ಜನಪ್ರತಿನಿಧಿಗಳ ವಿರುದ್ಧದ ಪ್ರಕರಣ: ಪ್ರತ್ಯೇಕ ನ್ಯಾಯಾಲಯದ ಕುರಿತಾಗಿ ಸರ್ಕಾರವನ್ನು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್

ಸದರಿ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯದ ಅವಶ್ಯಕತೆ ಇದೆ ಎಂದು ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದ್ದಾರೆ.
Karnataka High Court
Karnataka High Court
Published on

ಶಾಸಕರು ಮತ್ತು ಸಂಸದರ ವಿರುದ್ಧ ಬಾಕಿ ಇರುವ ಪ್ರಕರಣಗಳ ತುರ್ತು ವಿಲೇವಾರಿ ನಡೆಸಲು ಪ್ರತ್ಯೇಕ ವಿಶೇಷ ನ್ಯಾಯಾಲಯದ ಅಗತ್ಯತೆಯ ಬಗ್ಗೆ ಮಂಗಳವಾರ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಪ್ರಶ್ನಿಸಿದೆ.

ಅಮಿಕಸ್ ಕ್ಯೂರಿ ಹಾಗೂ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅವರು ಪ್ರತ್ಯೇಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದ ಅವಶ್ಯಕತೆ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇಲಿನ ಪ್ರಶ್ನೆಯನ್ನು ರಾಜ್ಯ ಸರ್ಕಾರಕ್ಕೆ ಹಾಕಿತು

“ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬಹುದಾದ ಪ್ರಕರಣಗಳನ್ನು ಇತರೆ ಪ್ರಕರಣಗಳೊಂದಿಗೆ ತಳುಕು ಹಾಕಿ ಅವುಗಳನ್ನು ವಿಶೇಷ ಸೆಷನ್ಸ್ ನ್ಯಾಯಾಲಯದ ಮುಂದಿಟ್ಟಿರುವುದು ಮೊದಲ ಕಾರಣವಾಗಿದೆ. ಇದನ್ನು ಹೊರತುಪಡಿಸಿ ಸೆಕ್ಷನ್ 193ರ ಅಡಿ ಅಪರಾಧವು ಮ್ಯಾಜಿಸ್ಟ್ರೇಟ್ ಮುಂದೆ ಮೊದಲು ವಿಚಾರಣೆಯಾಗಬೇಕು. ಇದಕ್ಕೂ ಪ್ರತ್ಯೇಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೃಷ್ಟಿಸುವುದು ಅಗತ್ಯವಾಗಿದ್ದು, ಸೆಷನ್ಸ್ ಅಪರಾಧಗಳಿಗೂ ನ್ಯಾಯಾಲಯ ಅಗತ್ಯವಿದೆ…” ಎಂದು ಸೋಂಧಿ ನ್ಯಾಯಾಲಯದ ಗಮನಸೆಳೆದರು.

ಸೋಂಧಿ ಅವರ ಪ್ರತಿಪಾದನೆಯನ್ನು ಒಪ್ಪಿದ ನ್ಯಾಯಪೀಠವು “ಇದೊಂದು ಅತ್ಯಂತ ಪ್ರಮುಖ ಅಂಶವಾಗಿದೆ. ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅಗತ್ಯವಿದ್ದು, ಅಪರಾಧದ ಆದೇಶಗಳನ್ನು ಹೊರಡಿಸಬಹುದು” ಎಂದಿತು. ವಿಚಾರಣೆಯ ಸಂದರ್ಭದಲ್ಲಿ ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ಸಂರಕ್ಷಣೆ ಯೋಜನೆಯೂ ಅಗತ್ಯವಿದೆ ಎಂದೂ ನ್ಯಾಯಪೀಠ ಹೇಳಿತು.

ಯೋಜನೆಯ ಕಾರ್ಯನಿರ್ವಹಣೆಯ ಬಗ್ಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರನ್ನು ಪ್ರಶ್ನಿಸಿದಾಗ ಅವರು ಇದುವರೆಗೆ ಗಮನಾರ್ಹವಾದ ರೀತಿಯಲ್ಲಿ ಸಾಕ್ಷ್ಯ ಸಂರಕ್ಷಣೆ ಯೋಜನೆ ಕಾರ್ಯಗತವಾಗಿಲ್ಲ ಎಂದರು.

“ವಿಶೇಷ ನ್ಯಾಯಾಲಯದ ಮುಂದಿರುವ ಪ್ರಕರಣಗಳ ಸ್ವರೂಪದ ಬಗ್ಗೆ ನಮಗೆ ತಿಳಿದಿಲ್ಲ. ಅಲ್ಲಿ ಸೂಕ್ಷ್ಮ ಪ್ರಕರಣಗಳಿದ್ದರೆ ಸಾಕ್ಷ್ಯ ಸಂರಕ್ಷಣಾ ಯೋಜನೆ ಜಾರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಯೋಜನೆ ಕಾರ್ಯಗತವಾಗಿದೆಯೇ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ” ಎಂದು ನ್ಯಾಯಪೀಠ ಹೇಳಿತು.

ನ್ಯಾಯಾಲಯದಲ್ಲಿ ಸಾಕ್ಷ್ಯಗಳ ಉಪಸ್ಥಿತಿಯ ಜವಾಬ್ದಾರಿಯನ್ನು ಒಬ್ಬ ನೋಡಲ್ ಅಧಿಕಾರಿಗೆ ವಹಿಸಬೇಕು. ಸಾಕ್ಷಿಗಳೆಲ್ಲರೂ ಮಾರ್ಗಸೂಚಿ ನಿಯಮಗಳ ಅನ್ವಯ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ (ಆರ್‌ಎಟಿ) ಒಳಪಟ್ಟಿರುವಂತೆ ನೋಡಲ್ ಅಧಿಕಾರಿ ನೋಡಿಕೊಂಡಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Also Read
ಜನಪ್ರತಿನಿಧಿಗಳ ಒತ್ತಡದಿಂದಾಗಿ ಪೊಲೀಸರು ಕೆಲವೊಮ್ಮೆ ಕಾನೂನು ಜಾರಿಗೊಳಿಸುವುದಿಲ್ಲ ಎಂಬುದು ಗೊತ್ತು: ಸುಪ್ರೀಂಕೋರ್ಟ್

ಇದೆಲ್ಲದರ ಆಚೆಗೆ ನ್ಯಾಯಪೀಠವು ಸರ್ಕಾರೇತರ ಸಂಸ್ಥೆಯಾದ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಅನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಲು ನಿರಾಕರಿಸಿತು. ಅಮಿಕಸ್ ಕ್ಯೂರಿ ಅವರಿಗೆ ಎಡಿಆರ್ ಸಲಹೆ ನೀಡಬಹುದು ಎಂದು ನ್ಯಾಯಪೀಠ ಹೇಳಿದ್ದು, ಅಕ್ಟೋಬರ್ 22ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.

ಜನಪ್ರತಿನಿಧಿಗಳ ವಿರುದ್ಧ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಹೈಕೋರ್ಟ್‌ ಗಳ ಮುಖ್ಯ ನ್ಯಾಯಮೂರ್ತಿಗಳು ಕಾರ್ಯ ಯೋಜನೆ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ರಿಜಿಸ್ಟ್ರಾರ್ ಜನರಲ್ ಅವರಿಗೆ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು.

Kannada Bar & Bench
kannada.barandbench.com