ಆಗಸ್ಟ್ 2023ರಿಂದ ಬಾಕಿ ಉಳಿದಿರುವ ಜಾಮೀನು ಅರ್ಜಿಯನ್ನು ಪದೇ ಪದೇ ಮುಂದೂಡಿದ್ದಕ್ಕಾಗಿ ಅಲಾಹಾಬಾದ್ ಹೈಕೋರ್ಟನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಟೀಕಿಸಿದೆ. [ವಾಜಿದ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ]
ಒಂದು ವರ್ಷದಿಂದ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿಗಳು ವಿಚಾರಣೆ ನಡೆಯುತ್ತಿರುವುದಕ್ಕೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಅತೃಪ್ತಿ ವ್ಯಕ್ತಪಡಿಸಿತು.
"ಒಂದು ವರ್ಷದಿಂದ ಜಾಮೀನು ಅರ್ಜಿಗಳು ಬಾಕಿ ಉಳಿದಿರುವ ಅಭ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗದು. ಅಂತಹ ಪ್ರಕರಣಗಳಲ್ಲಿ ಒಂದು ದಿನದ ವಿಳಂಬವೂ ಆರೋಪಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲಾಹಾಬಾದ್ ಹೈಕೋರ್ಟ್‌ನಲ್ಲಿ ತನ್ನ ಜಾಮೀನು ಅರ್ಜಿಯನ್ನು ಪದೇ ಪದೇ ಮುಂದೂಡುತ್ತಿರುವುದನ್ನು ಪ್ರಶ್ನಿಸಿ ಅತ್ಯಾಚಾರ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.
ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ ಅವರು , ಜಾಮೀನು ಅರ್ಜಿಗಳನ್ನು ಸಕಾಲಿಕವಾಗಿ ವಿಲೇವಾರಿ ಮಾಡುವ ಮಹತ್ವವನ್ನು ಸುಪ್ರೀಂ ಕೋರ್ಟ್ ಪದೇ ಪದೇ ಒತ್ತಿಹೇಳಿದೆ. ಆದರೆ ತಮ್ಮ ಕಕ್ಷಿದಾರರ ಜಾಮೀನು ಅರ್ಜಿಯನ್ನು ಆಗಸ್ಟ್ 2023ರಿಂದ ಅನೇಕ ಬಾರಿ ಮುಂದೂಡಲಾಗಿದ್ದು ವಿಚಾರಣೆ ಬಾಕಿ ಉಳಿದಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ "ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಏನು ಸಮಸ್ಯೆ ಇದೆ?" ಎಂಬುದಾಗಿ ಪ್ರಶ್ನಿಸಿತು. ಆಗ ದವೆ ಅವರು, ಅತಿಯಾದ ಹೊರೆ ಮತ್ತು ಅತಿಯಾದ ಕೆಲಸದ ಒತ್ತಡ ನ್ಯಾಯಮೂರ್ತಿಗಳ ಮೇಲಿದೆ ಎಂದರು.
ಈ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ಅದನ್ನು ತ್ವರಿತವಾಗಿ ಆಲಿಸಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಅಂತಿಮವಾಗಿ ಪೀಠ ನಿರ್ದೇಶಿಸಿತು.