ಎಲ್ಲವನ್ನೂ ಅನುಮಾನಿಸಲಾಗದು: ವಿವಿಪ್ಯಾಟ್ ಮತ್ತು ಇವಿಎಂ ತಾಳೆ ಕುರಿತ ಅರ್ಜಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂ

ಇವಿಎಂಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದು ಮತದಾರರ ಪ್ರಜಾಸತ್ತಾತ್ಮಕ ಆಯ್ಕೆಯನ್ನು ತಮಾಷೆಯ ವಿಚಾರವಾಗಿಸುತ್ತದೆ ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಹೇಳಿದರು.
Supreme Court, EVM
Supreme Court, EVM

ಚುನಾವಣೆ ಸಂದರ್ಭದಲ್ಲಿ ವಿವಿಪ್ಯಾಟ್‌ ಚೀಟಿಗಳನ್ನು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ  ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ, ಎಲ್ಲವನ್ನೂ ಅನುಮಾನಿಸಲಾಗದು. ಅರ್ಜಿದಾರರು ಇವಿಎಂನ ಪ್ರತಿಯೊಂದು ಅಂಶವನ್ನು ಟೀಕಿಸುವ ಅಗತ್ಯವಿಲ್ಲ ಎಂದರು.

“ವಿವರಣೆ ನೀಡಿದಾಗ ನೀವದನ್ನು ಮೆಚ್ಚಿಕೊಳ್ಳಬೇಕು. (ಸರ್ಕಾರೇತರ ಸಂಸ್ಥೆ ಎಡಿಆರ್‌ ಪರ ವಾದ ಮಂಡಿಸುತ್ತಿರುವ) ಪ್ರಶಾಂತ್‌ ಭೂಷಣದ್‌ ಅವರೇ ಯಾವುದೇ ವಿವರಣೆಯ ಅಗತ್ಯವಿಲ್ಲ. ಕೆಲವು ಸುಧಾರಣೆಗಳನ್ನು ತಂದರೆ ಅದು ಕಾನೂನುರೀತ್ಯಾ ಇರುವವರೆಗೆ ಅವರು ನಿಮಗೆ ಏಕೆ ವಿವರಿಸಬೇಕು. ಬಲ್ಬ್‌ ಬೇಕೆ ಬೇಡವೇ ಬೆಳಕು ಎಷ್ಟಿರಬೇಕು ಎಂಬುದನ್ನೆಲ್ಲಾ ಅವರೇ (ಪ್ರತಿವಾದಿಗಳು) ನಿರ್ಧರಿಸಬೇಕು” ಎಂದು ನ್ಯಾಯಾಲಯ ಹೇಳಿತು.

ಇದು ಮೂಲಭೂತ ಹಕ್ಕುಗಳ ಪ್ರಶ್ನೆಯನ್ನು ಒಳಗೊಂಡ ಪ್ರಕರಣ ಎಂದು ಮತ್ತೊಬ್ಬ ಅರ್ಜಿದಾರರ ಪರ ವಕೀಲರೊಬ್ಬರು ವಾದಿಸಿದರು. ಆಗ ನ್ಯಾಯಾಲಯ “ಮೂಲಭೂತ ಹಕ್ಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅತಿಯಾದ ಅನುಮಾನ ಇಲ್ಲಿ ಕೆಲಸ ಮಾಡದು” ಎಂದಿತು.

ನಂತರ ವಕೀಲರೊಬ್ಬರು ಬಾಂಗ್ಲಾದೇಶದಂತಹ ವಿದೇಶಗಳಲ್ಲಿನ ವ್ಯವಸ್ಥೆಯನ್ನು ಸೂಚಿಸಿದಾಗ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

"ನಮ್ಮ ವ್ಯವಸ್ಥೆ  ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಮಗೆ ತಿಳಿದಿದೆ. ಬ್ಯಾಲೆಟ್ ಪೇಪರ್‌ಗಳ ವಿಚಾರದಲ್ಲಿ ಏನಾಯಿತು ಎಂಬುದೂ  ನಮಗೆ ಗೊತ್ತಿದೆ. ನಮ್ಮ ಮತದಾರರ ಸಂಖ್ಯೆಯೂ ಹೆಚ್ಚಿದ್ದು ಜನರು ಹೊಂದಿರುವ ನಂಬಿಕೆಯನ್ನು ಇದು ತೋರಿಸುತ್ತದೆ..." ಎಂದಿತು.

ಅರ್ಜಿದಾರರ ವಿರುದ್ಧ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ  ಇವಿಎಂಗಳಿಗೆ ಸಂಬಂಧಿಸಿದಂತೆ ಮತ್ತೆ ಮತ್ತೆ ಅರ್ಜಿ ಸಲ್ಲಿಸುವುದು ಮತದಾರರ ಪ್ರಜಾಸತ್ತಾತ್ಮಕ ಆಯ್ಕೆಯನ್ನು ತಮಾಷೆಯ ವಿಚಾರವಾಗಿಸುತ್ತದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಇಂತಹ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದರು.

ಆದರೆ ಅರ್ಜಿ ಹಿಂದೆಯೇ ಸಲ್ಲಿಕೆಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಕೆಲಸದ ಒತ್ತಡದಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವಿಳಂಬವಾಗಿದೆ. ಇದರಲ್ಲಿ ಅರ್ಜಿದಾರರ ತಪ್ಪಿದೆ ಎಂದು ಹೇಳಲಾಗದು ಎಂದು ಅದು ನುಡಿಯಿತು.

 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಕಥನಗಳನ್ನು ಹೆಣೆಯಲಾಗಿದೆ ಎಂಬ ಮೆಹ್ತಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ “ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಜನರಿಗೆ ಸ್ವಾತಂತ್ರ್ಯ ಇದೆ. ಅವರು ಹಾಗೆ ಮಾಡಬಹುದು” ಎಂದಿತು.

ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಆರೋಪ ಮಾಡುತ್ತಿಲ್ಲ ಆದರೆ ವ್ಯವಸ್ಥೆಯ ಬಗ್ಗೆ ಅನುಮಾನಗಳಿವೆ ಎಂದರು.

 ಇವಿಎಂಗಳ ಮೂಲಕ ಹಾಕಲಾದ ಪ್ರತಿಯೊಂದು ಮತವನ್ನು ಕೂಡ ವಿವಿಪ್ಯಾಟ್‌ ಚೀಟಿಗಳೊಂದಿಗೆ ತಾಳೆ ಮಾಡುವಂತೆ ಕೆಲ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು.

ಇಂದಿನ ವಿಚಾರಣೆ ವೇಳೆ ಸಂಜಯ್‌ ಹೆಗ್ಡೆ ಹಾಗೂ ನಿಜಾಂ ಪಾಷಾ ಅವರು ಕೂಡ ಅರ್ಜಿದಾರರ ಪರವಾಗಿ ವಾದ ಮಂಡಿಸಿದರು.

ಕಳೆದ ವಿಚಾರಣೆ ವೇಳೆ ಇವಿಎಂ ದುರ್ಬಳಕೆ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶಿಕ್ಷಿಸುವಂತಹ ಯಾವುದಾದರೂ ಕಾನೂನು ಇದೆಯೇ ಎಂದು ಭಾರತೀಯ ಚುನಾವಣಾ ಆಯೋಗವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು.

Related Stories

No stories found.
Kannada Bar & Bench
kannada.barandbench.com