ಸೌಕರ್ಯ ಇದ್ದ ಮಾತ್ರಕ್ಕೆ ವರ್ಚುವಲ್‌ ವಿಚಾರಣೆಯಲ್ಲಿ ಭಾಗವಹಿಸಲು ವಕೀಲರಿಗೆ ಹಕ್ಕು ಸಿಗಲ್ಲ: ಮಧ್ಯ ಪ್ರದೇಶ ಹೈಕೋರ್ಟ್‌

ಸುಪ್ರೀಂ ಕೋರ್ಟ್‌ ಇ-ಸಮಿತಿಯನ್ನು ದಾವೆಯಲ್ಲಿ ಭಾಗಿದಾರರನ್ನಾಗಿಸಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ಪೀಠವು ಹಿಂದೆ ಅನುಮತಿಸಿತ್ತು.
Virtual Hearing
Virtual Hearing
Published on

ವರ್ಚುವಲ್‌ ವಿಚಾರಣೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿರುವ ಅರ್ಜಿಗಳನ್ನು ಮಧ್ಯ ಪ್ರದೇಶ ಹೈಕೋರ್ಟ್‌ ವಿರೋಧಿಸಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವರ್ಚುವಲ್‌ ರೂಪದಲ್ಲಿ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗುವುದು ಭಾರತ ಸಂವಿಧಾನದ 19(1)(ಎ) ಮತ್ತು (ಜಿ) ಅಡಿ ಮೂಲಭೂತ ಹಕ್ಕು ಎಂದು ಘೋಷಿಸಬೇಕು ಎಂದು ಕೋರಿ ದೇಶದ ವಿವಿಧೆಡೆ ಐದು ಸಾವಿರಕ್ಕೂ ಹೆಚ್ಚು ವಕೀಲರನ್ನು ಒಳಗೊಂಡಿರುವ ಅಖಿಲ ಭಾರತ ನ್ಯಾಯವಾದಿಗಳ ಸಂಸ್ಥೆ, ಪತ್ರಕರ್ತ ಸ್ಪರ್ಶ್‌ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಸುಧಾಂಶು ಧುಲಿಯಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿಗಳಿಗೆ ಆಕ್ಷೇಪಿಸಿರುವ ಮಧ್ಯ ಪ್ರದೇಶ ಹೈಕೋರ್ಟ್‌ “ಭವಿಷ್ಯದಲ್ಲಿ ಅವಶ್ಯಕತೆ ಎದುರಾದರೆ ದಾವೆದಾರರಿಗೆ ನ್ಯಾಯದಾನಕ್ಕೆ ಯಾವುದೇ ಅಡ್ಡಿಯಾಗದಂತೆ ಹಾಲಿ ಇರುವ ಸೌಲಭ್ಯ ಖಾತರಿಪಡಿಸಲಿದೆ. ಮೌಲಸೌಕರ್ಯ ಇದೆ ಎಂದ ಮಾತ್ರಕ್ಕೆ ವಕೀಲರು ವರ್ಚುವಲ್‌ ವಿಧಾನದಲ್ಲಿ ವಿಚಾರಣೆಯಲ್ಲಿ ಭಾಗಿಯಾಗಲು ಸ್ವಯಂಚಾಲಿತವಾಗಿ ಅರ್ಹರು ಎಂದರ್ಥವಲ್ಲ” ಎಂದು ಹೇಳಿದೆ.

ಕೋವಿಡ್‌ ಸಂದರ್ಭದಲ್ಲಿ ವರ್ಚುವಲ್‌ ವಿಚಾರಣೆಗೆ ಅನುಮತಿಸಿದರೂ ಅದನ್ನು ವಕೀಲರು ಭೌತಿಕ ಕಲಾಪದಲ್ಲಿ ಭಾಗವಹಿಸುವುದಕ್ಕೆ ಪರ್ಯಾಯ ಎಂದು ಬಳಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ವಾದಿಸಿದೆ. ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ 100 ಕೋಟಿ ರೂಪಾಯಿ ಸ್ವೀಕರಿಸಲಾಗಿಲ್ಲ. ಅಲ್ಲದೇ, ಅದನ್ನೂ ಸಂಪೂರ್ಣವಾಗಿ ವಿಡಿಯೊ ಕಾನ್ಫರೆನ್ಸ್‌ಗಾಗಿ ವಿನಿಯೋಗಿಸಿಲ್ಲ ಎಂದು ವಿವರಿಸಲಾಗಿದೆ.

“ಮಧ್ಯಪ್ರದೇಶದ ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಮಾಹಿತಿ ತಂತ್ರಜ್ಞಾನ ಸೌಕರ್ಯ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಮತ್ತು ಇ-ಸಮಿತಿ ಅನುದಾನ ನೀಡಿದ್ದು, ಅನುದಾನವನ್ನು ವಿಡಿಯೊ ಕಾನ್ಫರೆನ್ಸ್‌ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಲಾಗಿಲ್ಲ” ಎಂದು ಪ್ರತಿಕ್ರಿಯೆಯಲ್ಲಿ ವಿವರಿಸಲಾಗಿದೆ.

“ನ್ಯಾಯದಾನ ನಿರಾಕರಿಸಲಾಗಿದೆ ಎಂದು ಯಾವೊಬ್ಬ ದಾವೆದಾರರು ಹೈಕೋರ್ಟ್‌ ಕದ ತಟ್ಟಿಲ್ಲ. ವಿವಿಧ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರು ಅರ್ಜಿ ಸಲ್ಲಿಸಿದ್ದು, ಬೇರೆ ನ್ಯಾಯಾಲಯಗಳಲ್ಲಿ ವಾದ ಮಂಡಿಸಲು ಹೈಬ್ರಿಡ್‌ ವಿಧಾನದಲ್ಲಿ ಕಲಾಪದಲ್ಲಿ ಭಾಗವಹಿಸಲು ಅನುಮತಿ ಕೋರಿದ್ದಾರೆ” ಎಂದು ಹೇಳುವ ಮೂಲಕ ಅರ್ಜಿದಾರರ ಅಂಗೀಕೃತ ಸ್ಥಾನವನ್ನು ಹೈಕೋರ್ಟ್‌ ಪ್ರಶ್ನಿಸುವ ಯತ್ನ ಮಾಡಿದೆ.

ಹೈಕೋರ್ಟ್‌ನ ಇದೇ ನಿಲುವನ್ನು ಕೇಂದ್ರ ಸರ್ಕಾರವು ತನ್ನ ಆಕ್ಷೇಪಣೆಯಲ್ಲಿ ತಳೆದಿದೆ. “ಅರ್ಜಿ ಸಲ್ಲಿಸಿರುವ ಎಲ್ಲಾ ವಕೀಲರು ವಿಭಿನ್ನ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದು, ಬೇರೆ ನ್ಯಾಯಾಲಯಲ್ಲಿ ವಾದ ಮಂಡಿಸಲು ಹೈಬ್ರಿಡ್‌ ವಿಧಾನಕ್ಕೆ ಅನುಮತಿ ಕೋರುತ್ತಿದ್ದಾರೆ. ವರ್ಚುವಲ್‌ ವ್ಯವಸ್ಥೆಯ ಮೂಲಕ ಬೇರೆ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲು ಅವಕಾಶ ಕೋರುವುದು ವಕೀಲರಿಗೆ ಅನುಕೂಲಕ್ಕಾಗಿ ಮತ್ತು ಇದನ್ನು ಮೂಲಭೂತ ಹಕ್ಕು ಅಷ್ಟೇ ಅಲ್ಲ ಕಾನೂನಾತ್ಮಕ ಹಕ್ಕು ಎಂದು ವ್ಯಾಖ್ಯಾನಿಸಲಾಗದು” ಎಂದರು.

ಉತ್ತರಾಖಂಡ, ಬಾಂಬೆ, ಮಧ್ಯಪ್ರದೇಶ ಮತ್ತು ಕೇರಳ ಹೈಕೋರ್ಟ್‌ಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ವರ್ಚುವಲ್‌ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಸುಪ್ರೀಂ ಕೋರ್ಟ್‌ ಇ-ಸಮಿತಿಯನ್ನು ದಾವೆಯಲ್ಲಿ ಭಾಗಿದಾರರನ್ನಾಗಿಸಲು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಕೋರಿದ್ದರು. ಇದಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿಸಿತ್ತು.

Kannada Bar & Bench
kannada.barandbench.com