ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಪತ್ನಿಯನ್ನು ನೋಡಿಕೊಳ್ಳುವ ನೈತಿಕ, ಕಾನೂನಾತ್ಮಕ ಹೊಣೆ ಆತನದ್ದೇ: ಪಂಜಾಬ್ ಹೈಕೋರ್ಟ್

ಇತ್ತೀಚಿನ ದಿನಗಳಲ್ಲಿ ಒಬ್ಬ ಕೂಲಿ ಕಾರ್ಮಿಕನೂ ದಿನಕ್ಕೆ ₹500 ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಾನೆ. ಇದಲ್ಲದೆ ಏರುತ್ತಿರುವ ಬೆಲೆಗಳನ್ನು ಗಮನಿಸಿದಾಗ ಗಂಡ ನೀಡುತ್ತಿರುವ ಜೀವನಾಂಶ ದೊಡ್ಡದು ಎನ್ನಲಾಗದು ಎಂದು ವ್ಯಾಖ್ಯಾನಿಸಿದ ಪೀಠ.
Punjab and Haryana High Court
Punjab and Haryana High Court
Published on

ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಕೂಡ ತನ್ನನ್ನು ಸಂಭಾಳಿಸಿಕೊಳ್ಳಲಾಗದ ಪತ್ನಿಯ ಜೀವನಾಂಶ ನೀಡುವ ನೈತಿಕ ಮತ್ತು ಕಾನೂನಾತ್ಮಕ ಹೊಣೆ ಅವನದೇ ಆಗಿರುತ್ತದೆ ಎಂದು  ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ [ಸಂದೀಪ್‌ ಮತ್ತು ಸುಮನ್‌ ನಡುವಣ ಪ್ರಕರಣ].

ಪತ್ನಿಗೆ ಜೀವನಾಂಶ ನೀಡುವಂತೆ ಸೂಚಿಸಿದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಎಚ್ ಎಸ್ ಮದನ್ ಅವರಿದ್ದ ಪೀಠ “ಪತಿ ವೃತ್ತಿಪರ ಭಿಕ್ಷುಕನಾಗಿದ್ದರೂ ಕೂಡ ನಿಸ್ಸಂಶಯವಾಗಿ ತನ್ನ ಹೆಂಡತಿಯ ಕಾಳಜಿ ಮಾಡುವ ನೈತಿಕ ಮತ್ತು ಕಾನೂನಾತ್ಮಕ ಹೊಣೆ ಆತನದ್ದಾಗಿರುತ್ತದೆ," ಎಂದು ಹೇಳಿದರು. ಅರ್ಜಿದಾರೆ ಪತ್ನಿ ಯಾವುದೇ ಮಾರ್ಗದಲ್ಲಿ ಆದಾಯಗಳಿಸುತ್ತಿದ್ದಾರೆ ಅಥವಾ ಸಾಕಷ್ಟು ಆಸ್ತಿ ಹೊಂದಿದ್ದಾರೆ ಎಂದು  ಸಾಬೀತುಪಡಿಸಲು ಪ್ರತಿವಾದಿಯಾಗಿರುವ ಪತಿಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪತಿ ಒಬ್ಬ ಸಮರ್ಥ ವ್ಯಕ್ತಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಒಬ್ಬ ಕೂಲಿ ಕಾರ್ಮಿಕನೂ ದಿನಕ್ಕೆ ₹500 ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಾನೆ. ಇದಲ್ಲದೆ ಏರುತ್ತಿರುವ ಬೆಲೆಗಳನ್ನು ಗಮನಿಸಿದಾಗ ಗಂಡ ನೀಡುತ್ತಿರುವ ಜೀವನಾಂಶ ದೊಡ್ಡದು ಎನ್ನಲಾಗದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಪತ್ನಿ 1955ರ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 24ರ ಅಡಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿ ಪ್ರಕರಣದ ಫಲಿತಾಂಶ ಬರುವವರೆಗೂ ಪತಿ ತನಗೆ ಮಾಸಿಕ ₹ 15,000 ಜೀವನಾಂಶ ಹಾಗೂ ದಾವೆ ವೆಚ್ವವಾಗಿ ₹ 11,000 ನೀಡುವಂತೆ ಕೋರಿದ್ದರು.

ಪ್ರಕರಣದ ವಿಚಾರಣೆ ಮುಕ್ತಾಯವಾಗುವವರೆಗೆ ಪತ್ನಿಗೆ ಮಾಸಿಕ ₹ 5,000 ಜೀವನಾಂಶ ನೀಡುವಂತೆ ವಿಚಾರಣಾ ನ್ಯಾಯಾಲಯ ಸೂಚಿಸಿತ್ತು. ಅಲ್ಲದೆ ವ್ಯಾಜ್ಯ ವೆಚ್ಚವಾಗಿ ಮತ್ತು ಪ್ರತಿ ಪ್ರಕರಣಕ್ಕೆ ಪತ್ನಿ ಹಾಜರಾಗಲು ₹ 500 ಸೇರಿಸಿ ಒಟ್ಟು ₹ 5,500 ಪಾವತಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೆಂಡತಿಯ ಸಂಪಾದನಾ ಮಾರ್ಗಗಳನ್ನು ಸಾಬೀತುಪಡಿಸದೇ ಇರುವುದರಿಂದ ಜೀವನಾಂಶ ಮತ್ತು ವ್ಯಾಜ್ಯ ವೆಚ್ಚ ಭರಿಸುವಂತೆ ಪತಿಗೆ ಸೂಚಿಸಿದ ವಿಚಾರಣಾ ನ್ಯಾಯಾಲಯದ ತೀರ್ಪು ಸಮರ್ಥನೀಯ ಎಂದು ನ್ಯಾಯಾಲಯ ಹೇಳಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sandeep_v__Suman
Preview
Kannada Bar & Bench
kannada.barandbench.com