ಇಡಬ್ಲ್ಯೂಎಸ್ ಮೀಸಲಾತಿಯಿಂದ ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗ ಹೊರಗಿಟ್ಟರೆ ಹೊಸದಾಗಿ ಅನ್ಯಾಯ ಮಾಡಿದಂತೆ: ನ್ಯಾ. ಭಟ್

ತಿದ್ದುಪಡಿಯು ಸಾಮಾಜಿಕ ಮತ್ತು ಹಿಂದುಳಿದ ವರ್ಗದ ಸವಲತ್ತು ಪಡೆದವರು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ನಂಬುವಂತಹ ಭ್ರಮೆ ಹುಟ್ಟಿಸುತ್ತದೆ ಎಂದ ನ್ಯಾಯಮೂರ್ತಿಗಳು.
CJI UU Lalit and Justice S Ravindra Bhat
CJI UU Lalit and Justice S Ravindra Bhat

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ಹಾಗೂ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಮೀಸಲಾತಿಯಿಂದ ಹೊರಗಿಡುವುದರಿಂದಾಗಿ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯು  ಅಸಾಂವಿಧಾನಿಕ ಎಂದು ತಮ್ಮ ಅಸಮ್ಮತಿಯ ತೀರ್ಪಿನಲ್ಲಿ ನ್ಯಾ. ಎಸ್‌ ರವೀಂದ್ರ ಭಟ್‌ ತಿಳಿಸಿದ್ದಾರೆ.

ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿಯುವ ತೀರ್ಪನ್ನು ನಿನ್ನೆ 3:2 ಬಹುಮತದಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (CJI) ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ನೀಡಿತು. ಇದರಲ್ಲಿ ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ಸಿಜೆಐ ಲಲಿತ್ ಅವರು ಮಿಸಲಾತಿಯ ಕಾರಣಕ್ಕಾಗಿ ಮಾಡಲಾಗಿರುವ ತಿದ್ದುಪಡಿ ಅಸಾಂವಿಧಾನಿಕ ಎಂದು ಅಸಮ್ಮತಿಯ ತೀರ್ಪು ನೀಡಿದರು.

Also Read
ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ ಕೋರ್ಟ್: ಸಿಜೆಐ ಲಲಿತ್‌, ನ್ಯಾ. ಭಟ್‌ ವ್ಯತಿರಿಕ್ತ ತೀರ್ಪು

ಅಸಮ್ಮತಿಯ ತೀರ್ಪಿನ ಪ್ರಮುಖಾಂಶಗಳು

  • ಸಾಂವಿಧಾನಿಕವಾಗಿ ಗುರುತಿಸಲಾದ ಹಿಂದುಳಿದ ವರ್ಗ ಅದರಲ್ಲಿಯೂ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನುಇಡಿಯಾಗಿ ಮತ್ತು ಸಂಪೂರ್ಣವಾಗಿ ಹೊರಗಿಡುವುದು ಸಮಾನತೆಯ ಸಂಹಿತೆಯನ್ನು ದುರ್ಬಲಗೊಳಿಸುವ ತಾರತಮ್ಯವಲ್ಲದೆ ಬೇರೇನೂ ಅಲ್ಲ.

  • ಎಸ್‌ಸಿ/ಎಸ್‌ಟಿ, ಒಬಿಸಿ ವರ್ಗಗಳು ಈಗಾಗಲೇ ಮೀಸಲಾತಿಯನ್ನು ಅನುಭವಿಸುತ್ತಿವೆ ಎಂಬ ಆಧಾರದಲ್ಲಿ ಆ ಸಮುದಾಯಗಳನ್ನು ಇಡಬ್ಲ್ಯೂಎಸ್‌ ಮೀಸಲಾತಿಯಿಂದ ಹೊರಗಿಡುವುದು ಹೊಸದಾಗಿ ಅನ್ಯಾಯ ಮಾಡಿದಂತೆ.

  • ಸಮಾಜದ ಅತಿ ಬಡ ವರ್ಗಕ್ಕೆ ಸೇರಿದ ಹಾಗೂ ಸಾಮಾಜಿಕವಾಗಿ ಪ್ರಶ್ನಾರ್ಹವಾದ ಮತ್ತು ಕಾನೂನುಬಾಹಿರ ಕ್ರಮಗಳಿಗೆ ತುತ್ತಾದವರನ್ನು ತಿದ್ದುಪಡಿಯಲ್ಲಿನ ಹೊರಗಿಡುವಿಕೆಯ ತತ್ವ ಪ್ರತ್ಯೇಕಿಸುತ್ತದೆ.

  • ಹೊಸ ಮೀಸಲಾತಿಯ ಸಲುವಾಗಿ ನಡೆದ ಈ ಹೊರಗಿಡುವಿಕೆಯು ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಮತ್ತು ಜಾತಿಗಳಿಗೆ ನಿಗದಿಪಡಿಸಿದ ಮೀಸಲಾತಿ ಸೌಲಭ್ಯಕ್ಕೆ ಅವರನ್ನು ಸೀಮಿತಗೊಳಿಸುವ ಕೆಲಸ ಮಾಡುತ್ತಿದೆ.

  • (ಹಿಂದಿನ ತಾರತಮ್ಯದ ಆಧಾರದ ಮೇಲೆ- ಸಾಮಾಜಿಕ ತಾರತಮ್ಯ) ಮೀಸಲು ಕೋಟಾ ಪಡೆಯುತ್ತಿದ್ದವರು ಅದರ ಬದಲಿಗೆ ಆರ್ಥಿಕವಾಗಿ ಹಿಂದುಳಿದ ಆಧಾರದ ಮೇಲೆ ಮೀಸಲಾತಿ ಪಡೆಯುವ ಚಲನಶೀಲತೆಯನ್ನು ತಿದ್ದುಪಡಿ ನಿರಾಕರಿಸುತ್ತದೆ.

  • ಜಾತಿ ಅಥವಾ ವರ್ಗವನ್ನು ಲೆಕ್ಕಿಸದೆ ಎಲ್ಲಾ ಬಡವರು ಮೀಸಲಾತಿಗೆ ಅರ್ಹರು ಎಂದು ಪರಿಗಣಿಸುವ ಬದಲು ಕೇವಲ ಮುಂದುವರಿದ ವರ್ಗ ಅಥವಾ ಜಾತಿಗಳಿಗೆ ಸೇರಿದವರನ್ನು ಮಾತ್ರ ಪರಿಗಣಿಸುವ ಸಂಪೂರ್ಣ ಬಹಿಷ್ಕಾರ ತತ್ವದ ನಿವ್ವಳ ಪರಿಣಾಮ ವಿನಾಶಕಾರಿಯಾಗಿದೆ. ಇದರಿಂದ ಸಾಮಾಜಿಕವಾಗಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರು ಅನರ್ಹರಾಗುತ್ತಾರೆ

  • ಸಿನ್ಹೋ ಆಯೋಗದ ವರದಿಯ ಪ್ರಕಾರ ಎಸ್‌ಸಿ/ ಎಸ್‌ಟಿ ಸಮದಾಯಕ್ಕೆ ಸೇರಿದವರು ಇನ್ನೂ ಬಡತನದ ರೇಖೆಗಿಂತ ಕೆಳಗಿದ್ದಾರೆ.

  • ಇಂದ್ರಾ ಸಾಹ್ನಿ ಪ್ರಕರಣದಲ್ಲಿ ನಿಗದಿಪಡಿಸಿದ ಶೇ 50ರಷ್ಟು ಮೀಸಲಾತಿ ಗಡಿಯ ಉಲ್ಲಂಘನೆಗೆ ಅನುಮತಿಸುವುದು ಮತ್ತಷ್ಟು ಉಲ್ಲಂಘನೆಗಳಿಗೆ ಕಾರಣವಾಗುತ್ತದೆ. ಇದು ವಾಸ್ತವವಾಗಿ ವಿಭಾಗೀಕರಣಕ್ಕೆ ಎಡೆ ಮಾಡಿಕೊಡುತ್ತದೆ.

  • ಹೀಗಾಗಿ ತಿದ್ದುಪಡಿ ಮತ್ತು ಅದು ಸೃಷ್ಟಿಸಿದ ವರ್ಗೀಕರಣ ಮನಸೋಇಚ್ಛೆಯಿಂದ ಕೂಡಿದ್ದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಮತ್ತು ಜಾತಿ ತಾರತಮ್ಯಕ್ಕೆ ಒಳಪಟ್ಟಿರುವ ಸಮಾಜದ ಬಡ ವರ್ಗಗಳ ಮೇಲೆ ಪ್ರತಿಕೂಲವಾದ ತರತಮ  ಧೋರಣೆಗೆ ಕಾರಣವಾಗುತ್ತದೆ.

  • ಈ ಕಾರಣಗಳಿಗಾಗಿ, ಸಂವಿಧಾನದ 15 ಮತ್ತು 16ನೇ ವಿಧಿಗಳಲ್ಲಿ ಆರನೇ ಪರಿಚ್ಛೇದವನ್ನು ಸೇರಿಸಿರುವ ಸಂವಿಧಾನ (ನೂರಾ ಮೂರನೆ ತಿದ್ದುಪಡಿ) ಕಾಯಿದೆ- 2019ರ 2 ಮತ್ತು 3ನೇ ಕಲಮುಗಳು ಸಂವಿಧಾನದ ಮೂಲರಚನೆಯನ್ನು ಉಲ್ಲಂಘಿಸುವುದರಿಂದ ಅವು ಅಸಾಂವಿಧಾನಿಕ ಮತ್ತು ಅನೂರ್ಜಿತವಾಗಿವೆ.

[ಅಸಮ್ಮತಿಯ ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
JANHIT_ABHIYAN_v__UNION_OF_INDIA.pdf
Preview

Related Stories

No stories found.
Kannada Bar & Bench
kannada.barandbench.com