ಮಾಲ್ ಆಫ್ ಏಷ್ಯಾ ಪ್ರಕರಣ: ಸಂಚಾರ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಲ್‌ನಿಂದ ಹೈಕೋರ್ಟ್‌ಗೆ ವಿವರಣೆ

ದ್ವಿಚಕ್ರ ವಾಹನಗಳ ಪ್ರವೇಶ ಶುಲ್ಕ ಕಡಿತಗೊಳಿಸಲು ಸೂಚಿಸಲಾಗಿದೆ. ಕ್ಯಾಬ್, ಆಟೋಗಳ ಪಿಕಪ್, ಡ್ರಾಪ್ ಪಾಯಿಂಟ್ ಬದಲಾವಣೆ ಮಾಡಲಾಗಿದೆ. ಮಾಲ್‌ನ ಉದ್ಯೋಗಿಗಳ ವಾಹನ ಪಾರ್ಕಿಂಗ್‌ಗೆ ರಿಯಾಯಿತಿ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಣೆ.
High Court of Karnataka
High Court of Karnataka

ಸಂಚಾರ ದಟ್ಟಣೆಗೆ ಕಾರಣವಾಗುವ ಮೂಲಕ ಸಾರ್ವಜನಿಕರ ಪ್ರವೇಶದ ನಿರ್ಬಂಧದ ಭೀತಿ ಎದುರಿಸಿದ್ದ ಮಾಲ್ ಆಫ್ ಏಷ್ಯಾವು ಸಮಸ್ಯೆಗಳನ್ನು ಬಗೆಹರಿಸಲು ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿತು.

ಡಿಸೆಂಬರ್‌ 31ರಿಂದ ಜನವರಿ 15ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸ್ಪಾರ್ಕಲ್ ಒನ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಆಗ ಅರ್ಜಿದಾರರ ಪರ ವಕೀಲರು, ದ್ವಿಚಕ್ರ ವಾಹನಗಳ ಪ್ರವೇಶ ಶುಲ್ಕ ಕಡಿತಗೊಳಿಸಲು ಸೂಚಿಸಲಾಗಿದೆ. ಕ್ಯಾಬ್, ಆಟೋಗಳ ಪಿಕಪ್, ಡ್ರಾಪ್ ಪಾಯಿಂಟ್ ಬದಲಾವಣೆ ಮಾಡಲಾಗಿದೆ. ಮಾಲ್‌ನ ಉದ್ಯೋಗಿಗಳ ವಾಹನ ಪಾರ್ಕಿಂಗ್‌ಗೆ ರಿಯಾಯಿತಿ ಪಾಸ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಭದ್ರತಾ ಪರಿಶೀಲನಾ ಪಾಯಿಂಟ್ ಬದಲಾವಣೆ ಮಾಡಿ ಪ್ರೀಪೇಯ್ಡ್ ಆಟೋ ನಿಲ್ದಾಣ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

Also Read
ಟ್ರಾಫಿಕ್ ಸಮಸ್ಯೆ: ಮುಂದಿನ ವಿಚಾರಣೆಯವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ

ಈ ವೇಳೆ ನ್ಯಾಯಾಲಯವು ಪರಿಹಾರ ಕ್ರಮಗಳ ಜಾರಿ ಬಗ್ಗೆ ಜನವರಿ 30ಕ್ಕೆ ವಿವರವಾದ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೇ, ಅಲ್ಲಿಯವರೆಗೆ ಮಾಲ್ ಆಫ್ ಏಷ್ಯಾ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ನಗರ ಪೊಲೀಸ್ ಆಯುಕ್ತರಿಗೆ ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ವಿಸ್ತರಿಸಿತು.

ಕಳೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು “ನ್ಯಾಯಾಲಯದ ಸೂಚನೆಯಂತೆ ಮಾಲ್ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆದಿದೆ. ಮಾಲ್ ಪ್ರತಿನಿಧಿಗಳು ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದಾರೆ. ಪೊಲೀಸ್ ಆಯುಕ್ತರು ಮಾಲ್‌ಗೆ ಭೇಟಿ ನೀಡಿ, ಶಬ್ದ ಮಾಲಿನ್ಯ, ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ” ಎಂದು ವಿವರಿಸಿದ್ದರು.

Kannada Bar & Bench
kannada.barandbench.com