ಡಿವೈಎಸ್‌ಪಿ ಶ್ರೇಣಿ ಅಧಿಕಾರಿಗಳಿಗೂ ಪಂಚನಾಮೆ ವರದಿ ಕುರಿತು ನಾಲ್ಕು ವಾಕ್ಯ ಬರೆಯಲು ಬರಲ್ಲ; ನ್ಯಾ. ಶ್ರೀಷಾನಂದ ಬೇಸರ

ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
Karnataka HC and Justice V Srishananda
Karnataka HC and Justice V Srishananda

“ಕ್ರಿಮಿನಲ್‌ ಪ್ರಕರಣಗಳಲ್ಲಿ ತನಿಖಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೂ ಘಟನಾ ಸ್ಥಳದ ಪಂಚನಾಮೆ/ಮಹಜರು ವರದಿಯ ಬಗ್ಗೆ ಸರಿಯಾಗಿ ನಾಲ್ಕು ವಾಕ್ಯ ಬರೆಯಲು ಬರುವುದಿಲ್ಲ. ಕಾನೂನುಗಳ ಬಗ್ಗೆ ಆಳವಾದ ಮಾಹಿತಿ ಇರದ ಪೊಲೀಸ್‌ ಮುಖ್ಯ ಪೇದೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ವೃತ್ತ ನಿರೀಕ್ಷಕರು, ಸಬ್‌ ಇನ್ಸ್‌ಪೆಕ್ಟರ್‌ ಸಹಿ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಇದು ಪೊಲೀಸ್‌ ತನಿಖಾ ವೈಖರಿ” ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

ಕ್ರಿಮಿನಲ್‌ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪೊಲೀಸ್‌ ತನಿಖಾ ವರದಿಯ ಲೋಪಗಳ ಬಗ್ಗೆ ನ್ಯಾಯಮೂರ್ತಿ ವಿ ಶ್ರೀಷಾನಂದ ಮೇಲಿನಂತೆ ಹೇಳಿದ್ದಾರೆ.

ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನ ತಿಳಿಸಿಕೊಡುವುದು ಸೂಕ್ತ ಎಂದು ಇದೇ ವೇಳೆ ಸಲಹೆ ನೀಡಿದ್ದಾರೆ.

ಪೊಲೀಸರು ತನಿಖೆ ವೇಳೆ ಎಸಗುವ ಲೋಪಗಳನ್ನು ಸರ್ಕಾರಿ ಅಭಿಯೋಜಕರಿಗೆ ವಿವರಿಸಿದ ನ್ಯಾಯಮೂರ್ತಿಗಳು, ನೋಡಿ ಅಭಿಯೋಜಕರೇ ಪೊಲೀಸರು ಸಮರ್ಪಕವಾದ ತನಿಖೆ ನಡೆಸುತ್ತಿಲ್ಲ. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸುತ್ತಿಲ್ಲ. ಈ ಪರಿಸ್ಥಿತಿಗೂ ಮತ್ತೊಂದು ಕಾರಣವಿದೆ. ಪ್ರತಿ ದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್‌ಗೆ ಎಲ್ಲಾ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬೆಳಿಗ್ಗೆ ಎದ್ದರೆ ಪೊಲೀಸರು ಬಂದೋಬಸ್ತ್‌ ಕೆಲಸದಲ್ಲಿ ಇರುತ್ತಾರೆ. ಇನ್ನು ಯಾವಾಗ ಪೊಲೀಸರು ತನಿಖೆ ನಡೆಸುತ್ತಾರೆ? ಎಂದು ಪ್ರಶ್ನಿಸುವ ಮೂಲಕ ಸದ್ಯದ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದರು.

ಇನ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಬಂದೋಬಸ್ತ್‌ ಕೆಲಸದಲ್ಲಿದ್ದರೆ, ಮುಖ್ಯ ಪೇದೆ ತನಿಖೆ ನಡೆಸಿ, ವರದಿ ಸಿದ್ಧಪಡಿಸುತ್ತಾರೆ. ಆ ವರದಿಗೆ ವೃತ್ತ ನಿರೀಕ್ಷಕರು ಅಥವಾ ಸಬ್ ಇನ್ಸ್‌ಪೆಕ್ಟರ್‌ ಸಹಿ ಮಾಡಿ, ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಮುಖ್ಯ ಪೇದೆಗೆ ಕಾನೂನಿನ ಬಗ್ಗೆ ಏನು ಗೊತ್ತಿರುತ್ತದೆ? ಅವರಲ್ಲಿ ನ್ಯಾಯಾಲಯದ ತೀರ್ಪುಗಳ ಬಗ್ಗೆ ಮಾಹಿತಿ ಏನಿರುತ್ತದೆ? ಕಾನೂನು ತಿಳಿಯದಿದ್ದರೆ ಯಾವ ರೀತಿ ತನಿಖೆ ನಡೆಸಿರುತ್ತಾರೆ ಎಂದು ನೀವೇ ಊಹಿಸಿಕೊಳ್ಳಿ ಎಂದು ನ್ಯಾಯಮೂರ್ತಿಗಳು ಹೇಳಿದರು.

ಇನ್ನೂ, ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಯಾವೊಬ್ಬ ತನಿಖಾಧಿಕಾರಿಯೂ ಮರಣೋತ್ತರ ಪರೀಕ್ಷೆ ನಡೆಯುವಾಗ ಹಾಜರು ಇರುವುದಿಲ್ಲ. ಮಹತ್ವದ ಪ್ರಕರಣಕ್ಕಾಗಿ ಅಪರೂಪಕ್ಕೆ ಹೋದರೂ ವೈದ್ಯರೊಂದಿಗೆ ಮಾತನಾಡುತ್ತಾ ಕೂರುತ್ತಾರಷ್ಟೆ. ಘಟನಾ ಸ್ಥಳದ ಪಂಚನಾಮೆ/ಮಹಜರು ಸರಿಯಾಗಿ ಮಾಡುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದರೂ ಸರಿಯಾಗಿ ನಾಲ್ಕು ವಾಕ್ಯ ಪಂಚನಾಮೆ ಬಗ್ಗೆ ಬರೆಯೋಕೆ ಗೊತ್ತಿರುವುದಿಲ್ಲ. ತನಿಖೆಯಲ್ಲಿ ಘಟನಾ ಸ್ಥಳದ ಮಹಜರು/ಸ್ಕೆಚ್‌ ಮಹತ್ವದಾಯಕ ಎಂಬುದು ತನಿಖಾಧಿಕಾರಿ ತಿಳಿದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.

ಮಹಜರು/ಪಂಚನಾಮೆ ವರದಿ ಅಪರಾಧ ಘಟನೆಯ ಸಂಕ್ಷಿಪ್ತವಾದ ಚಿತ್ರಣ ನೀಡುತ್ತದೆ. ಆರೋಪಿಗೆ ಘಟನೆ ಸ್ಥಳಕ್ಕೆ ಹೇಗೆ ಬಂದ, ಮರಳಿ ಹೇಗೆ ಹೋದ, ಹೇಗೆ ಕೃತ್ಯ ಎಸಗಿದ, ಆರೋಪಿಯನ್ನು ಯಾರಾದರೂ ನೋಡಿರುವ ಸಾಧ್ಯತೆ ಇದೆಯೇ? ಘಟನಾ ಸ್ಥಳದ ಸುತ್ತಾ ಏನೇನಿದೆ ಎಂಬುದನ್ನು ಮಹಜರು ವರದಿ ತಿಳಿಸುತ್ತದೆ. ಈ ಎಲ್ಲಾ ವಿವರಗಳು ತಿಳಿಯದೆ ಹೋದರೆ ಹೇಗೆ ತನಿಖೆ ಸರಿ ದಾರಿಯಲ್ಲಿ ನಡೆಯುತ್ತದೆ. ಈ ತಪ್ಪುಗಳನ್ನು ಪೊಲೀಸರು/ತನಿಖಾಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿ ಸೂಕ್ತವಾಗಿ ಮಹಜರು ಮಾಡಬೇಕು. ಮಾಸ್ಕ್‌ ಧರಿಸಿ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಬೇಕು. ಕ್ರಿಮಿನಲ್‌ ಕಾನೂನುಗಳನ್ನು ತಿಳಿದಿರಬೇಕು ಎಂದು ನುಡಿದ ನ್ಯಾಯಮೂರ್ತಿಗಳು, ಸರ್ಕಾರಿ ವಕೀಲರು-ಕಾನೂನು ತಜ್ಞರು ನಿಯಮಿತವಾಗಿ ಕಾಯಕ್ರಮ ನಡೆಸಬೇಕು. ಪೊಲೀಸರಿಗೆ ಕಾನೂನುಗಳ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

Related Stories

No stories found.
Kannada Bar & Bench
kannada.barandbench.com