ಪ್ರತಿಯೊಂದು ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆಯು ಸಾರ್ವಜನಿಕ ಸುವ್ಯವಸ್ಥೆಯ ಪ್ರಶ್ನೆಯಾಗುವುದಿಲ್ಲ. ಹೀಗಾಗಿ, ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಲು ಕಾನೂನು ತಂದಿರುವುದು ತಪ್ಪಾದ ನಡೆ ಎಂದು ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಳಿದರು.
ಕರ್ನಾಟಕ ಪೊಲೀಸ್ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಈ ಸಂದರ್ಭದಲ್ಲಿ ಕಾಯಿದೆ ವಿರೋಧಿಸಿ ಪ್ರತ್ಯುತ್ತರ ದಾಖಲಿಸುವಾಗ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಸಿದ್ದ ಸಿಂಘ್ವಿ ಅವರು ಮೇಲಿನಂತೆ ಹೇಳಿದರು. ಈ ಕಾಯಿದೆಯ ಅನುಪಸ್ಥಿತಿಯಲ್ಲಿ ರಮ್ಮಿ ಆಡುವುದು ಸಾರ್ವಜನಿಕ ಸುವ್ಯವಸ್ಥೆಗೆ ಎರವಾಗಿತ್ತು ಎಂದು ಹೆಳಲು ಸಾಧ್ಯವೇ? ಎಂದು ಅವರು ಕಾಯಿದೆಯ ಉದ್ದೇಶವನ್ನು ಪ್ರಶ್ನಿಸಿದರು.
ಎಂ ಜೆ ಶಿವಾನಿ ವರ್ಸಸ್ ಕರ್ನಾಟಕ ರಾಜ್ಯ, ಚಮರ್‌ಭಾಗವಾಲಾ, ಡಾ. ಕೆ ಆರ್ ಲಕ್ಷ್ಮಣನ್ ವರ್ಸಸ್ ತಮಿಳುನಾಡು ರಾಜ್ಯ ಮತ್ತಿತರ ಪ್ರಕರಣಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದ ಸಿಂಘ್ವಿ ಕರ್ನಾಟಕ ಸರ್ಕಾರದ ಕಾನೂನು ಸಂವಿಧಾನ ವಿರೋಧಿಯಾಗಿದೆ ಎಂದು ವಾದ ಮಂಡನೆ ಮಾಡಿದರು.
ಇದಕ್ಕೂ ಮುನ್ನ, ಮಧ್ಯಪ್ರವೇಶಕಾರರಾಗಿ ವಾದಿಸಿದ ವಕೀಲ ಶ್ರೀಧರ್ ಪ್ರಭು ಅವರು ರಾಜ್ಯ ಸರ್ಕಾರದ ಕಾನೂನನ್ನು ಸಮರ್ಥಿಸಿದರು. ಅಂತಿಮವಾಗಿ ಹಿರಿಯ ವಕೀಲ ಜೈನ್ ಅವರು ಮತ್ತೊಂದು ಮನವಿ ಸಲ್ಲಿಕೆಯಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದರು. ಈ ಸಂಬಂಧ ಪೀಠವು ನೋಟಿಸ್ ಜಾರಿ ಮಾಡಿತು.
ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ವಾದಿಸಲು ಮುಂದಾದರು. ಆಗ ಪೀಠವು ನಿಮ್ಮ ವಾದವನ್ನು ಮುಂದಿನ ವಿಚಾರಣೆಯಲ್ಲಿ ಆಲಿಸಲಾಗುವುದು ಎಂದಿತು.
ಹಿರಿಯ ವಕೀಲ ಆರ್ಯಮಾ ಸುಂದರಂ ಅವರು ಪ್ರತ್ಯುತ್ತರ ವಾದದಲ್ಲಿ ನಿರಂತರತೆ ಇರುವಂತೆ ನೋಡಿಕೊಳ್ಳಿ ಎಂದು ಪೀಠಕ್ಕೆ ಮನವಿ ಮಾಡಿದರು. ಅಂತಿಮವಾಗಿ ಪೀಠವು ಡಿಸೆಂಬರ್ 14ಕ್ಕೆ ವಿಚಾರಣೆ ಮುಂದೂಡಿತು.