ಖಾತೆ ಮಟ್ಟದಲ್ಲೇ ನಿರ್ಬಂಧ ಹೇರುವುದು ಬಳಕೆದಾರರ ಹಕ್ಕಿನ ಉಲ್ಲಂಘನೆಯಾಗುತ್ತದೆ: ಕರ್ನಾಟಕ ಹೈಕೋರ್ಟ್‌ಗೆ ಟ್ವಿಟರ್

ಫೆಬ್ರವರಿ 2021 ಮತ್ತು ಫೆಬ್ರವರಿ 2022ರ ನಡುವೆ ಕೇಂದ್ರ ನೀಡಿರುವ ಹತ್ತು ಆದೇಶಗಳಲ್ಲಿ ಸಾರ್ವಜನಿಕರು ಕೆಲವು ಮಾಹಿತಿ ನೋಡದಂತೆ ಮತ್ತು ಹಲವು ಖಾತೆಗಳನ್ನು ಅಮಾನತುಗೊಳಿಸುವಂತೆ ಟ್ವಿಟರ್‌ಗೆ ಸೂಚಿಸಲಾಗಿದೆ.
Twitter / Karnataka High Court
Twitter / Karnataka High Court

ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧಕ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯ ಪ್ರತಿಯು ʼಬಾರ್‌ ಅಂಡ್‌ ಬೆಂಚ್‌ʼಗೆ ದೊರೆತಿದೆ.

ಅರ್ಜಿಯಲ್ಲಿ ಫೆಬ್ರವರಿ 2021 ಮತ್ತು ಫೆಬ್ರವರಿ 2022ರ ನಡುವೆ ಕೇಂದ್ರ ಸರ್ಕಾರವು ಟ್ವಿಟರ್‌ಗೆ ನೀಡಿರುವ ಹತ್ತು ಆದೇಶಗಳಲ್ಲಿ ಸಾರ್ವಜನಿಕರು ಕೆಲವು ಮಾಹಿತಿ ನೋಡದಂತೆ ತಡೆಯಬೇಕು ಮತ್ತು ವಿವಿಧ ಖಾತೆಗಳನ್ನು ಅಮಾನತುಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂಬ ಅಂಶದ ಉಲ್ಲೇಖವಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಹೊರಡಿಸಿದ ನಿರ್ಬಂಧ ಆದೇಶಗಳನ್ನು ಅರ್ಜಿಯಲ್ಲಿ ಅನುಬಂಧ ಎ ಯಿಂದ ಕೆ ಎಂದು ಗುರುತಿಸಿ ಮುಚ್ಚಿದ ಲಕೋಟೆ ಮೂಲಕ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಖಾತೆ ಮಟ್ಟದ ನಿರ್ಬಂಧ ಅಸಮಾನ ಕ್ರಮವಾಗಿದ್ದು ಸಂವಿಧಾನದ ಅಡಿಯಲ್ಲಿ ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಕೇಂದ್ರ ಆಕ್ಷೇಪಿಸಿರುವ ಒಟ್ಟು 1,474 ಖಾತೆಗಳು ಮತ್ತು 175 ಟ್ವೀಟ್‌ಗಳಲ್ಲಿ, ಕೇವಲ 39 ಯುಆರ್‌ಎಲ್‌ ಗಳ ನಿರ್ಬಂಧವನ್ನು ಮಾತ್ರ ಟ್ವಿಟರ್ ಪ್ರಶ್ನಿಸಿದೆ. ಉಳಿದ ಖಾತೆಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ (ಐಟಿ ಕಾಯಿದೆ) ಸೆಕ್ಷನ್ 69 ಎ ಅಡಿಯ ನಿಯಮಾವಳಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಟ್ವಿಟರ್‌ ಹೇಳಿದೆ. (ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮುಂತಾದ ಸಂದರ್ಭಗಳಲ್ಲಿ ಸಮಸ್ಯೆ ಎದುರಾದಾಗ ಟ್ವಿಟರ್‌ನಂತಹ ಮಧ್ಯವರ್ತಿಗಳನ್ನು ನಿರ್ದೇಶಿಸಲು ಸೆಕ್ಷನ್ 69 ಎ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ).

ಕಂಟೆಂಟ್‌ (ವಿಷಯ) ನಿರ್ಬಂಧಿಸದಿದ್ದರೆ ಐಟಿ ಕಾಯಿದೆಯಡಿ ಗಮನಾರ್ಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಜೂನ್ 27ರಂದು ಎಚ್ಚರಿಸಿತ್ತು. ಆದರೆ ಐ ಟಿ ಕಾಯಿದೆಯ ಉಲ್ಲಂಘನೆಯಾಗಿಲ್ಲ ಎಂದು ಟ್ವಿಟರ್‌ ಸರ್ಕಾರಕ್ಕೆ ತಿಳಿಸಿತ್ತು. ಆಗ ನಡೆದ ಸಭೆಯೊಂದರಲ್ಲಿ 10 ಖಾತೆ ಮಟ್ಟದ ಯುಆರ್‌ಎಲ್‌ಗಳನ್ನು ನಿರ್ಬಂಧಿಸುವ ಆದೇಶ ಹಿಂಪಡೆಯುವುದಾಗಿ ಸಚಿವಾಲಯ ಒಪ್ಪಿಕೊಂಡಿತ್ತು. ಬಳಿಕ ಅದು ಟ್ವಿಟರ್‌ ನಿರ್ಬಂಧಿಸಬೇಕಿದ್ದ 27 ಯುಆರ್‌ಎಲ್‌ಗಳ ಹೊಸ ಪಟ್ಟಿಯನ್ನು ಸಹ ಕ:ಳಿಸಿತ್ತು. ಬಳಿಕ ಜೂನ್ 27ರ ಸೂಚನೆಯನ್ನು ಮರುಪರಿಶೀಲಿಸುವುದಾಗಿ ಮತ್ತು ಮುಂದಿನ ಕ್ರಮದ ಬಗ್ಗೆ ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿತ್ತು. ಈ ಮಧ್ಯೆ ನಿರ್ಬಂಧ ಆದೇಶ ಪ್ರಶ್ನಿಸಿ ಟ್ವಿಟರ್‌ ನಿನ್ನೆ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದೆ.

Blocking orders issued by Government
Blocking orders issued by Government

ಟ್ವಿಟರ್‌ ಮನವಿಯ ಪ್ರಮುಖಾಂಶಗಳು

  • ಆದೇಶಗಳು ಮನಸೋ ಇಚ್ಛೆಯಿಂದ ಕೂಡಿದ್ದು ಐಟಿ ಕಾಯಿದೆಯ ಸೆಕ್ಷನ್‌ 69 ಎಗೆ ಅನುಗುಣವಾಗಿಲ್ಲ.

  • ಅಲ್ಲದೆ ಈ ಆದೇಶಗಳು ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪಡೆಯುವುದನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಾವಳಿ- 2009ನ್ನು ಪಾಲಿಸಲು ಕೂಡ ವಿಫಲವಾಗಿವೆ.

  • ಖಾತೆಗಳನ್ನು ಸಂಪೂರ್ಣ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ದೇಶನ ಐಟಿ ಕಾಯಿದೆಯ ಸೆಕ್ಷನ್ 69ಎಗೆ ಹೊರತಾದುದಾಗಿದೆ.

  • ಖಾತೆಯ ಮಟ್ಟದಲ್ಲಿ ನಿರ್ಬಂಧ ಹೇರುವ ಅಗತ್ಯ ಅಥವಾ ತ್ವರಿತ ನಿರ್ಬಂಧ ಏಕೆ ಎಂಬುದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ಖಾತೆ ಮಟ್ಟದ ನಿರ್ಬಂಧ ಅಸಮಾನ ಕ್ರಮವಾಗಿದ್ದು ಸಂವಿಧಾನದ ಅಡಿಯಲ್ಲಿ ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ.

  • ಶ್ರೇಯಾ ಸಿಂಘಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವಂತೆ ನಿರ್ಬಂಧಕ ನಿಯಮಾವಳಿ 8 (1) ಅಡಿಯಲ್ಲಿ ಕಂಟೆಂಟ್‌ ಸೃಷ್ಟಿಸಿದವರಿಗೆ ಸಚಿವಾಲಯ ಸೂಚನೆ ನೀಡಿಲ್ಲ.

  • ಯುಆರ್‌ಎಲ್‌ಗಳನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ಸೆಕ್ಷನ್‌ 69ಎ ಸೀಮಿತ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಕಂಟೆಂಟ್‌ಗಳನ್ನು ಏಕೆ ನಿರ್ಬಂಧಿಸಬೇಕು ಎಂಬ ಬಗ್ಗೆ ಸೂಕ್ತ ಕಾರಣಗಳನ್ನು ಸರ್ಕಾರದ ಆದೇಶಗಳು ನೀಡುವುದಿಲ್ಲ. ಇವುಗಳಲ್ಲಿ ಕೂಡ ಕಾರ್ಯವಿಧಾನ ಸುರಕ್ಷತೆಗಳನ್ನು ಈ ಆದೇಶಗಳು ಪಾಲಿಸಿಲ್ಲ.

  • ಈ ಅಂಶಗಳ ಆಧಾರದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಹತ್ತು ನಿರ್ಬಂಧಕ ಆದೇಶಗಳನ್ನು ರದ್ದುಗೊಳಿಸಬೇಕು.

  • ಬದಲಿಗೆ ಖಾತೆ ಮಟ್ಟದ ನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಆದೇಶಗಳನ್ನು ಮಾರ್ಪಡಿಸಿ ಐಟಿ ಕಾಯಿದೆ ಉಲ್ಲಂಘಿಸುವ ಟ್ವೀಟ್‌ಗಳು ಯಾವುವೆಂದು ನಿರ್ದಿಷ್ಟಪಡಿಸಬೇಕು.

ಪೂವಯ್ಯ ಅಂಡ್‌ ಕಂಪನಿಯ ವಕೀಲ ಮನು ಕುಲಕರ್ಣಿ ಅವರ ಮೂಲಕ ಟ್ವಿಟರ್‌ ಅರ್ಜಿ ಸಲ್ಲಿಸಿದೆ.

Related Stories

No stories found.
Kannada Bar & Bench
kannada.barandbench.com