ಕಿರಿಕಿರಿ ಉಂಟುಮಾಡುವ ಸಣ್ಣ ಕ್ರಿಯೆಗಳನ್ನೆಲ್ಲಾ ಎಸ್‌ಸಿ, ಎಸ್‌ಟಿ ಕಾಯಿದೆಯಡಿ ತರಲಾಗದು: ಮದ್ರಾಸ್‌ ಹೈಕೋರ್ಟ್‌

ಎಸ್‌ಸಿ/ಎಸ್‌ಟಿ ಸಮುದಾಯದ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣಕ್ಕೆ ಗುರಿಯಾಗಿದ್ದ ಏರ್‌ ಇಂಡಿಯಾದ ಮೂವರು ಹಿರಿಯ ಅಧಿಕಾರಿಗಳ ವಿರುದ್ಧದ ಪ್ರಕ್ರಿಯೆಯನ್ನು ನ್ಯಾಯಾಲಯ ವಜಾ ಮಾಡಿದೆ.
Madras High Court
Madras High Court

ಸಂತ್ರಸ್ತರ ಜಾತಿಯ ಕಾರಣಕ್ಕಾಗಿ ಉಂಟು ಮಾಡಿದ ಮತ್ತು ಉದ್ದೇಶಪೂರ್ವಕವಾದ ಜಾತೀಯ ಅಪಮಾನಗಳ ಹೊರತಾಗಿ ಕಿರಿಕಿರಿ ಉಂಟು ಮಾಡುವ ಪ್ರತಿಯೊಂದು ಕ್ರಿಯೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ನಿಯಂತ್ರಣ) ಕಾಯಿದೆ ಅಡಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಹೇಳಿದೆ [ಎಸ್‌ ವೆಲರಾಜ್‌ ವರ್ಸಸ್‌ ತಮಿಳುನಾಡು ಸರ್ಕಾರ].

ಸಹೋದ್ಯೋಗಿ ದಾಖಲಿಸಿರುವ ಪ್ರಕರಣದಲ್ಲಿ ಅರ್ಜಿದಾರ ಅಧಿಕಾರಿಗಳು ಬೆದರಿಕೆ ಹಾವಭಾವ ತೋರಿದ್ದು, ಕುಹಕದ ನಗು ಬೀರಿದ್ದಾರೆ ಎಂದು ವಿವರಿಸಿರುವುದು ಕಾಯಿದೆ ಅಡಿ ಸಂಜ್ಞೇಯ ಅಪರಾಧವಲ್ಲ ಎಂದು ನ್ಯಾಯಮೂರ್ತಿ ಆರ್‌ ಎನ್‌ ಮಂಜುಳಾ ಹೇಳಿದ್ದಾರೆ.

“ಸಂತ್ರಸ್ತರ ಜಾತಿಯ ಕಾರಣಕ್ಕಾಗಿ ಅಪಮಾನ ಮಾಡಿದ ಮತ್ತು ಉದ್ದೇಶಪೂರ್ವಕವಾದ ಅಪಮಾನ ಕೃತ್ಯಗಳ ಹೊರತಾಗಿ ಪ್ರತಿ ಸಣ್ಣ ಕ್ರಿಯೆ ಅಥವಾ ಕಿರಿಕಿರಿಯನ್ನು ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧ ಎಂದು ಅರ್ಥೈಸಿಕೊಳ್ಳಬಾರದು. ಅರ್ಜಿದಾರ ಅಧಿಕಾರಿಗಳು ಸಂತ್ರಸ್ತ ಅಧಿಕಾರಿಯ ತಪ್ಪಿನ ಬಗ್ಗೆ ಮತ್ತು ಕಚೇರಿಯಲ್ಲಿ ಅವರ ಕರ್ತವ್ಯ ನಿರ್ವಹಣೆಯ ಸಂದರ್ಭದ ನಡತೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಅದಕ್ಕೆ ಕ್ರಿಮಿನಲ್‌ ಬಣ್ಣ ನೀಡಿ, ಅದು ವಿಶೇಷ ಕಾಯಿದೆ ಅಡಿ ಬೆದರಿಕೆ, ಕಿರುಕುಳ ಅಥವಾ ಅವಮಾನ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.

Also Read
ಎಸ್‌ಸಿ/ಎಸ್‌ಟಿ ಕಾಯಿದೆ: ವರ್ಷದಿಂದ ಸಿಎಂ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆ ನಡೆಸದಿರುವುದಕ್ಕೆ ಹೈಕೋರ್ಟ್‌ ಆಕ್ಷೇಪ

ಪ್ರತೀಕಾರ ತೀರಿಸಿಕೊಳ್ಳಲು ನ್ಯಾಯಾಲಯದ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿ ಬಳಸಬಾರದು ಎಂದು ಪೀಠವು ಒತ್ತಿ ಹೇಳಿದ್ದು, ಏರ್‌ ಇಂಡಿಯಾದ ಮೂವರು ಹಿರಿಯ ಅಧಿಕಾರಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಯನ್ನು ವಜಾಗೊಳಿಸಿದೆ. ತಮ್ಮ ಕಿರಿಯ ಸಹೋದ್ಯೋಗಿ ಜಾತೀಯ ನಿಂದನೆ, ಅಪಮಾನದ ಮೂಲಕ ಸಹೋದ್ಯೋಗಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದಲ್ಲಿನ ಎಲ್ಲ ಪಕ್ಷಕಾರರು ಏರ್‌ ಇಂಡಿಯಾದ ನೌಕರರಾಗಿದ್ದಾರೆ. ಹಾಗಾಗಿ ಪ್ರಸಕ್ತ ಪ್ರಕರಣವನ್ನು ಕೆಲಸದ ಸ್ಥಳದಲ್ಲಿ ನಡೆದ ಪ್ರಕರಣ ಎಂದು ದಾಖಲಿಸಬೇಕಿತ್ತು. ಅಲ್ಲದೆ ಪಕ್ಷಕಾರರನ್ನು ಐಪಿಸಿ ಸೆಕ್ಷನ್‌ 21ರ ಅಡಿ 'ಸಾರ್ವಜನಿಕ ಸೇವಕರು' ಎಂದು ಪರಿಗಣಿಸಬೇಕಿತ್ತು. ಆ ಮೂಲಕ ಅಪರಾಧ ಸಂಹಿತೆಯ ಸೆಕ್ಷನ್‌ 197ರ ಅಡಿ ಅವರ ವಿರುದ್ಧ ಆರೋಪ ಪಟ್ಟಿಯನ್ನು ದಾಖಲಿಸುವುದಕ್ಕೂ ಮುನ್ನ ಸಕ್ಷಮ ಪ್ರಾಧಿಕಾರ ಪೂರ್ವಾನುಮತಿ ಪಡೆಯಬೇಕಿತ್ತು. ಅದನ್ನು ಪ್ರಕರಣದಲ್ಲಿ ಅನುಸರಿಸಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಅಲ್ಲದೆ, ಮೂವರ ವಿರುದ್ಧವೂ ಮಾಡಲಾಗಿರುವ ನಿರ್ದಿಷ್ಟ ಅರೋಪಗಳನ್ನು ಪ್ರಾಸಿಕ್ಯೂಷನ್‌ ದಾಖಲಿಸಿರಲಿಲ್ಲ ಬದಲಿಗೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಒಂದು ಆರೋಪ ಪಟ್ಟಿಯನ್ನು ಪ್ರಕರಣದಲ್ಲಿ ಸಲ್ಲಿಸಲಾಗಿತ್ತು.

ಇದನ್ನು ಗಮನಿಸಿದ ನ್ಯಾಯಾಲಯವು, ಪ್ರತಿ ಘಟನೆಗೆ ಸಂಬಂಧಿಸಿದಂತೆ, ಪ್ರತಿ ಆರೋಪಿ ವಿರುದ್ಧ ಸಂಬಂಧಿತ ಸಮಯದಲ್ಲಿ ವೈಯಕ್ತಿಕ ದೂರುಗಳನ್ನು ದಾಖಲಿಸಬೇಕಾಗುತ್ತದೆ. ವಿವಿಧ ಆರೋಪಗಳನ್ನು ಒಂದು ದೂರಿನಲ್ಲಿ ಸಂಯೋಜಿಸಲಾಗುವುದಿಲ್ಲ ಮತ್ತು ಎಲ್ಲವನ್ನೂ ಒಂದೇ ಆರೋಪಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗದು ಎಂದು ಅಧಿಕಾರಿಗಳ ವಿರುದ್ಧದ ಪ್ರಕ್ರಿಯೆ ವಜಾ ಮಾಡಿರುವ ಬಗ್ಗೆ ಹೇಳಿದೆ.

Related Stories

No stories found.
Kannada Bar & Bench
kannada.barandbench.com