ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಲಿಂಗತ್ವ ಗುರುತನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ: ರಾಜಸ್ಥಾನ ಹೈಕೋರ್ಟ್

ಹೀಗಾಗಿ ಹುಟ್ಟಿನಿಂದಲೇ ಸ್ತ್ರೀಲಿಂಗ ವರ್ಗಕ್ಕೆ ಸೇರಿಸಿದ್ದ ಪುರುಷರೊಬ್ಬರ ಸೇವಾ ದಾಖಲೆಯ ವಿವರಗಳನ್ನು ಬದಲಿಸುವಂತೆ ಅಧಿಕಾರಿಗಳಿಗೆ ನ್ಯಾ. ಅನೂಪ್ ಕುಮಾರ್ ಧಂಡ್ ಅವರಿದ್ದ ಪೀಠ ಆದೇಶ ನೀಡಿತು.
Rajasthan High court
Rajasthan High court
Published on

ಲಿಂಗತ್ವದ ಗುರುತನ್ನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಅವರ ವ್ಯಕ್ತಿತ್ವದ ಅಂತರ್ಗತ ಭಾಗವಾಗಿದ್ದು ಇದು ಸ್ವಾಭಿಮಾನ, ಘನತೆ ಹಾಗೂ ಸ್ವಾತಂತ್ರ್ಯದ ಮೂಲಭೂತ ಅಂಶಗಳಲ್ಲಿ ಒಂದಾಗಿದೆ ಎಂದು ರಾಜಸ್ಥಾನ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

 ಹೀಗಾಗಿ ಹುಟ್ಟಿನಿಂದಲೇ ಸ್ತ್ರೀಲಿಂಗದ ವಿಭಾಗಕ್ಕೆ ಸೇರ್ಪಡೆ ಮಾಡಲಾಗಿದ್ದ ಪುರುಷರೊಬ್ಬರ ಸೇವಾ ದಾಖಲೆಯ ವಿವರಗಳನ್ನು ಬದಲಿಸುವಂತೆ ಅಧಿಕಾರಿಗಳಿಗೆ ನ್ಯಾ. ಅನೂಪ್ ಕುಮಾರ್ ಧಂಡ್ ಅವರಿದ್ದ ಪೀಠ ಮೇ 25 ರಂದು ನೀಡಿದ ಆದೇಶದಲ್ಲಿ ಸೂಚಿಸಲಾಗಿದೆ.  

ಅರ್ಜಿದಾರರನ್ನು ಹುಟ್ಟಿನಿಂದ ಸ್ತ್ರೀಲಿಂಗಕ್ಕೆ ಸೇರಿದವರು ಎಂದು ಪರಿಗಣಿಸಲಾಗಿತ್ತು. 2013ರಲ್ಲಿ ಸಾಮಾನ್ಯ ಸ್ತ್ರೀ ವರ್ಗದ ಅಡಿಯಲ್ಲಿ ಉದ್ಯೋಗವನ್ನು ಪಡೆದಿದ್ದ ಅವರು ಲಿಂಗತ್ವ ಅಸ್ಮಿತೆ ರೋಗಕ್ಕೆ (ಜಿಐಡಿ) ತುತ್ತಾಗಿ ಬಳಿಕ ಲಿಂಗ ಮರುಹೊಂದಾಣಿಕೆ ಶಸ್ತ್ರಚಿಕಿತ್ಸೆಗೆ (ಜಿಆರ್‌ಎಸ್‌) ಒಳಗಾದರು. ಆ ನಂತರ ಅವರು ಪುರುಷ ಲಿಂಗಿಯಾದರು. ಬಳಿಕ ಮಹಿಳೆಯೊಬ್ಬರನ್ನು ವಿವಾಹವಾಗಿ ಎರಡು ಮಕ್ಕಳ ತಂದೆಯೂ ಆದರು.

ತಮ್ಮ ಸೇವಾ ದಾಖಲೆಗಳಲ್ಲಿ ತಮ್ಮ ಹೆಸರು ಮತ್ತು ಲಿಂಗದ ಹೆಸರನ್ನು ಬದಲಿಸದ ಹೊರತು ತನಗೆ ಮತ್ತು ತನ್ನ ಕುಟುಂಬಕ್ಕೆ ಸರ್ಕಾರಿ ಸೇವೆಯ ಸವಲತ್ತುಗಳನ್ನು ಪಡೆಯಲು ಕಷ್ಟವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಅಗತ್ಯ ಬದಲಾವಣೆಗಳನ್ನು ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಈ ವಾದಗಳನ್ನು ನಿರಾಕರಿಸಿದ ಸರ್ಕಾರ ಅರ್ಜಿದಾರರು ಮಹಿಳಾ ಅಭ್ಯರ್ಥಿಯಾಗಿ ನೇಮಕಗೊಂಡಿದ್ದು ಈ ಗುರುತಿನ ಆಧಾರದ ಮೇಲೆ ಹೆಸರು ಮತ್ತು ಲಿಂಗದ ಬಗೆಗಿನ ಮಾಹಿತಿಯನ್ನು ದಾಖಲಿಸಲಾಗಿದೆ. ಲಿಂಗ ಪರಿವರ್ತನೆಗೆ ಸಂಬಂಧಿಸಿದಂತೆ ಅವರು ಸಿವಿಲ್ ನ್ಯಾಯಾಲಯದಿಂದ ಪ್ರಮಾಣಪತ್ರ ಪಡೆಯಬೇಕು ಎಂದಿತು.

ವಾದಗಳನ್ನು ಆಲಿಸಿದ ನ್ಯಾಯಾಲಯ, ಲಿಂಗ ಗುರುತಿಸುವಿಕೆ ಎಂಬುದು ಒಬ್ಬರ ಜೀವನದ ಅತ್ಯಂತ ಮೂಲಭೂತ ಮತ್ತು ಪ್ರಾಥಮಿಕ ಅಂಶಗಳಲ್ಲಿ ಒಂದಾಗಿದೆ ಎಂದು ಒತ್ತಿಹೇಳಿತು.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಲೈಂಗಿಕ ದೃಷ್ಟಿಕೋನ ಅಥವಾ ಲಿಂಗ ಗುರುತಿನ ಆಧಾರದ ಮೇಲೆ ತಾರತಮ್ಯವಿಲ್ಲದೆ ಬದುಕಲು, ಮೂಲಭೂತ ಅಗತ್ಯವಾದ ಎಲ್ಲಾ ಮಾನವ ಹಕ್ಕುಗಳನ್ನು ಆನಂದಿಸಲು ಪ್ರತಿಯೊಬ್ಬರೂ ಅರ್ಹರಾಗಿದ್ದಾರೆ.

  • ಋಗ್ವೇದದಲ್ಲಿ ಗಂಡಸರನ್ನು ʼಪುರುಷʼ ಎಂದೂ ಮಹಿಳೆಯರನ್ನು ಪ್ರಕೃತಿ ಎಂದೂ ವ್ಯಾಖ್ಯಾನಿಸಲಾಗಿದ್ದು ಮೂರನೇ ಲಿಂಗ ತೃತೀಯ ಪ್ರಕೃತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ಭಾರತೀಯ ಸಮಾಜ ಅವರನ್ನು ತೃತೀಯ ಲಿಂಗಕ್ಕೆ ಸೇರಿದವರೆಂದು ಗುರುತಿಸಿದ್ದು ಇಲ್ಲದಿದ್ದರೆ ಅವರಿಗೆ  ಕಾನೂನುಬದ್ಧವಾಗಿ ಅಂತಹ ಮಾನ್ಯತೆ ದೊರೆಯುತ್ತಿರಲಿಲ್ಲ. ಈಗ ಎಲ್ಲಾ ಸರಿ ಹೋಗಿದೆ ಎಂದಲ್ಲ, ನಾಗರಿಕ ಸಮಾಜದ ಭಾಗವಾಗಲು ತೃತೀಯ ಲಿಂಗ ಸಮುದಾಯಕ್ಕೆ ಸೇರಿದವರು ಹೆಣಗಾಡುತ್ತಿದ್ದಾರೆ

  • ಪುರುಷನಿರಲಿ, ಮಹಿಳೆಯಿರಲಿ ಅಥವಾ ಇನ್ನಾವುದೇ ಲಿಂಗಕ್ಕೆ ಸೇರಿದವರಾಗಿರಲಿ ಈ ಗ್ರಹದ ಮೇಲಿರುವ ಪ್ರತಿಯೊಬ್ಬರಿಗೂ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿದೆ. ಹಿಂದಿನವರೆಗೂ, ನಾವು ಗಂಡು ಮತ್ತು ಹೆಣ್ಣನ್ನು ಎರಡು ಜೈವಿಕ ಲಿಂಗತ್ವ ಎಂದು ಪರಿಗಣಿಸುತ್ತಿದ್ದೆವು. ಆದರೆ ವಿಕಸನಗೊಂಡ ವಿಜ್ಞಾನ ಕೇವಲ ಈ ಎರಡು ಲಿಂಗಗಳಿಗಿಂತಲೂ ಹೆಚ್ಚಿನ ಲಿಂಗಗಳಿವೆ ಎಂದು ಸಾರಿದೆ.

ಈ ಹಿನ್ನೆಲೆಯಲ್ಲಿ, ಲಿಂಗತ್ವದ ವಿವರಗಳನ್ನು ಬದಲಾಯಿಸಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನಂತರ ಸೇವಾ ದಾಖಲೆಗಳಲ್ಲಿರುವ ಮಾಹಿತಿ ಬದಲಾಯಿಸಲು ಅಧಿಕಾರಿಗಳೆದುರು ಹೊಸದಾಗಿ ಅರ್ಜಿ ಸಲ್ಲಿಸುವಂತೆ ಪೀಠ ಅರ್ಜಿದಾರರಿಗೆ ಆದೇಶಿಸಿತು. ಜೊತೆಗೆ ಆದೇಶ ಪಾಲನೆಯಾದ ಕುರಿತು ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿತು.

Kannada Bar & Bench
kannada.barandbench.com