ಹೇಳುವುದೆಲ್ಲವೂ ದ್ವೇಷದ ಮಾತಲ್ಲ: ಸಮಸ್ಯೆ ಎಂದರೆ ಕಾನೂನಿನಲ್ಲಿ ದ್ವೇಷಭಾಷಣದ ವ್ಯಾಖ್ಯಾನವಿಲ್ಲ ಎಂದ ಸುಪ್ರೀಂ ಕೋರ್ಟ್

ವ್ಯಕ್ತಿಗಳ ವಿರುದ್ಧದ ಪ್ರತಿ ಹೇಳಿಕೆಯನ್ನೂ ದ್ವೇಷಭಾಷಣ ಎನ್ನಲಾಗದು. ಹಾಗೆ ವರ್ಗೀಕರಿಸಲು ಕೆಲ ನಿಂದನೆಗಳನ್ನು ಮಾಡಿರಬೇಕಾಗುತ್ತದೆ ಎಂದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ.
Supreme Court
Supreme Court
Published on

ದೇಶದ ಕಾನೂನಿನಡಿ ದ್ವೇಷಭಾಷಣಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಇದಕ್ಕೆ ಅಪರಾಧ ನ್ಯಾಯ ವ್ಯವಸ್ಥೆಯು ಐಪಿಸಿ ಸೆಕ್ಷನ್ 153ಎಯನ್ನೇ ಅವಲಂಬಿಸಬೇಕಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಶಹೀನ್ ಅಬ್ದುಲ್ಲಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಐಪಿಸಿ ಸೆಕ್ಷನ್ 153ಎ ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಕೆರಳಿಸುವ ಕೃತ್ಯಗಳಿಗೆ ದಂಡನೆ ವಿಧಿಸುತ್ತದೆ.

Also Read
ʼಗುಂಡು ಹೊಡೆಯಿರಿʼ ಎಂದು ಮಂತ್ರಿ ಹೇಳುವುದು ಕೊಲ್ಲಲು ನೀಡುವ ಪ್ರಚೋದನೆ: ದ್ವೇಷಭಾಷಣ ಕುರಿತಂತೆ ನ್ಯಾ. ಮದನ್ ಲೋಕೂರ್

“ಹೇಳುವ ಎಲ್ಲವೂ ದ್ವೇಷ ಭಾಷಣ ಅಥವಾ ಸೆಕ್ಷನ್‌ 153ರ ವ್ಯಾಪ್ತಿಯಡಿ ಬರುವುದಿಲ್ಲ. ನಾವದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆತಂಕದ ಸಂಗತಿ ಎಂದರೆ ದ್ವೇಷ ಭಾಷಣವನ್ನು ವ್ಯಾಖ್ಯಾನಿಸಲಾಗಿಲ್ಲ (ಹೀಗಾಗಿ) ನಾವು 153ಎಯನ್ನೇ ಅವಲಂಬಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಇಷ್ಟಾದರೂ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ವ್ಯಕ್ತಿಗಳ ವಿರುದ್ಧದ ಪ್ರತಿಯೊಂದು ಹೇಳಿಕೆಯನ್ನೂ ದ್ವೇಷಭಾಷಣ ಎನ್ನಲಾಗದು. ಹಾಗೆ ವರ್ಗೀಕರಿಸಲು ಕೆಲ ನಿಂದನೆಗಳನ್ನು ಮಾಡಿರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು.  

Also Read
ಕಾನೂನು ಸದಾ ನ್ಯಾಯಯುತ ಎಂದೇನೂ ಅಲ್ಲ; ಅಧಿಕಾರರೂಢರಿಗೆ ಸತ್ಯ ಹೇಳಿ; ದ್ವೇಷ ಭಾಷಣ ಖಂಡಿಸಿ: ನ್ಯಾ. ಚಂದ್ರಚೂಡ್

ಈ ಹಿನ್ನೆಲೆಯಲ್ಲಿ, 2014ರ ಲೋಕಸಭೆ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಡಿದ ಭಾಷಣ ಕುರಿತಂತೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳಿಗೆ ಇತ್ತೀಚೆಗೆ ತಾನು ನೀಡಿದ್ದ ತಡೆ ಕುರಿತು ನ್ಯಾಯಾಲಯ ಕಕ್ಷಿದಾರರ ಗಮನ ಸೆಳೆಯಿತು.

"ಎರಡು ದಿನಗಳ ಹಿಂದೆ ನಾವು  ಅರವಿಂದ್ ಕೇಜ್ರಿವಾಲ್ ವಿರುದ್ಧದ ವಿಚಾರಣೆಗೆ ತಡೆ ನೀಡಿದ್ದೇವೆ. ಹೇಳುವ ಎಲ್ಲವೂ ದ್ವೇಷದ ಮಾತು ಅಥವಾ ಸೆಕ್ಷನ್‌ 153ರ ವ್ಯಾಪ್ತಿಗೆ ಬರುವುದಿಲ್ಲ. ನಾವು ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿತು.

ದ್ವೇಷ ಭಾಷಣದ ಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಫೆಬ್ರವರಿ 5ರಂದು ಮುಂಬೈನಲ್ಲಿ ನಡೆದ ಹಿಂದೂ ಜನಕ್ರೋಶ್ ಮೋರ್ಚಾ ಕುರಿತಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Kannada Bar & Bench
kannada.barandbench.com