ಕುರುವೈ ಬೆಳೆಗಾಗಿ ತಮಿಳುನಾಡಿನಿಂದ ದುಪ್ಪಟ್ಟು ಪ್ರಮಾಣದ ನೀರು ಬಳಕೆ: ಕರ್ನಾಟಕ ಸರ್ಕಾರದಿಂದ ಸುಪ್ರೀಂಗೆ ಮಾಹಿತಿ

ನೈರುತ್ಯ ಮುಂಗಾರು ವೈಫಲ್ಯದಿಂದಾಗಿ ಸಂಕಷ್ಟದ ಸ್ಥಿತಿ ಉಂಟಾಗಿದ್ದು ತುರ್ತಾಗಿ ನೀರು ಹರಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಅದು ಹೇಳಿದೆ.
ಕುರುವೈ ಬೆಳೆಗಾಗಿ ತಮಿಳುನಾಡಿನಿಂದ ದುಪ್ಪಟ್ಟು ಪ್ರಮಾಣದ ನೀರು ಬಳಕೆ: ಕರ್ನಾಟಕ ಸರ್ಕಾರದಿಂದ ಸುಪ್ರೀಂಗೆ ಮಾಹಿತಿ
A1

ತಮಿಳುನಾಡು ಸರ್ಕಾರವು ಕುರುವೈ ಬೆಳೆಗೆ ದುಪ್ಪಟ್ಟು ನೀರು ಬಳಸುವ ಮೂಲಕ ಕಾವೇರಿ ನೀರು ಸಂಗ್ರಹ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆರೋಪಿಸಿದೆ.

ನಿತ್ಯ 24,000 ಕ್ಯೂಸೆಕ್ಸ್ ಕಾವೇರಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮನವಿಗೆ ಕರ್ನಾಟಕವು ಪ್ರತಿಕ್ರಿಯಿಸಿದ್ದು ತನ್ನ ಪ್ರತಿ ಪ್ರಮಾಣಪತ್ರದಲ್ಲಿ (ಕೌಂಟರ್‌ ಅಫಿಡವಿಟ್‌) ಗಂಭೀರ ವಾದ ಮಂಡಿಸಿದೆ.

ಕಾವೇರಿ ನೀರು ಸಂಗ್ರಹ ವ್ಯವಸ್ಥೆಯನ್ನು ತಮಿಳುನಾಡು ಸರ್ಕಾರ ದುರುಪಯೋಗಪಡಿಸಿಕೊಂಡಿದ್ದು 69.777 ಟಿಎಂಸಿ ಜಲವನ್ನು ಮಿತಿ ಮೀರಿ ಪಡೆದುಕೊಂಡಿದೆ ಎಂದು ಅದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.

ನೈರುತ್ಯ ಮುಂಗಾರು ವೈಫಲ್ಯದಿಂದಾಗಿ ಸಂಕಷ್ಟದ ಸ್ಥಿತಿ ಉಂಟಾಗಿದ್ದು ತುರ್ತಾಗಿ ನೀರು ಹರಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಅದು ಹೇಳಿದೆ.

ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರು ಸುಪ್ರೀಂ ಕೋರ್ಟ್‌ಗೆ ಬುಧವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪಿ ಎಸ್‌ ನರಸಿಂಹ ಹಾಗೂ ಪ್ರಶಾಂತ್‌ ಕುಮಾರ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವೊಂದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕೆಲ ದಿನಗಳ ಹಿಂದೆ ರಚಿಸಿದ್ದರು. ಪ್ರಕರಣದ ವಿಚಾರಣೆ ಇಂದು (25 ಆಗಸ್ಟ್‌ 2023) ನಡೆಯಲಿದೆ. ನಿತ್ಯ 24,000 ಘನ ಅಡಿ ನೀರನ್ನು (ಟಿಎಂಸಿ) ತ್ವರಿತವಾಗಿ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲು ಮಧ್ಯಪ್ರವೇಶಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟನ್ನು ಕೋರಿತ್ತು.

ಕರ್ನಾಟಕ ಸಲ್ಲಿಸಿರುವ ಪ್ರಮಾಣಪತ್ರದ ಪ್ರಮುಖಾಂಶಗಳು

 • ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಸಲ್ಲಿಸುವಂತಹ ತುರ್ತು ಸನ್ನಿವೇಶ ನಿರ್ಮಾಣವಾಗಿಲ್ಲ.

 • ಕರ್ನಾಟಕ ಮೆಟ್ಟೂರು ಜಲಾಶಯಕ್ಕೆ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್‌ ನೀರು ಹರಿಸುತ್ತಿದೆ. ಜೊತೆಗೆ ತಮಿಳುನಾಡಿನಲ್ಲಿ ಸಾಕಷ್ಟು ಪ್ರಮಾಣದ ನೀರಿದೆ. ಹಾಗಾಗಿ ತುರ್ತು ಸ್ಥಿತಿ ನಿರ್ಮಾಣವಾಗಿಲ್ಲ.

 • ಸಂಪೂರ್ಣ ತಪ್ಪು ಗ್ರಹಿಕೆಯ ಆಧಾರದಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿದೆ.

 • ಪ್ರಸಕ್ತ ವರ್ಷ ಮಳೆಯ ಪ್ರಮಾಣ ಶೇ.25ರಷ್ಟು ಕಡಿಮೆಯಾಗಿದೆ. ಈ ವರ್ಷ ಸಂಕಷ್ಟ ವರ್ಷವಾಗಿದ್ದರೂ ತಮಿಳುನಾಡು ಸಹಜವರ್ಷದಂತೆ ನೀರು ಹರಿಸಲು ಒತ್ತಡ ಹೇರುತ್ತಿದೆ.

 • ಸಾಮಾನ್ಯ ವರ್ಷದಂತೆಯೇ ಸೆಪ್ಟೆಂಬರ್‌ ತಿಂಗಳಲ್ಲಿ 36.76 ಟಿಎಂಸಿ ನೀರು ಹರಿಸಲು ತಮಿಳುನಾಡು ಕೋರಿರುವುದು ಸಮ್ಮತವಲ್ಲ. ಸಂಕಷ್ಟ ವರ್ಷದಲ್ಲಿ ಇದು ಅನ್ವಯವಾಗದು.

 • ಕುರುವೈ ಬೆಳೆಗೆ ಕಾವೇರಿ ಜಲವಿವಾದ ನ್ಯಾಯಮಂಡಳಿ ಹಂಚಿಕೆ ಮಾಡಿದ್ದ ನೀರಿಗಿಂತ ದುಪ್ಪಟ್ಟು ನೀರು ಬಳಕೆ ಮಾಡಲಾಗಿದೆ.

 • ಕುರುವೈ ಭತ್ತದ ಬೆಳೆಗೆ ಬೇಕಿರುವುದು 32.27 ಟಿಎಂಸಿ ಅಡಿ ನೀರು ಎಂದು ನ್ಯಾಯಮಂಡಳಿ ನಿಗದಿ ಮಾಡಿದೆ. ಇದರ ಅನ್ವಯ ಇದಕ್ಕಾಗಿ ಈವರೆಗೆ 22.44 ಟಿಎಂಸಿ ಅಡಿ ನೀರು ಬಳಕೆ ಸಾಕಿರುತ್ತದೆ. ಉಳಿದ 9.83 ಅಡಿ ನೀರನ್ನು ತಮಿಳುನಾಡು ಸೆಪ್ಟೆಂಬರ್‌ನಲ್ಲಿ ಬಳಸಬೇಕಿತ್ತು. ಆದರೆ ತಮಿಳುನಾಡು ಸರ್ಕಾರ ಬೆಳೆ ಬೆಳೆಯಲು ಹೆಚ್ಚುವರಿಯಾಗಿ 69.777 ಟಿಎಂಸಿ ಅಡಿ ನೀರನ್ನು ಬಳಸಿಕೊಂಡಿದೆ.

 • ನೈರುತ್ಯ ಮುಂಗಾರು ವಿಫಲವಾಗಿರುವುದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದ್ದು ಸಾಮಾನ್ಯ ವರ್ಷಗಳಲ್ಲಿ ನೀರು ಹರಿಸುವ ಮಾನದಂಡದಂತೆ ಈ ವರ್ಷ ನೀರು ಹರಿಸಲು ಆಗದು.

 • ಇದು ಸಂಕಷ್ಟದ ವರ್ಷವಾಗಿರುವುದರಿಂದ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಒತ್ತಡ ಹೇರುವುದು ಸೂಕ್ತವಲ್ಲ.

 • ಕರ್ನಾಟಕ ಸರ್ಕಾರ ಇದುವರೆಗೆ ಬಳಸಿಕೊಂಡಿರುವ ನೀರಿನ ಪ್ರಮಾಣ 7.2 ಟಿಎಂಸಿ ಅಡಿ ಮಾತ್ರ. ಕೃಷಿ ಭೂಮಿಗೆ, ಬೆಂಗಳೂರು ಸೇರಿದಂತೆ ನಗರಗಳಿಗೆ ನೀರು ಹರಿಸಬೇಕಿದೆ. ಮುಂಗಾರು ಕೊರತೆಯಿಂದಾಗಿ ಜಲಾಶಯಗಳು ತುಂಬಿರದೇ ಇರುವುದರಿಂದ ರಾಜ್ಯ ಸಂಕಷ್ಟ ಎದುರಿಸುತ್ತಿದೆ.

 • ಮಳೆ ಕೊರತೆಯಿಂದಾಗಿ ಕರ್ನಾಟಕದ ಅಣೆಕಟ್ಟುಗಳ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ತಗ್ಗಿದೆ.

 • ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ನಿರ್ದೇಶನಗಳನ್ನು ಕರ್ನಾಟಕ ಪಾಲಿಸಿದೆ.

Related Stories

No stories found.
Kannada Bar & Bench
kannada.barandbench.com