ಸರ್ಕಾರಿ ಯೋಜನೆ ಜನಪ್ರಿಯಗೊಳಿಸಲು ಯೋಧರು, ನಾಗರಿಕ ಸೇವಕರ ಬಳಕೆ ತಪ್ಪಲ್ಲ: ದೆಹಲಿ ಹೈಕೋರ್ಟ್

"ಕಲ್ಯಾಣ ಯೋಜನೆ ಇದ್ದಮೇಲೆ , ಆ ಯೋಜನೆಯನ್ನು ಜನಪ್ರಿಯಗೊಳಿಸಬೇಕಲ್ಲವೇ? ಜಾಹೀರಾತುಗಳಲ್ಲಿ ಯಾವಾಗಲೂ ಮುಖ್ಯಮಂತ್ರಿಗಳು ಅಥವಾ ಪ್ರಧಾನಿಯ ಫೋಟೋಗಳು ಇರುತ್ತವೆ" ಎಂದ ನ್ಯಾಯಾಲಯ.
ಪ್ರಧಾನಿ ಮೋದಿ ಮತ್ತು ದೆಹಲಿ ಹೈಕೋರ್ಟ್
ಪ್ರಧಾನಿ ಮೋದಿ ಮತ್ತು ದೆಹಲಿ ಹೈಕೋರ್ಟ್

ನಾಗರಿಕ ಸೇವಕರು ಮತ್ತು ರಕ್ಷಣಾ ಸಿಬ್ಬಂದಿಯ ಮೂಲಕ ಸರ್ಕಾರ ತನ್ನ ಯೋಜನೆಗಳನ್ನು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.

ರಕ್ಷಣಾ ಸಚಿವಾಲಯದ ಸಾಧನೆಗಳನ್ನು ಪ್ರದರ್ಶಿಸಲು ವಿವಿಧ ರಕ್ಷಣಾ ಸಂಸ್ಥೆಗಳು ಮತ್ತು ಸೈನಿಕ ಶಾಲೆಗಳಲ್ಲಿ ಸೆಲ್ಫಿ ಪಾಯಿಂಟ್ ಗಳನ್ನು ಸ್ಥಾಪಿಸಲು ರಕ್ಷಣಾ ಸಚಿವಾಲಯ ನೀಡಿದ್ದ ನಿರ್ದೇಶನ ಮೇಲ್ನೋಟಕ್ಕೆ ಸೂಕ್ತವಾಗಿದೆ ಎಂದು ನ್ಯಾಯಾಲಯ ತಿಳಿಸಿತು.

"ಉತ್ತರಾಖಂಡದಲ್ಲಿ ಗಣಿ ಕಾರ್ಮಿಕರು ಸಿಕ್ಕಿಬಿದ್ದಾಗ, ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್‌ ಅದ್ಭುತ ಕೆಲಸ ಮಾಡಿದವು. ಸೇನೆಯು ಸೆಲ್ಫಿ ಪಾಯಿಂಟ್‌ನೊಂದಿಗೆ ಅದನ್ನು ಜನಪ್ರಿಯಗೊಳಿಸಲು ಬಯಸಿದರೆ, ಯಾರಿಗಾದರೂ ಸಮಸ್ಯೆಯಾಗಲಿದೆ ಅನ್ನಿಸುವುದಿಲ್ಲ. ಪಿಂಚಣಿ ಕುರಿತಾದ ಪ್ರಯೋಜನಗಳ ಬಗೆಗಿನ ಸೆಲ್ಫಿ ಪಾಯಿಂಟನ್ನು ನಾನು ಗಮನಿಸುತ್ತೇನೆ ಎಂದಿಟ್ಟುಕೊಳ್ಳೋಣ. ಆಗ ನನ್ನ ಪ್ರತಿಕ್ರಿಯೆ ಅದರಿಂದ ನನಗೆ ಪ್ರಯೋಜನ ಏನು ಎಂಬುದಾಗಿರುತ್ತದೆ. ಇದು ಈ ಅಂಶದ ಬಗ್ಗೆ ಚರ್ಚೆ ಅಥವಾ ವಿಚಾರಣೆಗೆ ಕಾರಣವಾಗುವುದಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿತು.

ಅಂತಹ ಸೆಲ್ಫಿ ಪಾಯಿಂಟ್‌ಗಳಲ್ಲಿ ಪ್ರಧಾನ ಮಂತ್ರಿಯವರ ಛಾಯಾಚಿತ್ರಗಳನ್ನು ಬಳಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ "ಇದು ರೂಢಿಯಲ್ಲವೇ? ಪ್ರತಿಯೊಬ್ಬ ಮುಖ್ಯಮಂತ್ರಿಯೂ ಜಾಹೀರಾತುಗಳಲ್ಲಿ ಫೋಟೋಗಳನ್ನು ಹಾಕುತ್ತಿದ್ದಾರೆ ತಾನೇ?" ಎಂದು ಕೇಳಿತು.

ಸರ್ಕಾರಿ ಯೋಜನೆಗಳು ಮತ್ತು ನೀತಿಗಳನ್ನು ಉತ್ತೇಜಿಸಲು ನಾಗರಿಕ ಸೇವಕರು ಮತ್ತು ರಕ್ಷಣಾ ಸಿಬ್ಬಂದಿಯನ್ನು ಬಳಸುವುದನ್ನು ಪ್ರಶ್ನಿಸಿ ಮಾಜಿ ಐಎಎಸ್ ಅಧಿಕಾರಿ ಇಎಎಸ್ ಶರ್ಮಾ ಮತ್ತು ಅಹಮದಾಬದ್‌ ಐಐಎಂನ ಮಾಜಿ ಡೀನ್ ಜಗದೀಪ್ ಎಸ್ ಛೋಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳೊಂದಿಗೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನಿರ್ದೇಶನ ನೀಡಿ ರಕ್ಷಣಾ ಸಚಿವಾಲಯ ಹೊರಡಿಸಿದ ಎರಡು ಆದೇಶಗಳನ್ನು ರದ್ದುಗೊಳಿಸುವಂತೆ ಮನವಿಯಲ್ಲಿ ಕೋರಲಾಗಿತ್ತು.

ನಾಗರಿಕ ಸೇವೆಗಳು ಮತ್ತು ಸಶಸ್ತ್ರ ಪಡೆಗಳನ್ನು ಆಡಳಿತಾರೂಢ ರಾಜಕೀಯ ಪಕ್ಷವಾದ ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸದಂತೆ ಸಂವಿಧಾನದ 14 ಮತ್ತು 21ನೇ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಬೇಕೆಂದು ವಕೀಲ ಪ್ರಶಾಂತ್‌ ಭೂಷಣ್ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ (ಎಸಿಜೆ) ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ಈ ಸಂಬಂಧ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಕೇಂದ್ರದ ಪರ ವಕೀಲರಿಗೆ ಸೂಚಿಸಿ ಪ್ರಕರಣವನ್ನು ಜನವರಿ 4, 2024ಕ್ಕೆ ಪಟ್ಟಿ ಮಾಡಿತು.

ಕಲ್ಯಾಣ ಯೋಜನೆಯನ್ನು ಜನಪ್ರಿಯಗೊಳಿಸಬಾರದೆ ಎಂದು ಕೂಡ ನ್ಯಾಯಾಲಯ ಅರ್ಜಿದಾರರನ್ನು ಪ್ರಶ್ನಿಸಿತು.

"ಕಲ್ಯಾಣ ಯೋಜನೆ ಇದ್ದರೆ, ಆ ಯೋಜನೆಯನ್ನು ಜನಪ್ರಿಯಗೊಳಿಸಬಾರದೆ? ಜಾಹೀರಾತುಗಳಲ್ಲಿ ಯಾವಾಗಲೂ ಮುಖ್ಯಮಂತ್ರಿಗಳು ಅಥವಾ ಪ್ರಧಾನಿಯ ಫೋಟೋಗಳು ಇರುತ್ತವೆ" ಎಂದು ನ್ಯಾಯಾಲಯ ನುಡಿಯಿತು.

Kannada Bar & Bench
kannada.barandbench.com