್ಯಾಯಾಧೀಶರನ್ನು ನೇಮಿಸಿ. ಒಂದು ವೇಳೆ ಸತ್ಯೇಂದ್ರ ಜೈನ್ ಅವರು ಸೋರಿಕೆಯ ಮೂಲವಾಗಿದ್ದರೆ, ಅವರನ್ನು ಸಹ ಬಿಡಬಾರದು” ಎಂದು ಅವರು ವಿವರಿಸಿದರು.
ಇದೇ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ವಕೀಲ ಜೊಹೆಬ್ ಹೊಸೈನ್ “ಇ ಡಿ ಯಾವುದೇ ಸೋರಿಕೆ ಮಾಡಿಲ್ಲ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ನ್ಯಾಯಾಲಯಕ್ಕೆ ತರಲಾಗುವುದು. ಇ ಡಿ ಸೋರಿಕೆ ಮಾಡಿದೆ ಎಂಬುದನ್ನು ಊಹಿಸುವುದು ಕೂಡ ಅಸಂಬದ್ಧ” ಎಂದು ವಾದಿಸಿದರು. ನ್ಯಾಯಾಲಯ ನವೆಂಬರ್ 28ಕ್ಕೆ ಪ್ರಕರಣ ಮುಂದೂಡಿತು.
ಇದೇ ವೇಳೆ ತಾನು ಪಾಲಿಸುತ್ತಿರುವ ಧರ್ಮಾನುಸಾರ ತನಗೆ ಆಹಾರ ಪದಾರ್ಥ ನೀಡುತ್ತಿಲ್ಲ, ವೈದ್ಯಕೀಯ ಚಿಕಿತ್ಸೆಗೆ ಅವಕಾಶ ನೀಡುತ್ತಿಲ್ಲ ಎಂದು ಜೈನ್ ಅವರು ಆರೋಪಿಸಿದ್ದ ಮತ್ತೊಂದು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ತಿಹಾರ್ ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೇಳಿತು.