ಜಾಮೀನಿಗಾಗಿ ವಿವಿಧ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಮನವಿ ಸಲ್ಲಿಕೆ ಪ್ರವೃತ್ತಿ: ಕಡಿವಾಣಕ್ಕೆ ಹೈಕೋರ್ಟ್‌ ನಿರ್ದೇಶನ

ನಿರೀಕ್ಷಣಾ ಜಾಮೀನು ಪಡೆಯಲು ನಾನಾ ನ್ಯಾಯಾಲಯಗಳಲ್ಲಿ ನಕಲಿ ವಿಳಾಸಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾದಹಳ್ಳಿಯ ನವರತ್ನ ಅಗ್ರಹಾರದ 40 ವರ್ಷದ ನಂಜಪ್ಪ ನೀಡಿದ್ದರು.
Karnataka High Court
Karnataka High Court

ಬಂಧನ ಭೀತಿಯಿಂದ ಪಾರಾಗಲು ಅಪರಾಧ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಏಕಕಾಲದಲ್ಲಿ ನಾನಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ನ್ಯಾಯಾಲಯಕ್ಕೆ ವಂಚಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಆಧುನಿಕ ತಂತ್ರಜ್ಞಾನದ ನೆರವಿನಿಂದ ಕಾರ್ಯತಂತ್ರ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ರಿಜಿಸ್ಟ್ರಿ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾದಹಳ್ಳಿಯ ನವರತ್ನ ಅಗ್ರಹಾರದ 40 ವರ್ಷದ ನಂಜಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಆರೋಪಿ ನಿರೀಕ್ಷಣಾ ಜಾಮೀನು ಪಡೆಯಲು ಹಲವು ನ್ಯಾಯಾಲಯಗಳಲ್ಲಿ ಮನವಿ ಸಲ್ಲಿಸಿರುವ ಮಾಹಿತಿ ಮುಚ್ಚಿಟ್ಟು ಮಾಡಿರುವ ವಂಚನೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ.

ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಂದ ನಿರೀಕ್ಷಣಾ ಅಥವಾ ನಿಯಮಿತ ಜಾಮೀನು ಪಡೆಯಲು ಮೋಸದ ತಂತ್ರಗಳನ್ನು ತಡೆಯಲು ತಂತ್ರಜ್ಞಾನ ಆಧಾರಿತ ಕಾರ್ಯವಿಧಾನ ಅಭಿವೃದ್ಧಿ ಸೇರಿದಂತೆ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ಆದೇಶಿಸಿದೆ.

ಒಂದೇ ಪ್ರಕರಣದಲ್ಲಿ ವಿವಿಧ ನ್ಯಾಯಾಲಯಗಳ ಮುಂದೆ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಲಾಗುತ್ತದೆಯೇ ಎಂಬುದನ್ನು ಪತ್ತೆ ಹಚ್ಚಲು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆಯಾಗುವ ಪ್ರತಿ ಅರ್ಜಿಯನ್ನು ಪರಿಶೀಲಿಸಲು ಪ್ರತಿ ನ್ಯಾಯಾಲಯದಲ್ಲಿ ಕಾರ್ಯವಿಧಾನ ಅಭಿವೃದ್ಧಿಪಡಿಸಬೇಕು ಎಂದು ನಿರ್ದೇಶನ ನೀಡಿದೆ.

ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ತನಿಖೆಗೆ ಹೊಸ ತನಿಖಾಕಾರಿಯನ್ನುನೇಮಕ ಮಾಡುವಂತೆ ನ್ಯಾಯಾಲಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

Also Read
[ಬಿಡಿಎ ಆಯುಕ್ತರ ನೇಮಕ] ಮೇಲ್ನೋಟಕ್ಕೆ ತಪ್ಪು ಕಂಡಾಗ ನಾವೇಕೆ ಸಮಯ ನೀಡಬೇಕು? ನಾವು ಕಣ್ಮುಚ್ಚಿ ಕೂರಲಾಗದು: ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಆರೋಪಿ 2021ರಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಭೂ ದಾಖಲೆಗಳನ್ನು ನಕಲಿ ಮಾಡಿ ವಂಚಿಸಿದ ಅಪರಾಧ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದರು.

ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನಂತರ ಈ ಹಿಂದೆ ಹೈಕೋರ್ಟ್‌ನ ಪ್ರಧಾನ ಪೀಠದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಅದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಕಲಿ ವಿಳಾಸವನ್ನು ನೀಡಿ ಮೈಸೂರು ಮತ್ತು ತುಮಕೂರಿನ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಅಂಶ ವಿಚಾರಣೆ ವೇಳೆ ಕಂಡುಬಂದಿತ್ತು.

Attachment
PDF
Nanjappa V. Chikkajala Police.pdf
Preview

Related Stories

No stories found.
Kannada Bar & Bench
kannada.barandbench.com