ರಾಜ್ಯದ ನದಿ ವಿವಾದ ಪರಿಹಾರಕ್ಕೆ ಕಾನೂನು ಸಲಹಾ ಸಮಿತಿ ರಚಿಸಲು ಸಿಎಂಗೆ ತಜ್ಞರ ಸಲಹೆ

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮೂರು ಮಹತ್ವದ ಸಲಹೆಗಳನ್ನು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರು ಸರ್ಕಾರಕ್ಕೆ ನೀಡಿದ್ದಾರೆ.
CM Greets former SC chief Justice M N Venkatachaliah
CM Greets former SC chief Justice M N Venkatachaliah

ಕಾವೇರಿ ಸೇರಿದಂತೆ ರಾಜ್ಯದ ಎಲ್ಲಾ ನದಿ ವಿವಾದಗಳಿಗೆ ಸಂಬಂಧಿಸಿದಂತೆ ಕಾನೂನು ಸಲಹಾ ಸಮಿತಿ ರಚಿಸುವಂತೆ ರಾಜ್ಯದ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮೂರು ಮಹತ್ವದ ಸಲಹೆಗಳನ್ನು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರು ಸರ್ಕಾರಕ್ಕೆ ನೀಡಿದ್ದಾರೆ.

ಮೂರು ಸಾವಿರ ಕ್ಯೂಸೆಕ್ಸ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಎಂಎ) ಮಾಡಿರುವ ಆದೇಶ ಪ್ರಶ್ನಿಸಿ ಸಿಡಬ್ಲುಎಂಎ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣ ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ಮೇಕೆದಾಟು ಯೋಜನೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಮರ್ಥವಾಗಿ ಕಾನೂನು ಹೋರಾಟ ನಡೆಸಬೇಕು ಎಂದೂ ಸಲಹೆ ನೀಡಿದ್ದಾರೆ.

ರಾಜ್ಯದ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಪರಿಣಿತರ ಸಲಹಾ ಸಮಿತಿ ರಚಿಸಿ, ದತ್ತಾಂಶ ಸಂಗ್ರಹ, ಸಲಹೆ ನೀಡುವ ಕಾರ್ಯವನ್ನು ಮಾಡಬೇಕು. ಅಂತರರಾಜ್ಯ ಜಲವಿವಾದಗಳ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆ, ಕಾನೂನು ತಂಡಕ್ಕೆ ಮಾಹಿತಿ ನೀಡಲುಸಮಿತಿ ಅಗತ್ಯ ಎನ್ನುವ ಸಲಹೆ ನೀಡಿದ್ದಾರೆ. ಈ ಸಲಹೆಗಳನ್ನು ಶೀಘ್ರದಲ್ಲೇ ಜಾರಿ ಮಾಡಲು ಕ್ರಮವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎನ್ನಲಾಗಿದೆ.

ನಿವೃತ್ತ ನ್ಯಾಯಮೂರ್ತಿ, ಮಾಜಿ ಅಡ್ವೊಕೇಟ್‌ ಜನರಲ್‌ ಅಥವಾ ಕಾನೂನು ತಜ್ಞರು ಕಾನೂನು ಸಲಹಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.

ನೀರು ಹರಿಸದಿರುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ ಹಾಕಬಹುದು ಎಂಬ ಕುರಿತೂ ಚರ್ಚೆಯಾಗಿದೆ. ನೀರಿಲ್ಲದಿರುವುದರಿಂದ ಆದೇಶ ಪಾಲನೆ ಮಾಡಲಾಗಿಲ್ಲ. ಹೀಗಾಗಿ, ಉದ್ದೇಶಪೂರ್ವಕವಾಗಿ ಆದೇಶ ಉಲ್ಲಂಘಿಸುತ್ತಿಲ್ಲ. ಆದ್ದರಿಂದ ನ್ಯಾಯಾಂಗ ನಿಂದನೆ ಪ್ರಶ್ನೆ ಉದ್ಭವಿಸುವುದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ್, ವಿ ಗೋಪಾಲಗೌಡ, ಆರ್ ವಿ ರವೀಂದ್ರನ್, ನಿವೃತ್ತ ಲೋಕಾಯುಕ್ತರಾದ ಪಿ ವಿಶ್ವನಾಥ ಶೆಟ್ಟಿ, ಹೈಕೋರ್ಟ್‌ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲಗೌಡ, ಕಾನೂನು ಸಚಿವರಾದ ಸಚಿವ ಎಚ್ ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೊಕೇಟ್ ಜನರಲ್‌ಗಳಾದ ಬಿ ವಿ ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ ರವಿವರ್ಮಕುಮಾರ್, ಪ್ರಭುಲಿಂಗ ನಾವದಗಿ ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com