ವೈವಾಹಿಕ ಪ್ರಕರಣಗಳಲ್ಲಿ ಏಕಪಕ್ಷೀಯ ಆದೇಶ ನ್ಯಾಯಸಮ್ಮತವಲ್ಲ: ಕಲ್ಕತ್ತಾ ಹೈಕೋರ್ಟ್

ವೈವಾಹಿಕ ಮೊಕದ್ದಮೆಯಲ್ಲಿ ಏಕಪಕ್ಷೀಯವಾಗಿ ಮತ್ತು ವಿಚ್ಛೇದಿತ ಪತ್ನಿ ಪರ ಹೊರಡಿಸಿದ ಕನಿಷ್ಠ ನಾಲ್ಕು ಆದೇಶಗಳನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾ. ಶಂಪಾ ಸರ್ಕಾರ್ ಈ ವಿಚಾರ ತಿಳಿಸಿದರು.
Justice Shampa Sarkar and Calcutta High Court
Justice Shampa Sarkar and Calcutta High Court

ನ್ಯಾಯಾಲಯಗಳು ವೈವಾಹಿಕ ಮೊಕದ್ದಮೆಗಳಲ್ಲಿ ಏಕಪಕ್ಷೀಯ ಆದೇಶ ಹೊರಡಿಸುವುದು (ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಳ ವಿಚಾರಣೆಯಿಲ್ಲದೆ ಹೊರಡಿಸಿದ ಆದೇಶಗಳು) ನ್ಯಾಯಸಮ್ಮತವಲ್ಲ ಏಕೆಂದರೆ ಅಂತಹ ಆದೇಶ ಸಾಮಾಜಿಕ- ಆರ್ಥಿಕ ಭಾವನಾತ್ಮಕ ಪರಿಣಾಮ ಬೀರುತ್ತವೆ ಎಂದು ಕಲ್ಕತ್ತಾ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಸೂರ್ಯ ಚಂದ್ರ ಮಿಶ್ರ ವಿರುದ್ಧ ಚಿತ್ರಾಂಗನಾ ದೇಬನಾಥ್ ನಡುವಣ ಪ್ರಕರಣ].

ವೈವಾಹಿಕ ಮೊಕದ್ದಮೆಯಲ್ಲಿ ಲಿಖಿತ ಹೇಳಿಕೆಗಳನ್ನು ಸಲ್ಲಿಸಲು ತನ್ನ ಹೆಂಡತಿಗೆ ಸಮಯಾವಕಾಶ ವಿಸ್ತರಿಸಿ ಈ ವರ್ಷ ಕನಿಷ್ಠ ನಾಲ್ಕು ಆದೇಶಗಳನ್ನು ಹೊರಡಿಸಲಾಗಿದೆ ಎಂದು ಪತಿ ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ತಮಗೆ ತಿಳಿಸದೆಯೇ ಏಕಪಕ್ಷೀಯವಾಗಿ ನಾಲ್ಕು ಆದೇಶಗಳನ್ನು ಹೊರಡಿಸಿದೆ ಎಂಬ ಪತಿಯ ಅಹವಾಲನ್ನು ಆಲಿಸಿದ ಹೈಕೋರ್ಟ್‌ ನ್ಯಾಯಾಲಯಗಳ ಈ ಬಗೆಯ ಅಭ್ಯಾಸವನ್ನು ಟೀಕಿಸಿತು.

"ವೈವಾಹಿಕ ಮೊಕದ್ದಮೆಯಲ್ಲಿನ ಏಕಪಕ್ಷೀಯ ಆದೇಶ ನ್ಯಾಯಯುತವಾಗಿರುವುದಿಲ್ಲ. ಅಂತಹ ನಿರ್ಧಾರ ಸಾಮಾಜಿಕ ಪರಿಣಾಮ ಮಾತ್ರವೇ ಅಲ್ಲದೆ ಆರ್ಥಿಕ ಮತ್ತು ಬಲವಾದ ಭಾವನಾತ್ಮಕ ಪರಿಣಾಮವನ್ನು ಹೊಂದಿರುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸಮಯ ವಿಸ್ತರಣೆ ಕೋರಿ ಪತ್ನಿ ಯಾವುದೇ ಔಪಚಾರಿಕ ಅರ್ಜಿಯನ್ನು ಸಲ್ಲಿಸದಿದ್ದರೂ ಈ ಆದೇಶಗಳನ್ನು ರವಾನಿಸಲಾಗಿದೆ ಎಂದು ಪತಿ ಹೇಳಿಕೊಂಡಿದ್ದರು. ಔಪಚಾರಿಕ ಅರ್ಜಿ ಇಲ್ಲದಿದ್ದರೆ ಅಂತಹ ಆದೇಶಗಳನ್ನು ರವಾನಿಸಲಾಗುವುದಿಲ್ಲ ಎಂದು ಅವರು ವಾದಿಸಿದರು.

ಆದರೆ, ನ್ಯಾಯಾಲಯ ಈ ಅಂಶವನ್ನು ಒಪ್ಪಲಿಲ್ಲ. "ಅರ್ಜಿದಾರರ ವಾದ ತಾಂತ್ರಿಕವಾಗಿದೆ. ಕಾರ್ಯವಿಧಾನದ ನಿಯಮಗಳು ನ್ಯಾಯದ ಒಡನಾಡಿಯಾಗಿವೆ. ಅವುಗಳನ್ನು ಕತ್ತಿಯಾಗಿ ಬಳಸದೆ ಗುರಾಣಿಯಾಗಿ ಬಳಸಬೇಕು. ಹೀಗಾಗಿ, ಲಿಖಿತ ಹೇಳಿಕೆಯನ್ನು ಸಲ್ಲಿಸಲು ಸಮಯ ವಿಸ್ತರಣೆಗೆ ಯಾವುದೇ ಔಪಚಾರಿಕ ಅರ್ಜಿ ಇಲ್ಲದಿದ್ದರೂ ಸಹ , ನ್ಯಾಯಾಲಯ ವಿವೇಚನಾಧಿಕಾರ ಚಲಾಯಿಸಿ ಲಿಖಿತ ಹೇಳಿಕೆಯನ್ನು ಸಲ್ಲಿಸಲು ಪ್ರತಿವಾದಿಗೆ ಅನುಮತಿಸಿದೆ” ಎಂದು ಸಮರ್ಥಿಸಿಕೊಂಡಿತು.

ಎರಡೂ ಪಕ್ಷಕಾರರು ದಾವೆಯಲ್ಲಿ ತೊಡಗಲು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರೆ ನ್ಯಾಯ ದೊರೆಯಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಂತಿಮವಾಗಿ, ಕೌಟುಂಬಿಕ ನ್ಯಾಯಾಲಯದ ಮಧ್ಯಂತರ ಆದೇಶಗಳನ್ನು ತಳ್ಳಿಹಾಕಲು ನಿರಾಕರಿಸಿದ ಹೈಕೋರ್ಟ್ ಒಂದು ವರ್ಷದೊಳಗೆ ಪ್ರಕರಣವನ್ನು ವಿಲೇವಾರಿ ಮಾಡುವಂತೆ ಸೂಚಿಸಿತು.

Kannada Bar & Bench
kannada.barandbench.com