ಮೇಲ್ಜಾತಿಗಳಲ್ಲಿನ ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ. 10 ಮೀಸಲಾತಿ ಒದಗಿಸುವ ಸಂವಿಧಾನದ 103ನೇ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದು ನವೆಂಬರ್ 7ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರುಪರಿಶೀಲಿಸಬೇಕೆಂದು ರಾಜಕೀಯ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ [ಜನಹಿತ್ ಅಭಿಯಾನ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡುವುದರ ಜೊತೆಗೆ, ಇದು 133 ಕೋಟಿ ಭಾರತೀಯರ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ಪ್ರಕರಣವನ್ನು ಮುಕ್ತ ನ್ಯಾಯಾಲಯದ (ಸಾರ್ವಜನಿಕರು ಮತ್ತು ಮಾಧ್ಯಮಗಳು ವಿಚಾರಣೆಯ ವಿವರಗಳು ಲಭ್ಯವಾಗುವಂತೆ ನೋಡಿಕೊಳ್ಳುವುದಕ್ಕೆ ಮುಕ್ತ ನ್ಯಾಯಾಲಯ ಎನ್ನುತ್ತಾರೆ) ಮೂಲಕ ವಿಚಾರಣೆಯನ್ನು ನಡೆಸುವಂತೆ ಕೋರಿದೆ.
ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನವೆಂಬರ್ 7 ರಂದು ಇಡಬ್ಲ್ಯೂಎಸ್ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಈ ತೀರ್ಪು ನೀಡಿತ್ತು.
ಪ್ರಕರಣದಲ್ಲಿ ವಿರುದ್ಧ ತೀರ್ಪು ನೀಡಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾ. ರವೀಂದ್ರ ಭಟ್ ಆರ್ಥಿಕ ಆಧಾರದ ಮೇಲೆ ಮೀಸಲಾತಿಗೆ ಅನುಮತಿ ನೀಡಿದರೆ, ಇಡಬ್ಲ್ಯೂಎಸ್‌ನಿಂದ ಪರಿಶಿಷ್ಟ ಜಾತಿ/ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳನ್ನು ಹೊರಗಿಡುವುದು ಅವರ ವಿರುದ್ಧದ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದಿದ್ದರು.
ಡಿಎಂಕೆ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲಿ, “ಸಾಂವಿಧಾನಿಕ ಪೀಠದ ತೀರ್ಪಿನಲ್ಲಿ ಇಂದ್ರ ಸಾಹ್ನಿ ಪ್ರಕರಣದಲ್ಲಿ ವಿಸ್ತೃತ ಪೀಠ ರೂಪಿಸಿರುವ ಕಾನೂನನ್ನು ಸುಪ್ರೀಂ ಕೋರ್ಟ್ ಪರಿಗಣಿಸಿಲ್ಲ. ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ದುರ್ಬಲ ವರ್ಗಗಳಾಗಿರುವ ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಮೀಸಲಾತಿ ನೀಡದೇ ಇರುವುದಕ್ಕಾಗಿ ʼಆರ್ಥಿಕವಾಗಿʼ ಎಂಬ ಪದವನ್ನು ʼದುರ್ಬಲ ವರ್ಗಗಳುʼ ಎಂಬ ಪದವಿಲ್ಲದೆ ಓದುವಂತಿಲ್ಲ (ಇದು ಸಂವಿಧಾನದ 46ನೇ ವಿಧಿಯೊಂದಿಗೆ ಸಂಘರ್ಷದಲ್ಲಿದೆ). ದೋಷಪೂರಿತವಾಗಿರುವ ಸಾಂವಿಧಾನಿಕ ತಿದ್ದುಪಡಿ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಾತ್ರಕ್ಕೆ ಮೇಲ್ಜಾತಿಗಳನ್ನು ಹೇಗೆ ದುರ್ಬಲ ವರ್ಗ ಎಂದು ಕರೆಯಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿಲ್ಲ ಎಂದು ಆಕ್ಷೇಪಿಸಲಾಗಿದೆ.
ಅಲ್ಲದೆ, ಮೀಸಲಾತಿ ರದ್ದುಗೊಳಿಸುವುದರಿಂದ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುತ್ತದೆ ಮತ್ತು ಸಮಾನತೆಯ ಸಮಾಜಕ್ಕೆ ದಾರಿಯಾಗುತ್ತದೆ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯ ಎದ್ದು ಕಾಣುವಂತಹ ತಪ್ಪು ಎಸಗಿದೆ ಎಂದು ಅರ್ಜಿ ಹೇಳಿದೆ.
ವಕೀಲರಾದ ರಿಚರ್ಡ್‌ಸನ್ ವಿಲ್ಸನ್ ಮತ್ತು ಅಪೂರ್ವ್ ಮಲ್ಹೋತ್ರಾ ಅವರು ಸಿದ್ಧ ಮನವಿಯನ್ನು ಹಿರಿಯ ವಕೀಲ ಪಿ ವಿಲ್ಸನ್ ಅವರು ಪರಿಶೀಲಿಸಿದ್ದು, ಇದನ್ನು ವಕೀಲ ಆರ್ ನೆಡುಮಾರನ್ ಅವರ ಮೂಲಕ ಸಲ್ಲಿಸಲಾಗಿದೆ.