ಅಬಕಾರಿ ನೀತಿ ಹಗರಣ: ದೆಹಲಿ ಮಾಜಿ ಸಿಎಂ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಸಿಸೋಡಿಯಾ ಪ್ರಬಲ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದ ನ್ಯಾಯಾಲಯ.
Manish Sisodia, Delhi HC
Manish Sisodia, Delhi HC

ದೆಹಲಿ ಅಬಕಾರಿ ನೀತಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಹೂಡಿದ್ದ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮತ್ತು ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ.

ಸಿಸೋಡಿಯಾ ಪ್ರಬಲ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ತೀರ್ಪು ನೀಡಿದ್ದಾರೆ.

ಆರೋಪಗಳು ಸ್ವರೂಪದಲ್ಲಿ ಬಹಳ ಗಂಭೀರವಾಗಿವೆ. ಆರೋಪಿ ಸಾರ್ವಜನಿಕ ಸೇವಕರಾಗಿದ್ದಾರೆ. ನ್ಯಾಯಾಲಯವು ಅಬಕಾರಿ ನೀತಿ ಅಥವಾ ಸರ್ಕಾರದ ಅಧಿಕಾರವನ್ನು ಪರಿಶೀಲಿಸಿಲ್ಲ. ಬದಲಿಗೆ ಅರ್ಜಿದಾರರು ಪ್ರಬಲ ವ್ಯಕ್ತಿಯಾಗಿರುವುದರಿಂದ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಆಧಾರದಲ್ಲಿ ಜಾಮೀನು ನಿರಾಕರಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿತು.

ದೆಹಲಿಯ ವಿಚಾರಣಾ ನ್ಯಾಯಾಲಯವು ಮಾರ್ಚ್ 31ರಂದು ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯಲ್ಲಿ ಮಾಜಿ ಅಬಕಾರಿ ಸಚಿವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದಾಗಿ ಸಿಬಿಐ ವಿಶೇಷ ನ್ಯಾಯಾಧೀಶ ಎಂಕೆ ನಾಗಪಾಲ್‌ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಿಸೋಡಿಯಾ ಅವರ ಪರವಾಗಿ ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ನಂತರ, ಮಾರ್ಚ್ 9ರಂದು ಜಾರಿ ನಿರ್ದೇಶನಾಲಯ ಕೂಡ ಅವರನ್ನು ಬಂಧಿಸಿತು.

Kannada Bar & Bench
kannada.barandbench.com