ಅಬಕಾರಿ ನೀತಿ: ಅಧಿವೇಶನದ ಕಾರಣ ನೀಡಿ ವರ್ಚುವಲ್‌ ವಿಧಾನದಿ ಹಾಜರಾದ ಕೇಜ್ರಿವಾಲ್‌; ಪ್ರಕರಣ ಮುಂದೂಡಿದ ದೆಹಲಿ ಕೋರ್ಟ್‌

ವೀಡಿಯೊ ಕಾನ್ಫರೆನ್ಸ್‌ ಮೂಲಕ ಇಂದು ವಿಚಾರಣೆಗೆ ಹಾಜರಾದ ಕೇಜ್ರಿವಾಲ್‌ ಅವರು ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಮುಗಿದ ನಂತರ ಮಾರ್ಚ್‌ನಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಾಗಿ ಭರವಸೆ ನೀಡಿದರು.
ಇ ಡಿ ಮತ್ತು ಅರವಿಂದ್ ಕೇಜ್ರಿವಾಲ್
ಇ ಡಿ ಮತ್ತು ಅರವಿಂದ್ ಕೇಜ್ರಿವಾಲ್Facebook
Published on

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ಪಾಲಿಸದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 16ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ನಗರದ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸ್‌ ಮೂಲಕ ಇಂದು ವಿಚಾರಣೆಗೆ ಹಾಜರಾದ ಕೇಜ್ರಿವಾಲ್‌ ಅವರು ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಮುಗಿದ ನಂತರ ಮಾರ್ಚ್‌ನಲ್ಲಿ ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗುವುದಾಗಿ ಭರವಸೆ ನೀಡಿದರು.

ಬಜೆಟ್ ಅಧಿವೇಶನ ನಡೆಯುತ್ತಿರುವ ಕಾರಣ ಇಂದು ಭೌತಿಕವಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ಇಂದೇ ವಿಶ್ವಾಸಮತ ಯಾಚನೆ ನಿಗದಿಯಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಪ್ರಕರಣವನ್ನು ಮಾರ್ಚ್ 16ಕ್ಕೆ ಮುಂದೂಡಿದರು.

ಕೇಜ್ರಿವಾಲ್ ಅವರಿಗೆ ಫೆಬ್ರವರಿ 7 ರಂದು ಸಮನ್ಸ್‌ ಜಾರಿಗೊಳಿಸಿದ್ದ ನ್ಯಾಯಾಲಯ ಜಾರಿ ನಿರ್ದೇಶನಾಲಯ ಈ ಹಿಂದೆ ನೀಡಿದ್ದ ಸಮನ್ಸ್‌ ಪಾಲಿಸುವುದು ಕಾನೂನು ಪ್ರಕಾರ ಮುಖ್ಯಮಂತ್ರಿಯವರ ಬದ್ಧತೆಯಾಗಿತ್ತು ಎಂದು ಅಭಿಪ್ರಾಯಪಟ್ಟಿತ್ತು. ಇಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆ ಸಂದರ್ಭದಲ್ಲಿ ಅದು ಸೂಚಿಸಿತ್ತು.

ಕೇಜ್ರಿವಾಲ್ ಅವರಿಗೆ ವಿವಿಧ ದಿನಾಂಕಗಳಲ್ಲಿ ಐದು ಸಮನ್ಸ್‌ ನೀಡಿದ್ದರೂ ಜಾರಿ ನಿರ್ದೇಶನಾಲಯದ ಎದುರು ಹಾಜರಾಗದ ಕಾರಣ ಇ ಡಿ ಅವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿತ್ತು.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ ಸಿಬಿಐ ಆಗಸ್ಟ್ 17, 2022ರಂದು ಪ್ರಕರಣ ದಾಖಲಿಸಿತ್ತು. ಬಳಿಕ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆಯಾದ ಆಯಾಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು. ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೂಡ ಹಗರಣದಲ್ಲಿ ಆರೋಪಿಗಳಾಗಿದ್ದಾರೆ.

ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಲ್ಲಿ ಏಕಸ್ವಾಮ್ಯ ಮತ್ತು ಸಂಯೋಜನೆ ಉದ್ದೇಶಗಳನ್ನು ಸಾಧಿಸಲು ದಕ್ಷಿಣ ಭಾರತದ ಮದ್ಯ ವ್ಯವಹಾರದಲ್ಲಿ ಕೆಲ ವ್ಯಕ್ತಿಗಳು ಎಎಪಿಯ ಕೆಲ ನಾಯಕರಿಗೆ ಹವಾಲಾ ಮಾರ್ಗಗಳ ಮೂಲಕ ಕಿಕ್‌ಬ್ಯಾಕ್‌ ನೀಡಿದ್ದಾರೆ ಎಂದು ಸಿಬಿಐ ಮತ್ತು ಇ ಡಿ ಆರೋಪಿಸಿದ್ದವು.

Kannada Bar & Bench
kannada.barandbench.com