ಮಹಿಳೆಯರು ಧರಿಸಲು ಆಯ್ಕೆ ಮಾಡಿಕೊಂಡ ಬಟ್ಟೆಯ ಆಧಾರದ ಮೇಲೆ ಆಕ್ಷೇಪಣೆ ಎತ್ತುವುದನ್ನು ಸಮರ್ಥಿಸಲಾಗದು ಮತ್ತು ಮಹಿಳೆಯರನ್ನು ಅವರು ತೊಡುವ ಉಡುಪನ್ನು ಆಧರಿಸಿ ವರ್ಗೀಕರಿಸುವುದನ್ನು ಸಹಿಸಲಾಗದು ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ [ಕೇರಳ ಸರ್ಕಾರ ಮತ್ತು ಸಿವಿಕ್ ಚಂದ್ರನ್ ನಡುವಣ ಪ್ರಕರಣ].
ದೇಶದ ಕಾನೂನಿಗೆ ಒಳಪಟ್ಟು ತಮಗೆ ಬೇಕಾದುದನ್ನು ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೋರಿಕ್ಕೋಡ್ ಸೆಷನ್ಸ್ ನ್ಯಾಯಾಧೀಶ ಕೃಷ್ಣಕುಮಾರ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಚಂದ್ರನ್ ಅವರಿಗೆ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಎತ್ತಿ ಹಿಡಿದಿದ್ದ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಹೈಕೋರ್ಟ್ ಪೀಠ ತೀರ್ಪಿನಲ್ಲಿರುವ ವಿವಾದಾತ್ಮಕ ಅಂಶಗಳನ್ನು ತೆಗೆದು ಹಾಕಲು ನಿರ್ಧರಿಸಿತ್ತು.
ದೇಶದ ಕಾನೂನಿಗೆ ಒಳಪಟ್ಟು ತಮಗೆ ಬೇಕಾದುದನ್ನು ಧರಿಸುವ ಸ್ವಾತಂತ್ರ್ಯ ಅವನು/ ಅವಳಿಗೆ ಇದೆ. ಮಹಿಳೆ ಧರಿಸುವುದನ್ನು ಆಧರಿಸಿ ಆಕೆಯನ್ನು ಗುರಿಯಾಗಿಸುವುದನ್ನು ಸಮರ್ಥಿಸಲಾಗದು. ಮಹಿಳೆಯನ್ನು ಆಕೆ ಧರಿಸಿದ ಉಡುಪಿನಿಂದ ನಿರ್ಣಯಿಸಲು ಯಾವುದೇ ತಾರ್ಕಿಕತೆ ಇಲ್ಲ. ಮಹಿಳೆಯರನ್ನು ಅವರ ಉಡುಪು ಮತ್ತು ಅಭಿವ್ಯಕ್ತಿಗಳ ಆಧಾರದ ಮೇಲೆ ವರ್ಗೀಕರಿಸುವ ಮಾನದಂಡಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ.
ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪನ್ನು ಧರಿಸಿದ್ದರೂ ಕೂಡ, ಅದು ಆಕೆಯ ಘನತೆಗೆ ಧಕ್ಕೆ ತರಲು ನೀಡುವ ಪರವಾನಗಿ ಅಲ್ಲ.
ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪಿತ ವ್ಯಕ್ತಿಯನ್ನು ಬಿಡುಗಡೆ ಮಾಡಲು ಲೈಂಗಿಕ ಪ್ರಚೋದನಕಾರಿ ಉಡುಗೆಯನ್ನು ಆಧಾರವಾಗಿ ಪರಿಗಣಿಸಲಾಗದು.
ಮಹಿಳೆಯರು ಪುರುಷ ಗಮನ ಸೆಳೆಯಲು ಮಾತ್ರ ಉಡುಗೆ ತೊಡುತ್ತಾರೆ ಎಂಬ ಯಾವುದೇ ಆಲೋಚನೆ ಇರಬಾರದು. ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಕ್ಕಾಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವುದು ತಪ್ಪು.
ಯಾವುದೇ ಉಡುಪನ್ನು ಧರಿಸುವ ಹಕ್ಕು ಸಂವಿಧಾನ ಒದಗಿಸಿದ ವೈಯಕ್ತಿಕ ಸ್ವಾತಂತ್ರ್ಯದ ಸ್ವಾಭಾವಿಕ ವಿಸ್ತರಣೆಯಾಗಿದೆ.
ಆರೋಪಿಗೆ ಜಾಮೀನು ನೀಡುವಾಗ ಸಂತ್ರಸ್ತೆಯ ಉಡುಗೆ, ನಡತೆ ಅಥವಾ ಚಾರಿತ್ರ್ಯದ ಬಗ್ಗೆ ಚರ್ಚೆಯನ್ನು ತೀರ್ಪು ಉಲ್ಲೇಖಿಸಬಾರದು ಎಂದು ಅಪರ್ಣಾ ಭಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಅಲ್ಲದೆ ನ್ಯಾಯಾಧೀಶರಾದವರು ಸಂತ್ರಸ್ತೆಯ ವಿಶ್ವಾಸಕ್ಕೆ ಧಕ್ಕೆ ತರುವಂತಹ ಇಲ್ಲವೇ ಅಲುಗಾಡಿಸುವಂತಹ ಯಾವುದೇ ಪದಗಳನ್ನುಹೇಳಬಾರದು ಅಥವಾ ಬರೆಯಬಾರದು ಎಂದು ಕೂಡ ಅದೇ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ಕಾರಣಗಳಿಗಾಗಿ ಸಂತ್ರಸ್ತೆಯ ಪ್ರಚೋದನಕಾರಿ ಉಡುಗೆಗೆ ಸಂಬಂಧಿಸಿದಂತೆ ಆಕ್ಷೇಪಿತ ಆದೇಶದಲ್ಲಿನ ಹೇಳಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಈ ಮೂಲಕ ಅವುಗಳನ್ನು ತೆಗೆದುಹಾಕಲಾಗುತ್ತದೆ.