ವಾಹನಕ್ಕೆ ಪರವಾನಗಿ, ಫಿಟ್ನೆಸ್‌ ಸರ್ಟಿಫಿಕೇಟ್‌ ಇಲ್ಲದಿದ್ದರೂ ವಿಮಾ ಕಂಪನಿ ಪರಿಹಾರ ಪಾವತಿಸಬೇಕು: ಹೈಕೋರ್ಟ್‌

ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಪರಿಹಾರದ ಮೊತ್ತವನ್ನು ಈ ಆದೇಶ ತಲುಪಿದ ಎಂಟು ವಾರಗಳ ಒಳಗಾಗಿ ಪಾವತಿಸಬೇಕು ಎಂದ ನ್ಯಾಯಾಲಯ.
Justice T G Shivashankare Gowda
Justice T G Shivashankare Gowda
Published on

ಅಪಘಾತ ನಡೆದ ಸಂದರ್ಭದಲ್ಲಿ ವಾಹನಕ್ಕೆ ಪರವಾನಗಿ ಮತ್ತು ಫಿಟ್ನೆಸ್‌ ಸರ್ಟಿಫಿಕೇಟ್‌ ಇಲ್ಲದೇ ಇದ್ದರೂ ವಿಮಾ ಕಂಪನಿಯು ಅಪಘಾತದ ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಅಪಘಾತಕ್ಕೆ ಒಳಗಾದ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೂ ನ್ಯಾಯಮಂಡಳಿ ಪರಿಹಾರ ನೀಡುವಂತೆ ನಿರ್ದೇಶಿಸಿದೆ ಎಂದು ಆಕ್ಷೇಪಿಸಿ ಶ್ರೀರಾಮ ಜನರಲ್ ಕಂಪನಿ ಇನ್ಶೂರೆನ್ಸ್‌ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡಲು ನಿರ್ದೇಶಿಸುವಂತೆ ಕೋರಿ ಮೃತರ ವಾರಸುದಾರರು ಕೋರಿದ್ದ ಎಂಎಫ್‌ಎ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ಏಕಸದಸ್ಯ ಪೀಠ ನಡೆಸಿತು.

ವಾಹನ ಮಾಲೀಕರು ತಮ್ಮ ವಾಹನವನ್ನು ರಸ್ತೆಗಿಳಿಸುವ ವೇಳೆ ಪರವಾನಗಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿರಲಿಲ್ಲ. ಇದು ವಾಹನ ಮಾಲೀಕರ ಅನುಸರಿಸಬೇಕಾಗಿದ್ದ ಮೂಲಭೂತ ನಿಯಮ. ಆದರೆ ಈ ಪ್ರಕರಣದಲ್ಲಿ ಇದನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ವಿಮಾ ಕಂಪೆನಿಯನ್ನು ಸಂಪೂರ್ಣ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಮಾಲೀಕರೇ ಪರಿಹಾರ ಪಾವತಿಸಲು ನಿರ್ದೇಶಿಸಬೇಕು ಎಂಬ ವಿಮಾ ಕಂಪೆನಿಯ ವಾದವನ್ನು ಪೀಠ ತಿರಸ್ಕರಿಸಿದೆ.

ಸ್ವರಣ್‌ ಸಿಂಗ್ ಮತ್ತು ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿರುವಂತೆ ಇದೊಂದು ಮೂಲಭೂತ ನಿಯಮದ ಉಲ್ಲಂಘನೆ ಆಗಿದ್ದರೂ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣಚಿಕೊಳ್ಳಲು ಅವಕಾಶ ಇರುವುದಿಲ್ಲ. ಹೀಗಾಗಿ, ವಿಮಾ ಕಂಪೆನಿಯು ಪರಿಹಾರದ ಮೊತ್ತವನ್ನು ಈ ಆದೇಶ ತಲುಪಿದ ಎಂಟು ವಾರಗಳ ಒಳಗಾಗಿ ಪಾವತಿಸಬೇಕು ಎಂದು ಪೀಠ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಕಟ್ಟಡ ಕಾರ್ಮಿಕ ನಂದೀಶಪ್ಪ ಹೊಸಕೋಟೆ-ಚಿಕ್ಕ ತಿರುಪತಿ ಮಾರ್ಗದಲ್ಲಿ ಬೈಸಿಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತವು 2013ರ ಜುಲೈ 31ರಂದು ನಡೆದಿತ್ತು. ಅಪಘಾತ ನಡೆದ ಏಳು ದಿನಗಳ ಬಳಿಕ ನಂದೀಶಪ್ಪ ಮೃತಪಟ್ಟಿದ್ದರು. ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದ ನಂದೀಶಪ್ಪ ಅವರಿಗೆ, ಏಳು ದಿನಗಳ ಅವಧಿಯಲ್ಲಿ ಹಲವು ಆಸ್ಪತ್ರೆಗಳಲ್ಲಿ ಬಳಿಕ ಚಿಕಿತ್ಸೆ ನೀಡಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ನ್ಯಾಯಮಂಡಳಿ ₹13.88 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು.

ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ನಿರ್ದೇಶಿಸಬೇಕು ಎಂದು ಮೃತ ನಂದೀಶಪ್ಪ ಅವರ ಪತ್ನಿ ಕೋರಿದ್ದರು. ಇದೇ ವೇಳೆ ವಿಮಾ ಕಂಪನಿಯು ಬೆಂಗಳೂರಿನ ಲಘು ವ್ಯಾಜ್ಯಗಳು ಮತ್ತು ಮೋಟಾರು ಅಪಘಾತ ಕ್ಲೇಮ್‌ ನ್ಯಾಯಮಂಡಳಿ 2016ರ ಆಗಸ್ಟ್‌ 4ರಂದು ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿತ್ತು.

ಈ ಎರಡೂ ಪ್ರತ್ಯೇಕ ಮೇಲ್ಮನವಿಗಳನ್ನು ಭಾಗಶಃ ಪುರಸ್ಕರಿಸಿರುವ ಪೀಠವು ಪರಿಹಾರದ ಮೊತ್ತ ₹13.44 ಲಕ್ಷದಿಂದ ₹13.88 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ಶೇ 6ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪಾವತಿ ಮಾಡುವಂತೆ ಆದೇಶಿಸಿದೆ.

Attachment
PDF
Shriram Genreral Insurance Company Ltd Vs Nagamma.pdf
Preview
Kannada Bar & Bench
kannada.barandbench.com